ದೇಶ
ಒಂದೇ ದಿನ 550 ವಿಮಾನ ರದ್ದು: ಇಂಡಿಗೋ ದೊಡ್ಡ ಹೇಳಿಕೆ
ನವದೆಹಲಿ: ಕಳೆದ ಎರಡು ದಿನಗಳಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟಗಳಲ್ಲಿ ಭಾರೀ ಅಡಚಣೆಯನ್ನು ಎದುರಿಸುತ್ತಿರುವ ಇಂಡಿಗೋ ಏರ್ಲೈನ್ಸ್, ಇದರಿಂದ ತೊಂದರೆ ಅನುಭವಿಸಿದ ಗ್ರಾಹಕರು ಹಾಗೂ ಉದ್ಯಮ ಪಾಲುದಾರರಿಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ.
ದಿನಕ್ಕೆ ಸರಾಸರಿ 170–200 ವಿಮಾನಗಳು ರದ್ದಾಗುತ್ತಿರುವ ಪರಿಸ್ಥಿತಿ ದೇಶದ ಹಲವಾರು ವಿಮಾನ ನಿಲ್ದಾಣಗಳಲ್ಲಿ ಗೊಂದಲ ಉಂಟುಮಾಡಿದೆ. ಹಠಾತ್ ರದ್ದತಿ ಮತ್ತು ಪರ್ಯಾಯ ವ್ಯವಸ್ಥೆಯ ಕೊರತೆಯಿಂದ ಪ್ರಯಾಣಿಕರಲ್ಲಿ ಆಕ್ರೋಶ ಹೆಚ್ಚಾಗಿದೆ.
ಸಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿದ ಇಂಡಿಗೋ, “ಈ ಸಂದರ್ಭ ನಾವು ಮನಃಪೂರ್ವಕ ಕ್ಷಮೆ ಯಾಚಿಸುತ್ತೇವೆ. ಡಿಜಿಸಿಎ, ಬಿಸಿಎಸಿ, ಎಎಐ ಸಹಕಾರದೊಂದಿಗೆ ಸಾಮಾನ್ಯ ಕಾರ್ಯಾಚರಣೆಗೆ ನಾವು ಶ್ರಮಿಸುತ್ತಿದ್ದೇವೆ” ಎಂದು ತಿಳಿಸಿದೆ.
ಸಂಸ್ಥೆ ಮುಂದಿನ ಪ್ರಯಾಣಗಳಿಗೆ ಸಂಬಂಧಿಸಿದ ವೇಳಾಪಟ್ಟಿ ಬದಲಾವಣೆಗಳ ಬಗ್ಗೆ ಮುಂಚಿತ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ. ಜೊತೆಗೆ, ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಸಂಸ್ಥೆಯ ವೆಬ್ಸೈಟ್ನಲ್ಲಿ ಇತ್ತೀಚಿನ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದೆ.
ಇಂಡಿಗೋ ಪ್ರಕಟಣೆಯಲ್ಲಿ, “ಈ ರದ್ದತಿಗಳಿಂದ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಕಾರ್ಯಾಚರಣೆಯನ್ನು ಬೇಗ ಸ್ಥಿರಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದಿದೆ.
ಫೆಬ್ರವರಿಯಲ್ಲಿ ಸಾಮಾನ್ಯ ಸ್ಥಿತಿ ಮರಳಿ
ಇಂಡಿಗೋ ಪ್ರಕಾರ, ಇತ್ತೀಚಿನ ಸಮಸ್ಯೆಗೆ ಎರಡನೇ ಹಂತದ ಎಫ್ಡಿಟಿಎಲ್ (Flight Duty Time Limit) ಮಾನದಂಡಗಳ ಅನುಷ್ಠಾನದ ಯೋಜನಾ ದೋಷ ಕಾರಣವಾಗಿದೆ. ಈ ಸಮಸ್ಯೆಯನ್ನು 2026ರ ಫೆಬ್ರವರಿ 10ರೊಳಗೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದೆ.
ಗುರುವಾರ ಮಾತ್ರವೇ 550ಕ್ಕೂ ಹೆಚ್ಚು ದೇಶೀಯ–ಅಂತಾರಾಷ್ಟ್ರೀಯ ವಿಮಾನಗಳು ರದ್ದುಗೊಂಡಿದ್ದು, ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸೇವೆಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ.