ಅಪರಾಧ
ಕೆಂಗೇರಿ ಮುನೀಶ್ವರ ದೇಗುಲ ರಸ್ತೆಯಲ್ಲಿ ಕಿಡಿಗೇಡಿಗಳ ಹಾವಳಿ: ನಾಗರಿಕರಿಗೆ ನಿತ್ಯ ನರ
ಬೆಂಗಳೂರು ಕೆಂಗೇರಿ ವ್ಯಾಪ್ತಿಯ ಬೆಂಗಳೂರು ಆಸ್ಪತ್ರೆಯ ಹಿಂಭಾಗದಲ್ಲಿರುವ ಮುನೀಶ್ವರ ದೇಗುಲ ರಸ್ತೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪೊಲೀ ಪಟಾಲಂಗಳ ಗುಂಪು ಈ ರಸ್ತೆಯನ್ನು ತಮ್ಮ ಮೋಜು–ಮಸ್ತಿಯ ತಾಣವನ್ನಾಗಿ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಸ್ಥಳದಲ್ಲಿ ಪ್ರತಿದಿನವೂ ಹಲವು ಕುಡಕರು ಸೇರಿ ಹಗಲು ಹೊತ್ತಿನಲ್ಲೇ ಮದ್ಯಪಾನ ಹಾಗೂ ಗಾಂಜಾ ಸೇವನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದಷ್ಟೇ ಅಲ್ಲದೆ, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದ್ದು, ನಾಗರಿಕರು ಭಯಭೀತ ಸ್ಥಿತಿಯಲ್ಲಿ ಬದುಕುವಂತಾಗಿದೆ.
ಕೊಂಚ ಜನವಿರಳ ಪ್ರದೇಶವಾಗಿರುವ ಕಾರಣ, ಮಹಿಳೆಯರು ಹಾಗೂ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಜೆ ನಂತರದಿಂದ ತಡರಾತ್ರಿವರೆಗೂ ಕಿಡಿಗೇಡಿಗಳ ಆಟಾಟೋಪ ಮುಂದುವರಿಯುತ್ತಿದ್ದು, ಶಾಂತಿ ಮತ್ತು ಸುರಕ್ಷತೆ ಸಂಪೂರ್ಣವಾಗಿ ಹದಗೆಟ್ಟಿದೆ ಎನ್ನಲಾಗಿದೆ.
ಈ ಕುರಿತು ಸ್ಥಳೀಯರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಬಂದ ತಕ್ಷಣ ಕಿಡಿಗೇಡಿಗಳು ಸ್ಥಳದಿಂದ ಓಡಿಹೋಗುತ್ತಿದ್ದು, ಪೊಲೀಸರು ಹಿಂತಿರುಗಿದ ಬಳಿಕ ಮತ್ತೆ ತಮ್ಮ ಆರ್ಭಟ ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಿಡಿಗೇಡಿಗಳ ಅಟ್ಟಹಾಸದಿಂದ ಬೇಸತ್ತ ಸ್ಥಳೀಯರು ಇದೀಗ ಸಾಮೂಹಿಕವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.