ಇಂಡಿಗೋ ಬಿಕ್ಕಟ್ಟು ನಿಯಂತ್ರಣದಲ್ಲಿ: 610 ಕೋಟಿ ರಿಫಂಡ್, ವಿಮಾನ ಸಂಚಾರ ವೇಗ! | Hosa Suddi

ದೇಶ

ಇಂಡಿಗೋ ಬಿಕ್ಕಟ್ಟು ನಿಯಂತ್ರಣದಲ್ಲಿ: 610 ಕೋಟಿ ರಿಫಂಡ್, ವಿಮಾನ ಸಂಚಾರ ವೇಗ!

Published

on

ದೆಹಲಿಃ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕಳೆದ ಕೆಲವು ದಿನಗಳಿಂದ ಎದುರಿಸುತ್ತಿದ್ದ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆಯಿಂದ ಉಂಟಾದ ಭಾರೀ ಕಾರ್ಯಾಚರಣೆ ಬಿಕ್ಕಟ್ಟು ಈಗ ಬಹುತೇಕ ನಿವಾರಣೆಯ ಹಂತಕ್ಕೆ ಬಂದಿದೆ. ನೂರಾರು ವಿಮಾನ ರದ್ದು, ಸಾವಿರಾರು ಪ್ರಯಾಣಿಕರ ಅಸಹನೆ—ಎಲ್ಲವೂ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

610 ಕೋಟಿ ರೂ. ರಿಫಂಡ್ ಪೂರ್ಣಗೊಂಡಿದೆ:
ರದ್ದಾದ ವಿಮಾನಗಳ ಟಿಕೆಟ್‌ಗಳಿಗೆ ಇಂಡಿಗೋ ಈಗಾಗಲೇ 610 ಕೋಟಿ ರೂ.ಕ್ಕೂ ಹೆಚ್ಚು ಮೊತ್ತ ಮರುಪಾವತಿ ಮಾಡಿದೆ. ಭಾನುವಾರ ಸಂಜೆಯೊಳಗೆ ಎಲ್ಲಾ ರಿಫಂಡ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮರುಬುಕಿಂಗ್ ವೇಳೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದಿರಲು ಭರವಸೆ ನೀಡಲಾಗಿದೆ.

3,000ಕ್ಕೂ ಹೆಚ್ಚು ಕಳೆದುಹೋದ ಬ್ಯಾಗ್‌ಗಳ ವಿತರಣೆ:
ಸಚಿವಾಲಯ ನೀಡಿದ 48 ಗಂಟೆಗಳ ಗಡಿ ಅವಧಿಯೊಳಗೆ 3 ಸಾವಿರಕ್ಕೂ ಹೆಚ್ಚು ಕಳೆದು ಹೋದ ಬ್ಯಾಗ್‌ಗಳನ್ನು ಪ್ರಯಾಣಿಕರಿಗೆ ತಲುಪಿಸಲಾಗಿದೆ. ಉಳಿದ ಸಾಮಾನುಗಳ ವಿತರಣೆಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ.

ವಿಮಾನ ಸಂಚಾರದಲ್ಲಿ ಭಾರೀ ಜಿಗಿತ:

  • ಶುಕ್ರವಾರ: 706 ವಿಮಾನಗಳು
  • ಶನಿವಾರ: 1,565 ವಿಮಾನಗಳು (ದುಪ್ಪಟ್ಟಿಗಿಂತ ಹೆಚ್ಚಳ!)
  • ಸೋಮವಾರ: ಇನ್ನಷ್ಟು ಏರಿಕೆ ನಿರೀಕ್ಷೆ

ಇಂಡಿಗೋ ಸಾಮಾನ್ಯವಾಗಿ ಪ್ರತಿದಿನ 2,300ಕ್ಕೂ ಹೆಚ್ಚು ವಿಮಾನಗಳನ್ನು ನಡೆಸುತ್ತದೆ. ಕಾರ್ಯಾಚರಣೆಗಳು ಈಗ ವೇಗವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತಿವೆ ಎಂದು ಸಚಿವಾಲಯ ತಿಳಿಸಿದ್ದಾರೆ.

ದೆಹಲಿ–ಮುಂಬೈ–ಬೆಂಗಳೂರು ಸೇರಿ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನಾರ್ಮಲ್ ಪರಿಸ್ಥಿತಿ:
ಚೆಕ್-ಇನ್, ಭದ್ರತೆ, ಬೋರ್ಡಿಂಗ್ ಪಾಯಿಂಟ್‌ಗಳಲ್ಲಿ ಯಾವುದೇ ದಟ್ಟಣೆ ಇಲ್ಲ ಎಂದು ವಿಮಾನ ನಿಲ್ದಾಣಗಳ ನಿರ್ದೇಶಕರು ತಿಳಿಸಿದ್ದಾರೆ. 24×7 ಕಂಟ್ರೋಲ್ ರೂಮ್ ಮೂಲಕ ಪ್ರಯಾಣಿಕರ ಅಹವಾಲುಗಳನ್ನು ಪರಿಹರಿಸಲಾಗುತ್ತಿದೆ.

ಟಿಕೆಟ್ ದರದಲ್ಲಿ ಏರಿಕೆಗೆ ಬ್ರೇಕ್:
ಬಿಕ್ಕಟ್ಟಿನ ಸಂದರ್ಭ ಟಿಕೆಟ್ ದರ ಗಗನಕ್ಕೇರಿದ್ದರೂ, ಸಚಿವಾಲಯ ದರ ಮಿತಿ ವಿಧಿಸಿದ್ದು ಪ್ರಯಾಣಿಕರಿಗೆ ಭಾರೀ ನಿವಾರಣೆ ಸಿಕ್ಕಿದೆ.

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, “ಪ್ರಯಾಣಿಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ. ಇಂಡಿಗೋ ಸಂಪೂರ್ಣ ಸಹಕಾರ ನೀಡುತ್ತಿದೆ” ಎಂದಿದ್ದಾರೆ.
ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಹೇಳುವಂತೆ, “ಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ಪ್ರಯಾಣಿಕರಿಗೆ ಕ್ಷಮೆಯಾಚಿಸುತ್ತೇವೆ” ಎಂದು ತಿಳಿಸಿದ್ದಾರೆ.

ಒಟ್ಟಾರೆ, ಇಂಡಿಗೋ ಬಿಕ್ಕಟ್ಟು ದಿನಗಳೇ ಉಳಿದಿದ್ದು, ಪ್ರಯಾಣಿಕರು ಈಗ ನಿರಾಳವಾಗಿ ಟಿಕೆಟ್ ಬುಕ್ ಮಾಡಬಹುದು.

Trending

Exit mobile version