Connect with us

ಅಪರಾಧ

ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಮಹಿಳಾ ಘಟಕ: ಭಾರತದಲ್ಲಿ ಆತ್ಮಹತ್ಯಾ ದಾಳಿಗೆ ಆನ್‌ಲೈನ್ ತರಬೇತಿ!

Published

on

ಬೆಂಗಳೂರು: ಪಾಕಿಸ್ತಾನದ ಕುಖ್ಯಾತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ (JeM) ಭಾರತವನ್ನು ಗುರಿಯಾಗಿಸಿದ ಭಯೋತ್ಪಾದಕ ತಂತ್ರವನ್ನು ರೂಪಿಸಿದೆ. ಇಸ್ಲಾಮಾಬಾದ್‌ನಿಂದ ಬಂದಿರುವ ಗುಪ್ತಚರ ವರದಿಗಳ ಪ್ರಕಾರ, ಸಂಘಟನೆ ತನ್ನ ಮಹಿಳಾ ಘಟಕ ‘ಜಮಾತ್ ಉಲ್ ಮುಮಿನಾತ್’ ಸ್ಥಾಪಿಸಿದ್ದು, ನವೆಂಬರ್ 9, 2025 ರಿಂದ ಸದಸ್ಯರಿಗೆ ಆನ್‌ಲೈನ್ ತರಬೇತಿಯನ್ನು ನೀಡಲು ಮುಂದಾಗಿದೆ.

ಈ ತರಬೇತಿ ‘ತುಫತ್ ಅಲ್ ಮುಮಿನಾತ್’ ಕೋರ್ಸ್‌ನಡಿಯಲ್ಲಿ ನಡೆಯಲಿದ್ದು, ಭಾರತದ ಮೇಲೆ ಆತ್ಮಹತ್ಯಾ ದಾಳಿಗಳನ್ನು ನಡೆಸಲು ಮಹಿಳೆಯರನ್ನು ಸಜ್ಜುಗೊಳಿಸುವ ಉದ್ದೇಶವನ್ನು ಹೊಂದಿದೆ. ಕೋರ್ಸ್‌ನಲ್ಲಿ ಜಿಹಾದ್, ಧಾರ್ಮಿಕ ತತ್ವಗಳು, ಶಸ್ತ್ರಾಸ್ತ್ರ ಬಳಕೆ, ಸ್ಫೋಟಕ ತಯಾರಿ ಮತ್ತು ಗುಪ್ತ ಕಾರ್ಯಾಚರಣೆಗಳು ಬಗ್ಗೆ ಪಾಠ ನೀಡಲಾಗುತ್ತದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದಾರೆ.

ಜೈಷ್ ಸ್ಥಾಪಕ ಮಸೂದ್ ಅಜರ್ ಅವರ ಇಬ್ಬರು ಸೋದರಿಯರು ಸಾದಿಯಾ ಮತ್ತು ಸಮೈರಾ ತರಗತಿಗಳನ್ನು ನಡೆಸಲಿದ್ದಾರೆ. ಭಾಗವಹಿಸಲು ಇಚ್ಛಿಸುವ ಮಹಿಳೆಯರಿಗೆ 500 ಪಾಕಿಸ್ತಾನಿ ರೂಪಾಯಿಗಳ ದೇಣಿಗೆಯನ್ನು ನಿಗದಿಪಡಿಸಲಾಗಿದೆ.

ಭಾರತದ ಭದ್ರತಾ ಸಂಸ್ಥೆಗಳು, ರಾ (RAW) ಮತ್ತು ಇಂಟೆಲಿಜೆನ್ಸ್ ಬ್ಯೂರೋ (IB), ಈ ಆನ್‌ಲೈನ್ ತರಬೇತಿ ಬಗ್ಗೆ ತೀವ್ರ ಗಮನ ಹರಿಸುತ್ತಿವೆ. ಸೈಬರ್ ಘಟಕಗಳು ಈ ತರಬೇತಿಯನ್ನು ತಡೆಯಲು ಕಾರ್ಯಾಚರಣೆ ಆರಂಭಿಸಿರುವುದಾಗಿ ವರದಿ. ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ, ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ಸಿದ್ಧತೆ ನಡೆಸುತ್ತಿದೆ.

ಜೈಷ್-ಎ-ಮೊಹಮ್ಮದ್ ಈಗಾಗಲೇ 2009 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ಹಲವು ಭಯೋತ್ಪಾದಕ ಘಟನೆಗಳಿಗೆ ಕಾರಣವಾಗಿದೆ. ಈ ಹೊಸ ಮಹಿಳಾ ಘಟಕದ ಆರಂಭವು ಭಾರತದ ಭದ್ರತಾ ವ್ಯವಸ್ಥೆಗೆ ಗಂಭೀರ ಸವಾಲು ಎಬ್ಬಿಸಿದೆ.

ದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ

Published

on

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.

ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Continue Reading

ಅಪರಾಧ

ಮುಂಬೈನಲ್ಲಿ ಹೈ ಅಲರ್ಟ್! ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ಚುರುಕು

Published

on

ಮುಂಬೈ: ನವಿ ಮುಂಬೈನಲ್ಲಿರುವ ಖ್ಯಾತ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆ ನಿಯೋಜಿಸಿದ್ದಾರೆ. ತಡರಾತ್ರಿ ನವಿ ಮುಂಬೈ ಪೊಲೀಸ್ ಠಾಣೆಗೆ ಬಂದ ಅಪರಿಚಿತ ದೂರವಾಣಿ ಕರೆಯಲ್ಲಿ, ದಾವೂದ್ ಇಬ್ರಾಹಿಂ ಹೆಸರನ್ನು ಉಲ್ಲೇಖಿಸಿ ಹೋಟೆಲ್‌ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಿ ಕರೆ ಕಡಿತಗೊಳಿಸಲಾಗಿತ್ತು.

ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹೋಟೆಲ್ ಆಡಳಿತಕ್ಕೆ ಮಾಹಿತಿ ನೀಡಿ, ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿದರು. ಬಳಿಕ ಬಾಂಬ್ ಪತ್ತೆ ದಳವು ಹೋಟೆಲ್‌ನ ಕೊಠಡಿಗಳು, ಸ್ವಿಮ್ಮಿಂಗ್ ಪೂಲ್, ಬ್ಯಾಂಕ್ವೆಟ್ ಹಾಲ್‌ಗಳು, ರೆಸ್ಟೋರಂಟ್‌ಗಳು ಹಾಗೂ ಪಾರ್ಕಿಂಗ್ ಪ್ರದೇಶ ಸೇರಿದಂತೆ ಎಲ್ಲೆಡೆ ತೀವ್ರ ಶೋಧ ಕಾರ್ಯ ನಡೆಸಿತು.

ಆದರೆ ಸುದೀರ್ಘ ತಪಾಸಣೆಯ ಬಳಿಕ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಕರೆ ಆಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೋಟೆಲ್‌ನಲ್ಲಿ ಭದ್ರತೆಯನ್ನು ಮುಂದುವರಿಸಲಾಗಿದೆ.

ಇನ್ನೊಂದೆಡೆ, ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈ ಕರೆ ನವಿ ಮುಂಬೈನ ತುರ್ಭೆ ಪ್ರದೇಶದಿಂದ ಬಂದಿರುವ ಸಾಧ್ಯತೆ ಇದೆ. ಸ್ಥಳೀಯ ಪೊಲೀಸರು ಕರೆ ಮಾಡಿದ ವ್ಯಕ್ತಿಯ ಗುರುತು ಪತ್ತೆಹಚ್ಚಲು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಅಧಿಕಾರಿಗಳು ಈ ಹಂತದಲ್ಲಿ ಯಾವುದೇ ಉಗ್ರ ಸಂಚು ಅಥವಾ ದಾಳಿಯ ಕುರಿತು ಅಧಿಕೃತ ದೃಢೀಕರಣ ನೀಡಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Continue Reading

ಅಪರಾಧ

ಮಟನ್ ಬದಲು ಚಿಕನ್ ಬಡಿಸಿದ ಪರಿಣಾಮ! ಮದುವೆ ಮನೆಯಲ್ಲಿ ಭೀಕರ ಗಲಾಟೆ

Published

on

ಬಿಹಾರ: ಬಿಹಾರದಲ್ಲಿ ಮದುವೆ ಸಮಾರಂಭಗಳ ವೇಳೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆಗಳು ನಡೆಯುವುದು ಹೊಸದಲ್ಲ. ಇದೀಗ ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರದಲ್ಲಿ ನಡೆದ ಮದುವೆ ಸಮಾರಂಭವೊಂದು ಊಟದ ಮೆನು ಬದಲಾವಣೆಯಿಂದ ರಣರಂಗವಾಗಿ ಮಾರ್ಪಟ್ಟಿದೆ. ಮಟನ್ (ಕುರಿಮರಿ ಮಾಂಸ) ಬಡಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದ ಅತಿಥಿಗಳಿಗೆ ಚಿಕನ್ (ಕೋಳಿ ಮಾಂಸ) ಬಡಿಸಿದ ಕಾರಣ ವಧು ಹಾಗೂ ವರನ ಕಡೆಯವರ ನಡುವೆ ತೀವ್ರ ಘರ್ಷಣೆ ನಡೆದಿದೆ.

ಗುರುವಾರ (ಜುಲೈ 9) ರಾತ್ರಿ ನಡೆದ ಈ ಘಟನೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಅತಿಥಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ ಅದು ಹೊಡೆದಾಟಕ್ಕೆ ತಿರುಗಿದೆ. ಪರಿಸ್ಥಿತಿ ಕೈಮೀರಿದ ಪರಿಣಾಮ ಉಭಯ ಕಡೆಯ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವರದಿಗಳ ಪ್ರಕಾರ, ಸಿಮ್ರಿ ಭಕ್ತಿಯಾರ್ಪುರದ ನಿವಾಸಿ ಮೊಹಮ್ಮದ್ ಅನ್ವರ್ ಅವರ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅವರ ವಿವಾಹವು ರಾಜನ್‌ಪುರದ ನಿವಾಸಿ ಮೊಹಮ್ಮದ್ ಜಾವಿದ್ ಅಲಿಯಾಸ್ ಮೋಟೋ ಅವರ ಪುತ್ರಿಯೊಂದಿಗೆ ನಡೆಯುತ್ತಿತ್ತು. ವಿವಾಹ ವಿಧಿವಿಧಾನಗಳು ಸುಸೂತ್ರವಾಗಿ ಪೂರ್ಣಗೊಂಡಿದ್ದರೂ, ಊಟ ಆರಂಭವಾಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ.

ವರನ ಕಡೆಯವರು, ಮದುವೆ ಮೆನುವಿನಲ್ಲಿ ಮಟನ್ ನೀಡಲಾಗುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ ಊಟದ ವೇಳೆ ಚಿಕನ್ ಬಡಿಸಿದ್ದರಿಂದ ಅಸಮಾಧಾನ ಉಂಟಾಯಿತು ಎಂದು ಆರೋಪಿಸಿದ್ದಾರೆ. ಇದೇ ವೇಳೆ ವರನ ಚಿಕ್ಕಪ್ಪ ಮೊಹಮ್ಮದ್ ಇರ್ಫಾನ್ ಮಾತನಾಡಿ, ಆಹಾರದ ವಿಚಾರದಲ್ಲಿ ಪ್ರಶ್ನಿಸಿದ ತಕ್ಷಣ ವಧುವಿನ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಘಟನೆಯ ತೀವ್ರತೆಯನ್ನು ಅರಿತ ಹಿರಿಯರು ಹಾಗೂ ಸ್ಥಳೀಯ ಗಣ್ಯರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆಸಿದರು. ಬಳಿಕ ವಿವಾದವನ್ನು ಸ್ಥಳದಲ್ಲೇ ಬಗೆಹರಿಸಿ ಮದುವೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Continue Reading

Trending