ರಾಜ್ಯ
ರಾಜ್ಯಾದ್ಯಂತ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಚಾಲನೆ: ಆ್ಯಪ್ ತಾಂತ್ರಿಕ ದೋಷದಿಂದ ಮೊದಲ ದಿನ ಗೊಂದಲ
ಶಿವಮೊಗ್ಗ: ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಆದರೆ, ಮೊದಲ ದಿನವೇ ಗಣತಿದಾರರು ತಾಂತ್ರಿಕ ತೊಂದರೆಗಳನ್ನು ಎದುರಿಸಬೇಕಾಯಿತು.
ಅಪ್ಲಿಕೇಶನ್ ಡೌನ್‌ಲೋಡ್, ಲಾಗಿನ್ ಸಮಸ್ಯೆ, ಸರ್ವರ್ ಸ್ಲೋ ಆಗಿರುವುದರಿಂದ ಹಾಗೂ ಆ್ಯಪ್ ಬಳಕೆಯ ತಿಳುವಳಿಕೆ ಕೊರತೆಯಿಂದ ಕೆಲ ಗಣತಿದಾರರು ಗೊಂದಲಕ್ಕೆ ಒಳಗಾಗಿದ್ದರು. ಕೆಲ ಕಾಲದ ನಂತರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಬ್ಬಂದಿ ಬೆಂಬಲ ದೊರೆತಿತು.
ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಅವರು, “ಪ್ರಾರಂಭದ ದಿನವಿದೆ, ಸಹಜವಾಗಿಯೇ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳು ಕಂಡು ಬಂದಿವೆ. 2-3 ದಿನಗಳಲ್ಲಿ ಸಮೀಕ್ಷಾ ಪ್ರಕ್ರಿಯೆ ಸರಾಗವಾಗಲಿದೆ” ಎಂದು ತಿಳಿಸಿದ್ದಾರೆ.
ಪ್ರತಿ ಕುಟುಂಬದಲ್ಲಿ 61 ಪ್ರಶ್ನೆಗಳು ಇದ್ದು, ಇದರಲ್ಲಿ 41 ವ್ಯಕ್ತಿಗು ಮತ್ತು 20 ಕುಟುಂಬಕ್ಕೆ ಸಂಬಂಧಪಟ್ಟಿವೆ. ಒಂದು ಕುಟುಂಬದ ಸಮೀಕ್ಷೆಗೆ ಸರಾಸರಿ 2-3 ಗಂಟೆ ಬೇಕಾಗುತ್ತದೆ. ದಿನಕ್ಕೆ ಕನಿಷ್ಟ 5-6 ಕುಟುಂಬಗಳ ಸಮೀಕ್ಷೆ ಮಾಡುವ ಗುರಿ ನಿಗದಿಪಡಿಸಲಾಗಿದೆ. ಆದರೆ ದಸರಾ ರಜೆ ಕಾರಣದಿಂದ ಗಣತಿದಾರರು 4-5 ದಿನಗಳ ಹೆಚ್ಚುವರಿ ಅವಧಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರು ಬಿಇಒ ಕಚೇರಿಗೆ ಆಗಮಿಸಿ ಸಮೀಕ್ಷೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, “ತಾಂತ್ರಿಕ ಸಮಸ್ಯೆಗಳಿವೆ ಅಂದರೆ, ಮೋದಿ ಅವರೇನು ಅಪ್ಲಿಕೇಶನ್ ಓಪನ್ ಮಾಡ್ತಾರಾ?” ಎಂದು ವ್ಯಂಗ್ಯವಾಣಿ ಮಾಡಿದ್ದಾರೆ.
ಕಲಬುರಗಿ, ಹುಬ್ಬಳ್ಳಿ ಸೇರಿ ಅನೇಕ ಜಿಲ್ಲೆಗಳಲ್ಲಿ ಅಪ್ಲಿಕೇಶನ್ ಸಮಸ್ಯೆ, ಮನೆ ಹಂಚಿಕೆ, ಮತ್ತು ಶಿಕ್ಷಕರ ಪಾಲನೆ ಸಮಸ್ಯೆಗಳು ದಾಖಲಾಗಿವೆ. ಆದರೂ ಪ್ರಕ್ರಿಯೆ ಮುಂದುವರಿಯುತ್ತಿದೆ.