ದೇಶ
ಕರ್ನಾಟಕ ಶಾಸಕರಿಗೆ ಲಕ್ಸುರಿ ಲೈಫ್… IPL ಟಿಕೆಟ್ ಮಾತ್ರ ಫ್ರೀ ಬೇಕಾ?
ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿರುವ ವೇಳೆ, ಶಾಸಕರಿಗೆ ಐಪಿಎಲ್ ಪಂದ್ಯಗಳಿಗೆ ಉಚಿತ ವಿಐಪಿ ಟಿಕೆಟ್ ನೀಡಬೇಕೆಂಬ ಬೇಡಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೊನೆಗೂ ಈ ಬೇಡಿಕೆಯಲ್ಲಿ ಶಾಸಕರು ಯಶಸ್ವಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
2025ರ ವೇತನ ಪರಿಷ್ಕರಣೆಯ ಬಳಿಕ ಕರ್ನಾಟಕದ ಶಾಸಕರ ಸಂಬಳ ಶೇ.100ರಷ್ಟು ಏರಿಕೆಯಾಗಿದೆ. ಒಬ್ಬ ಶಾಸಕ ಅಥವಾ ಎಂಎಲ್‌ಸಿ ಎಲ್ಲಾ ಭತ್ಯೆಗಳೊಂದಿಗೆ ತಿಂಗಳಿಗೆ ಸರಾಸರಿ ₹2.05 ಲಕ್ಷ ಪಡೆಯುತ್ತಾರೆ. ಸಚಿವರ ಮೂಲ ವೇತನ ₹1.25 ಲಕ್ಷವಾಗಿದ್ದರೆ, ಮುಖ್ಯಮಂತ್ರಿಯ ವೇತನ ₹1.5 ಲಕ್ಷವಾಗಿದೆ.
ಮನೆ ಬಾಡಿಗೆ ಭತ್ಯೆಯೂ ಗಮನಾರ್ಹವಾಗಿದೆ. ಬೆಂಗಳೂರಿನಲ್ಲಿ ಸರ್ಕಾರಿ ವಸತಿ ಇಲ್ಲದ ಸಚಿವರಿಗೆ ತಿಂಗಳಿಗೆ ₹2.5 ಲಕ್ಷವರೆಗೆ ಬಾಡಿಗೆ ಭತ್ಯೆ ನೀಡಲಾಗುತ್ತಿದೆ. ಇದಲ್ಲದೆ, ರೈಲು ಹಾಗೂ ಬಸ್‌ಗಳಲ್ಲಿ ಉಚಿತ ಪ್ರಯಾಣದ ಜೊತೆಗೆ ವರ್ಷಕ್ಕೆ ₹5 ಲಕ್ಷವರೆಗೆ ವಿಮಾನ ಅಥವಾ ರೈಲು ಪ್ರಯಾಣ ಭತ್ಯೆ ಸಿಗುತ್ತದೆ.
ಆರೋಗ್ಯ ಸೌಲಭ್ಯಗಳಲ್ಲಿಯೂ ವಿಶೇಷ ಸೌಲಭ್ಯಗಳಿವೆ. ಹಲ್ಲು ಚಿಕಿತ್ಸೆಗೆ ₹50,000, ರೂಟ್ ಕೆನಾಲ್‌ಗೆ ₹10,000, ಶ್ರವಣ ಸಾಧನಗಳಿಗೆ ₹1 ಲಕ್ಷವರೆಗೆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪ್ರತಿ ಶಾಸಕರಿಗೆ ಸಹಾಯಕರು, ಚಾಲಕರು ಹಾಗೂ ಕಚೇರಿ ಸಿಬ್ಬಂದಿಯನ್ನು ಸರ್ಕಾರವೇ ಒದಗಿಸುತ್ತದೆ.
ನಿವೃತ್ತಿಯಾದ ಬಳಿಕವೂ ಶಾಸಕರಿಗೆ ₹75,000ರಿಂದ ₹1 ಲಕ್ಷವರೆಗೆ ಮಾಸಿಕ ಪಿಂಚಣಿ ಲಭ್ಯವಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ, ಐಪಿಎಲ್ ಪಂದ್ಯಗಳಿಗೆ ₹2,800 ಟಿಕೆಟ್ ಖರೀದಿಸಲು ಹಿಂಜರಿದು ಉಚಿತ ಟಿಕೆಟ್ ಬೇಡಿಕೆ ಇಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಇಂತಹ ಬೇಡಿಕೆ ಇಡುವುದು ಸರಿಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.