ಬೆಂಗಳೂರಿನಲ್ಲಿ ಇಂಡಿಗೋ ಬಿಕ್ಕಟ್ಟು ತೀವ್ರ: 60 ವಿಮಾನ ಹಾರಾಟ ರದ್ದು | Hosa Suddi

ದೇಶ

ಬೆಂಗಳೂರಿನಲ್ಲಿ ಇಂಡಿಗೋ ಬಿಕ್ಕಟ್ಟು ತೀವ್ರ: 60 ವಿಮಾನ ಹಾರಾಟ ರದ್ದು

Published

on

ಬೆಂಗಳೂರು: ಇಂಡಿಗೋ ಬಿಕ್ಕಟ್ಟು ಇಂದು ಕೂಡ ತಗ್ಗುವ ಲಕ್ಷಣ ಕಾಣಿಸಿಕೊಳ್ಳದೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 60 ವಿಮಾನಗಳ ಹಾರಾಟ ರದ್ದಾಗಿದೆ. ಹೊರಡಬೇಕಿದ್ದ 28 ಹಾಗೂ ಬರಬೇಕಿದ್ದ 32 ವಿಮಾನಗಳು ರದ್ದಾದ ಹಿನ್ನೆಲೆ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಬೆಂಗಳೂರು ಮಾತ್ರವಲ್ಲ, ಚೆನ್ನೈ ಹಾಗೂ ಅಹಮದಾಬಾದ್ ಸೇರಿದಂತೆ ಇತರ ನಗರಗಳಲ್ಲಿಯೂ ಹಾರಾಟ ರದ್ದಾದ ಘಟನೆಗಳು ವರದಿಯಾಗಿವೆ.

ಈ ನಡುವೆ ಸಂಸ್ಥೆಯಲ್ಲಿನ ನಿರಂತರ ಕಾರ್ಯಾಚರಣೆ ಅಡಚಣೆ ಕುರಿತು ಡಿಜಿಸಿಎ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ನೋಟಿಸ್ ಜಾರಿ ಮಾಡಿ, ಸಂಪೂರ್ಣ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಬುಧವಾರ ಒಂದೇ ದಿನ ದೆಹಲಿಯಲ್ಲಿ 137, ದೇಶದಾದ್ಯಂತ 220 ವಿಮಾನ ಹಾರಾಟಗಳು ರದ್ದಾಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇಂಡಿಗೋ ಮುಖ್ಯಸ್ಥ ವಿಕ್ರಮ್ ಮೆಹ್ತಾ ಅವರು, “ಮೊದಲ ಬಾರಿಗೆ 10 ದಿನಗಳ ಕಾಲ ನಿರಂತರ ಕಾರ್ಯಾಚರಣೆ ಬಿಕ್ಕಟ್ಟು ಎದುರಾಗಿದೆ. ಸಣ್ಣ ತಾಂತ್ರಿಕ ದೋಷಗಳು, ಹವಾಮಾನ ಸಮಸ್ಯೆ, ವಾಯುಯಾನ ದಟ್ಟಣೆ ಹಾಗೂ ರೋಸ್ಟರಿಂಗ್ ನಿಯಮ ಬದಲಾವಣೆಗಳು ಒಟ್ಟಾಗಿ ಹಾರಾಟಗಳ ಮೇಲೆ ಪರಿಣಾಮ ಬೀರಿವೆ” ಎಂದು ತಿಳಿಸಿದ್ದಾರೆ.

ಇದರ ಮಧ್ಯೆ, ಡಿಜಿಸಿಎಗೆ ಇಂಡಿಗೋ ನೀಡಿದ ವರದಿಯಲ್ಲಿ ಎಫ್‌ಡಿಟಿಎಲ್ ಮಾನದಂಡ ಬದಲಾವಣೆಗಳಿಂದ ಸಿಬ್ಬಂದಿ ಅಗತ್ಯ 3% ಹೆಚ್ಚಳ ಅಗತ್ಯವಿದೆ ಎಂದು ಹೇಳಿದ್ದರೂ, ಕಳೆದ 9 ತಿಂಗಳಲ್ಲಿ ಸಂಸ್ಥೆಯು ತನ್ನ ಪೈಲಟ್‌ಗಳ ಸಂಖ್ಯೆಯನ್ನು 378ರಷ್ಟು ಕಡಿಮೆ ಮಾಡಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ದಾಖಲೆಗಳ ಪ್ರಕಾರ, 2025 ಮಾರ್ಚ್ ವೇಳೆಗೆ ಇಂಡಿಗೋ 5,463 ಪೈಲಟ್‌ಗಳನ್ನು ಹೊಂದಿತ್ತು ಎಂದು ಸಂಸತ್ತಿಗೆ ತಿಳಿಸಲಾಗಿತ್ತು. ಆದರೆ ಡಿಸೆಂಬರ್ 8ರಂದು ನೀಡಿದ ಹೊಸ ಮಾಹಿತಿಯ ಪ್ರಕಾರ, ಸಂಸ್ಥೆಯಲ್ಲಿ ಕೇವಲ 5,085 ಪೈಲಟ್‌ಗಳು ಇದ್ದಾರೆ.

Trending

Exit mobile version