ಮನರೇಗಾ ಹೆಸರು ಬದಲಾವಣೆ ಮಸೂದೆಗೆ ಲೋಕಸಭೆಯಲ್ಲಿ ಭಾರೀ ಗದ್ದಲ; ಪ್ರಿಯಾಂಕಾ ಗಾಂಧಿ ತೀವ್ರ ವಿರೋಧ |

ದೇಶ

ಮನರೇಗಾ ಹೆಸರು ಬದಲಾವಣೆ ಮಸೂದೆಗೆ ಲೋಕಸಭೆಯಲ್ಲಿ ಭಾರೀ ಗದ್ದಲ; ಪ್ರಿಯಾಂಕಾ ಗಾಂಧಿ ತೀವ್ರ ವಿರೋಧ

Published

on

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA) ಯ ಹೆಸರನ್ನು ಬದಲಾಯಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ “ಅಭಿವೃದ್ಧಿ ಹೊಂದಿದ ಭಾರತ – ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಖಾತರಿ” (VB-G RAM G Bill 2025) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಮುಂದಾದ ಬೆನ್ನಲ್ಲೇ ಭಾರೀ ಗದ್ದಲ ಉಂಟಾಯಿತು.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಸೂದೆ ಮಂಡನೆಗೆ ಅನುಮತಿ ಕೋರಿದ ಕ್ಷಣವೇ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಸೂದೆಯನ್ನು ಬಲವಾಗಿ ವಿರೋಧಿಸಿ, ತಮ್ಮ ಆಕ್ಷೇಪಣೆಗಳನ್ನು ದಾಖಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಗದ್ದಲದ ನಡುವೆಯೂ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಮಹಾತ್ಮ ಗಾಂಧಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ತತ್ವದಂತೆ ಸರ್ಕಾರವು ಬಡವರ ಮತ್ತು ಹಿಂದುಳಿದವರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹೇಳಿದರು. ಉದ್ಯೋಗ ಖಾತರಿ ಯೋಜನೆಯಡಿ ಈಗ 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಹೊಸ ಮಸೂದೆ ಮಹಾತ್ಮ ಗಾಂಧಿಯವರ ಮನೋಭಾವಕ್ಕೆ ವಿರುದ್ಧವಲ್ಲ ಎಂದು ಸಮರ್ಥಿಸಿಕೊಂಡರು. ಯೋಜನೆಯ ಹೆಸರಿನಲ್ಲಿ “ರಾಮ” ಎಂಬ ಪದ ಸೇರಿಸುವುದಕ್ಕೆ ವಿರೋಧ ಏಕೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಮನರೇಗಾ ಕಳೆದ 20 ವರ್ಷಗಳಿಂದ ಗ್ರಾಮೀಣ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿ ಕೆಲಸ ಮಾಡಿದೆ ಎಂದರು. ಎಲ್ಲಾ ಪಕ್ಷಗಳ ಒಪ್ಪಿಗೆಯಿಂದ ಜಾರಿಯಾದ ಈ ಕಾನೂನನ್ನು ಹೆಸರು ಬದಲಿಸುವ ಮೂಲಕ ದುರ್ಬಲಗೊಳಿಸಬಾರದು ಎಂದು ಹೇಳಿದರು. ಹೆಸರು ಬದಲಾವಣೆಯಿಂದ ದಾಖಲೆ ತಿದ್ದುಪಡಿ, ಆಡಳಿತಾತ್ಮಕ ವೆಚ್ಚ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಚರ್ಚೆಯಿಲ್ಲದೆ ಮಸೂದೆಯನ್ನು ಆತುರದಿಂದ ಅಂಗೀಕರಿಸಬಾರದು ಎಂದು ಒತ್ತಾಯಿಸಿದರು.

ಇದೇ ವೇಳೆ, ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ.100ಕ್ಕೆ ಹೆಚ್ಚಿಸುವ ಮಸೂದೆ ಕೂಡ ಲೋಕಸಭೆಯಲ್ಲಿ ಮಂಡಿಸಲಾಯಿತು. ರಾಜ್ಯಸಭೆಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಕುರಿತ ಚರ್ಚೆ ಮುಂದುವರಿದಿದ್ದು, ಸಚಿವ ಜೆ.ಪಿ ನಡ್ಡಾ ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ನಡೆಸಿದರು.

Trending

Exit mobile version