“ಕಬ್ಬಿಗೆ ಬೆಲೆ ಸಿಗದಿದ್ದರೆ ಹೆದ್ದಾರಿ ಬಂದ್!” – ರೈತ ನಾಯಕ ಶಶಿಕಾಂತ ಗುರೂಜಿ ಎಚ್ಚರಿಕೆ | Hosa Suddi

ದೇಶ

“ಕಬ್ಬಿಗೆ ಬೆಲೆ ಸಿಗದಿದ್ದರೆ ಹೆದ್ದಾರಿ ಬಂದ್!” – ರೈತ ನಾಯಕ ಶಶಿಕಾಂತ ಗುರೂಜಿ ಎಚ್ಚರಿಕೆ

Published

on

ಚಿಕ್ಕೋಡಿ (ಬೆಳಗಾವಿ): ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಕಬ್ಬು ಬೆಳೆಗಾರರು ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಈ ಹಿನ್ನೆಲೆ ಸರ್ಕಾರ ಮಾತುಕತೆ ಮುಂದಾಗಿದ್ದು, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಬುಧವಾರ ರೈತರೊಂದಿಗೆ ಸಭೆ ನಡೆಸಿದರು. ಆದರೆ ಯಾವುದೇ ಸಂಧಾನ ಸಾಧ್ಯವಾಗದೆ ಸಭೆ ಫಲಹೀನವಾಗಿದೆ.

Hosa Suddi ಜೊತೆ ಮಾತನಾಡಿದ ರೈತ ಮುಖಂಡ ಶಶಿಕಾಂತ ಗುರೂಜಿ ಅವರು, “ಕಳೆದ ಏಳು ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸಚಿವರು ಇಂದು ಬೆಲೆ ನಿಗದಿಪಡಿಸುತ್ತಾರೆ ಎಂದು ನಿರೀಕ್ಷಿಸಿದ್ದೇವೆ. ಆದರೆ ಅವರು ‘ನಾನು ಬೆಲೆ ನಿಗದಿಪಡಿಸುವುದಿಲ್ಲ, ಮುಖ್ಯಮಂತ್ರಿಗೆ ಮಾಹಿತಿ ನೀಡುತ್ತೇನೆ’ ಎಂದರು. ಆದ್ದರಿಂದ ನಾವು ಸರ್ಕಾರಕ್ಕೆ ಗುರುವಾರ ರಾತ್ರಿ 8 ಗಂಟೆಯವರೆಗೆ ಕಾಲಾವಕಾಶ ನೀಡಿದ್ದೇವೆ. ಸೂಕ್ತ ದರ ನೀಡದಿದ್ದರೆ ನವೆಂಬರ್ 7ರಂದು ಕರ್ನಾಟಕದಾದ್ಯಂತ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದೇವೆ,” ಎಂದರು.

ಇದೇ ವೇಳೆ ಹುಲಜಂತಿ ಮಾಳಿಂಗರಾಯ ದೇವಸ್ಥಾನದ ಮಠಾಧೀಶ ಮಾಳಿಂಗರಾಯ ಮಹಾರಾಯರು ಕೂಡ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ರೈತರಿಲ್ಲದೆ ಮಠಗಳೇ ಇರಲಾರವು. ಸರ್ಕಾರ ತಕ್ಷಣ ರೈತರ ಬೇಡಿಕೆ ಈಡೇರಿಸಬೇಕು,” ಎಂದು ಅವರು ಕರೆ ನೀಡಿದರು.

ರಾಜ್ಯದಲ್ಲಿ ಅತ್ಯಧಿಕ ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆ ಇದೀಗ ಹೋರಾಟದ ಕೇಂದ್ರವಾಗಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಅಹೋರಾತ್ರಿ ಧರಣಿ ಮುಂದುವರಿಸುತ್ತಿದ್ದು, ಪ್ರತಿ ಟನ್‌ಗೆ ₹3,500 ದರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ಭಾನುವಾರ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ರೈತರ ಜೊತೆ ಮಾತುಕತೆ ನಡೆಸಿದರೂ, ಸಂಧಾನ ವಿಫಲವಾಗಿದೆ.

ಕಬ್ಬು ಬೆಲೆ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಾದ್ಯಂತ ಹೋರಾಟ ವಿಸ್ತರಿಸುವ ಸಾಧ್ಯತೆ ಇದೆ.

Trending

Exit mobile version