ದೇಶ
ತುರ್ತು ಲ್ಯಾಂಡಿಂಗ್ ವೇಳೆ ಕಟ್ಟಡಕ್ಕೆ ಡಿಕ್ಕಿ: 10 ಸಾವು
ಮೆಕ್ಸಿಕೋ: ಖಾಸಗಿ ವಿಮಾನವೊಂದು ತುರ್ತು ಭೂಸ್ಪರ್ಶಕ್ಕೆ ಯತ್ನಿಸುವ ವೇಳೆ ಕಟ್ಟಡಕ್ಕೆ ಡಿಕ್ಕಿ ಹೊಡೆದು 10 ಮಂದಿ ಸಾವನ್ನಪ್ಪಿದ ಭೀಕರ ದುರಂತ ಮೆಕ್ಸಿಕೋದಲ್ಲಿ ನಡೆದಿದೆ. ಈ ದುರ್ಘಟನೆ ಮೆಕ್ಸಿಕೋದ ಸ್ಯಾನ್ ಮಾಟಿಯೊ ಅಟೆಂಕೊ ನಗರದ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.
ಲಭ್ಯ ಮಾಹಿತಿಯಂತೆ, ವಿಮಾನವು ಮೆಕ್ಸಿಕೋದ ಪೆಸಿಫಿಕ್ ಕರಾವಳಿಯ ಅಕಾಪುಲ್ಕೊದಿಂದ ಟೊಲುಕಾ ವಿಮಾನ ನಿಲ್ದಾಣದತ್ತ ಹಾರಾಟ ನಡೆಸುತ್ತಿತ್ತು. ಹಾರಾಟದ ಮಧ್ಯೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದ್ದಾನೆ. ಸ್ಧಳೀಯ ಫುಟ್ಬಾಲ್ ಮೈದಾನದಲ್ಲಿ ವಿಮಾನವನ್ನು ಇಳಿಸಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ, ಸಮೀಪದ ಕಟ್ಟಡದ ಮೇಲೆ ಇದ್ದ ಕಬ್ಬಿಣದ ಛಾವಣೆಗೆ ವಿಮಾನ ಡಿಕ್ಕಿ ಹೊಡೆದಿದೆ.
ಈ ಖಾಸಗಿ ಜೆಟ್ ವಿಮಾನದಲ್ಲಿ ಎಂಟು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದು, ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ವಿಮಾನಕ್ಕೆ ಭಾರಿ ಬೆಂಕಿ ಹೊತ್ತಿಕೊಂಡು ಸುತ್ತಮುತ್ತಲಿನ ಪ್ರದೇಶವನ್ನೇ ಆವರಿಸಿಕೊಂಡಿತು. ಬೆಂಕಿ ಮತ್ತಷ್ಟು ಹರಡುವ ಭೀತಿಯಿಂದ ಸ್ಥಳೀಯರಲ್ಲಿ ಭಾರೀ ಆತಂಕ ಉಂಟಾಯಿತು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ, ರೆಡ್ ಕ್ರಾಸ್ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಸದ್ಯ ಬೆಂಕಿ ನಂದಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಈ ಕುರಿತು ಮಾತನಾಡಿದ ಅಟೆಂಕೊ ಮೇಯರ್ ಅನಾ ಮುನಿಜ್, ಖಾಸಗಿ ವಿಮಾನವು ವ್ಯಾಪಾರ ಮಳಿಗೆಯ ಮೇಲೆ ಪತನಗೊಂಡಿದ್ದರಿಂದ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸುರಕ್ಷತೆಗಾಗಿ ಕಟ್ಟಡದಲ್ಲಿದ್ದ ಸುಮಾರು 130 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಎಲ್ಲರಿಗೂ ಸರ್ಕಾರ ಅಗತ್ಯ ನೆರವು ಒದಗಿಸಿದೆ ಎಂದು ತಿಳಿಸಿದ್ದಾರೆ.
ವಿಮಾನ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ತಾಂತ್ರಿಕ ದೋಷ ಅಥವಾ ಇಂಧನ ಸಮಸ್ಯೆ ಇರಬಹುದೆಂದು ಶಂಕಿಸಲಾಗಿದೆ.