ಜನಾರ್ದನ ರೆಡ್ಡಿ ಮನೆ ಮುಂದೆ ಶೂಟೌಟ್ ಪ್ರಕರಣ: ಆಂಧ್ರ–ತೆಲಂಗಾಣ ಲಿಂಕ್ ಶಂಕೆ, 3 ದಿನಗಳಲ್ಲಿ ವರದಿ ಸಲ್ಲಿಸಲು ಐಜಿಪಿಗೆ ಸೂಚನೆ | Hosa Suddi

ಅಪರಾಧ

ಜನಾರ್ದನ ರೆಡ್ಡಿ ಮನೆ ಮುಂದೆ ಶೂಟೌಟ್ ಪ್ರಕರಣ: ಆಂಧ್ರ–ತೆಲಂಗಾಣ ಲಿಂಕ್ ಶಂಕೆ, 3 ದಿನಗಳಲ್ಲಿ ವರದಿ ಸಲ್ಲಿಸಲು ಐಜಿಪಿಗೆ ಸೂಚನೆ

Published

on

ಬಳ್ಳಾರಿ: ಬಳ್ಳಾರಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ನಡೆದ ಶೂಟೌಟ್ ಹಾಗೂ ಗಲಭೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಗಂಭೀರ ಪ್ರಕರಣದ ಬಗ್ಗೆ ಮೂರು ದಿನಗಳೊಳಗೆ ಸಂಪೂರ್ಣ ತನಿಖಾ ವರದಿ ಸಲ್ಲಿಸುವಂತೆ ನೂತನ ಐಜಿಪಿ ಹರ್ಷ ಗುಪ್ತಾ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರು ಸಿಸಿಟಿವಿ ಹಾಗೂ ಮೊಬೈಲ್‌ನಲ್ಲಿ ಸೆರೆಯಾಗಿರುವ ಗಲಭೆಯ ವಿಡಿಯೋಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅನೇಕ ವ್ಯಕ್ತಿಗಳು ಬಳ್ಳಾರಿಯವರಲ್ಲ ಎಂಬ ಅನುಮಾನ ವ್ಯಕ್ತವಾಗಿದ್ದು, ಅವರು ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬಂದಿರಬಹುದೆಂಬ ಶಂಕೆ ಬಲವಾಗಿದೆ.

ವಿಡಿಯೋಗಳಲ್ಲಿ ಕಾಣಿಸುವ ವ್ಯಕ್ತಿಗಳ ಗುರುತಿಗಾಗಿ ಪೊಲೀಸರು ಸ್ಥಳೀಯರಿಗೆ ದೃಶ್ಯಗಳನ್ನು ತೋರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಸ್ಥಳೀಯರು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಕಳುಹಿಸಲಾಗಿದೆ.

ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 15 ದಿನಗಳ ಮೊಬೈಲ್ ಟವರ್ ಲೊಕೇಶನ್ ಡೇಟಾವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ದಿನ ಸ್ಥಳದ ಸುತ್ತಮುತ್ತ ಇದ್ದ ಮೊಬೈಲ್ ಸಂಖ್ಯೆಗಳ ಚಲನವಲನದ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಗಲಭೆ ವೇಳೆ ಬಳಸಲಾಗಿದೆ ಎನ್ನಲಾದ ದೊಣ್ಣೆಗಳು, ಗನ್ ಬಳಕೆಯ ಶೈಲಿ, ಕಲ್ಲುಗಳು ಹಾಗೂ ಖಾರದ ಪುಡಿ ಎಲ್ಲವೂ ಒಂದೇ ರೀತಿಯಲ್ಲಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವುಗಳನ್ನು ತಕ್ಷಣವೇ ಸಂಗ್ರಹಿಸಿದ್ದರೋ ಅಥವಾ ಪೂರ್ವಯೋಜನೆಯಂತೆ ತಂದು ಬಳಸಲಾಗಿತ್ತೇ ಎಂಬುದನ್ನು ತಿಳಿಯಲು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ ತಾಂತ್ರಿಕ ವಿಶ್ಲೇಷಣೆ ಆರಂಭಿಸಲಾಗಿದೆ.

ರಾಜಕೀಯವಾಗಿ ಸೂಕ್ಷ್ಮವಾದ ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Trending

Exit mobile version