ದೇಶ
ಕೆಪಿಸಿಸಿ ಕಚೇರಿಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಯೂತ್ ಕಾಂಗ್ರೆಸ್ ಗಲಾಟೆ
ಬೆಂಗಳೂರು: Indian Youth Congress ರಾಜ್ಯ ಉಪಾಧ್ಯಕ್ಷೆ Deepika Reddy ಸೇರಿದಂತೆ 15 ಪದಾಧಿಕಾರಿಗಳನ್ನು ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಿದ ಬೆನ್ನಲ್ಲೇ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎರಡು ಗುಂಪುಗಳ ಬೆಂಬಲಿಗರ ನಡುವೆ ಭಾರೀ ಗಲಾಟೆ ನಡೆದಿದೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯಕಾರಿ ಸಭೆಯ ವೇಳೆ ಈ ಗೊಂದಲ ಉಂಟಾಗಿದೆ. ಹುದ್ದೆಯಿಂದ ಏಕಾಏಕಿ ಬಿಡುಗಡೆಗೊಳಿಸಿರುವ ಕ್ರಮವನ್ನು ಖಂಡಿಸಿದ ಪದಾಧಿಕಾರಿಗಳ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ವೇಳೆ ವಾಗ್ವಾದ ತೀವ್ರಗೊಂಡು ಕಾರ್ಯಕರ್ತರು ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ Manjunath Gowda ವಿರುದ್ಧ ಕಿಡಿಕಾರಿದ ಬೆಂಬಲಿಗರು, ಯಾವುದೇ ನೋಟಿಸ್ ನೀಡದೆ ಅಮಾನತು ಮಾಡಿರುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಇದೇ ವೇಳೆ ಮಂಜುನಾಥ ಗೌಡ ಮತ್ತು ನಿಗಂ ಭಂಡಾರಿ ಅವರಿಗೆ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ಕೂಡ ನಡೆಯಿತು.
ಮೇ 21ರಂದು ನಡೆಯಲಿರುವ NEET ಅಕ್ರಮ ವಿರೋಧಿ ಪ್ರತಿಭಟನೆ ಹಾಗೂ ಮುಂದಿನ ಕಾರ್ಯಯೋಜನೆ ರೂಪಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಆದರೆ ಸಭೆ ಆರಂಭವಾಗುತ್ತಿದ್ದಂತೆ ಅಮಾನತುಗೊಂಡ ಪದಾಧಿಕಾರಿಗಳ ವಿಚಾರವೇ ತೀವ್ರ ಚರ್ಚೆಗೆ ಕಾರಣವಾಯಿತು.
ಪಕ್ಷದ ಸಂಘಟನಾ ಚಟುವಟಿಕೆಯಲ್ಲಿ ನಿಷ್ಕ್ರಿಯತೆ ಮತ್ತು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕತ್ವ ಈ ಶಿಸ್ತು ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಅಮಾನತುಗೊಂಡವರ ಪಟ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ ಎಂಟು ಪ್ರಧಾನ ಕಾರ್ಯದರ್ಶಿಗಳು ಮತ್ತು ಹಲವು ರಾಜ್ಯ ಕಾರ್ಯದರ್ಶಿಗಳು ಸೇರಿದ್ದಾರೆ.
ಈ ಬೆಳವಣಿಗೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯೂತ್ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹೆಚ್ಚಿನ ಸುದ್ದಿಗಳಿಗಾಗಿ Hosa Suddi Kannada News Portal ಓದಿ.