ದೇಶ
LATEST ಏಪ್ರಿಲ್ 1ರಿಂದ ದೇಶಾದ್ಯಂತ ಇ20 ಪೆಟ್ರೋಲ್ ಕಡ್ಡಾಯ: ಕೇಂದ್ರ ಸರ್ಕಾರ ಮಹತ್ವದ ಆದೇಶ
ನವದೆಹಲಿ
ಏಪ್ರಿಲ್ 1ರಿಂದ ದೇಶದಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್ಗಳು ಕಡ್ಡಾಯವಾಗಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ20) ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಫೆಬ್ರವರಿ 17ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಅಧಿಸೂಚನೆಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಹಾಗೂ RON 95 (ರಿಸರ್ಚ್ ಆಕ್ಟೇನ್ ನಂಬರ್) ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಬೇಕು.
RON 95 ಏಕೆ ಮುಖ್ಯ?
RON ಎನ್ನುವುದು ಎಂಜಿನ್ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಮಾನದಂಡ. ಎಥೆನಾಲ್ ಸ್ವಾಭಾವಿಕವಾಗಿ ಸುಮಾರು 108 RON ಆಕ್ಟೇನ್ ರೇಟಿಂಗ್ ಹೊಂದಿರುವುದರಿಂದ, ಅದನ್ನು ಪೆಟ್ರೋಲ್ಗೆ ಮಿಶ್ರಣ ಮಾಡುವಾಗ ಎಂಜಿನ್ ಸುರಕ್ಷತೆ ಮಹತ್ವ ಪಡೆದುಕೊಳ್ಳುತ್ತದೆ. ಈ ಕಾರಣಕ್ಕೆ ಸರ್ಕಾರ RON 95 ಹೊಂದಿರುವ ಇ20 ಪೆಟ್ರೋಲ್ಗೆ ಅನುಮತಿ ನೀಡಿದೆ. ಇದು ಉನ್ನತ ಕಾರ್ಯಕ್ಷಮತೆಯ ಆಧುನಿಕ ಎಂಜಿನ್ಗಳಿಗೆ ಸೂಕ್ತವಾಗಿದ್ದು, ಕಾರ್ಬನ್ ಮಾನಾಕ್ಸೈಡ್ ಹಾಗೂ ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 30–44% ವರೆಗೆ ಕಡಿಮೆ ಮಾಡುತ್ತದೆ.
ಇ20 ಪೆಟ್ರೋಲ್ ಎಂದರೇನು?
20% ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಣವಿರುವ ಇಂಧನವನ್ನು ಇ20 ಎಂದು ಕರೆಯಲಾಗುತ್ತದೆ. ಕಬ್ಬು, ಜೋಳ ಮತ್ತು ಹೆಚ್ಚುವರಿ ಧಾನ್ಯಗಳಿಂದ ತಯಾರಿಸಲಾದ ಜೈವಿಕ ಇಂಧನವೇ ಎಥೆನಾಲ್. 2003ರಲ್ಲಿ ಭಾರತದಲ್ಲಿ ಇ5 ಇಂಧನ ಬಳಕೆ ಆರಂಭವಾದರೆ, 2022ರಲ್ಲಿ ಇ10 ಗುರಿ ತಲುಪಿದೆ. ಈಗ ದೇಶಾದ್ಯಂತ ಇ20 ಇಂಧನ ಜಾರಿಗೆ ಬಂದಿದೆ.
ಜಾಗತಿಕ ಅನುಭವ
ಎಥೆನಾಲ್ ಬಳಕೆಯನ್ನು ಮೊದಲಾಗಿ 1990ರ ದಶಕದಲ್ಲಿ ಅಮೆರಿಕ ಪರಿಚಯಿಸಿತು. ಪ್ರಸ್ತುತ ಅಲ್ಲಿ ಇ10 ಬಳಕೆಯಲ್ಲಿದೆ. ಬ್ರೆಜಿಲ್ನಲ್ಲಿ ಇ27, ಫ್ರಾನ್ಸ್ನಲ್ಲಿ ಇ10, ಜರ್ಮನಿನಲ್ಲಿ ಇ5 ಹಾಗೂ ಸ್ವೀಡನ್ನಲ್ಲಿ ಇ85 ಇಂಧನ ಬಳಕೆಯಲ್ಲಿದೆ.
ಭಾರತಕ್ಕೆ ಏನು ಲಾಭ?
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಯುಮಾಲಿನ್ಯ ಕಡಿಮೆಯಾಗುತ್ತದೆ. ನೀತಿ ಆಯೋಗ ಅಧ್ಯಯನದ ಪ್ರಕಾರ, ಕಬ್ಬು ಆಧಾರಿತ ಎಥೆನಾಲ್ ಬಳಕೆಯಿಂದ ಹಸಿರುಮನೆ ಅನಿಲ ಹೊರಸೂಸುವಿಕೆ ಪೆಟ್ರೋಲ್ಗಿಂತ 65% ಕಡಿಮೆಯಾಗಿದೆ. ಜೊತೆಗೆ, ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 1.44 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ.