ದೇಶ
ಪಾಕಿಸ್ತಾನದ ನೆರವಿನಿಂದ ಪುನಃ ಜೀವ ಪಡೆದ ಭಯೋತ್ಪಾದನಾ ಚಟುವಟಿಕೆಗಳು
ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ವಾಯುಪಡೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (POK) ಪ್ರದೇಶದಲ್ಲಿನ ಭಯೋತ್ಪಾದನಾ ಶಿಬಿರಗಳನ್ನು ನಾಶ ಮಾಡಿತ್ತು. ಆದರೆ ಇದೀಗ, ಪಿಒಕೆಯ ಸುತ್ತಮುತ್ತ ಪ್ರದೇಶಗಳಲ್ಲಿ ಭಯೋತ್ಪಾದಕ ಶಿಬಿರಗಳು ಮತ್ತೆ ಸಕ್ರಿಯವಾಗುತ್ತಿರುವುದಾಗಿ ಗುಪ್ತಚರ ಸಂಸ್ಥೆಗಳ ವರದಿ ಹೇಳಿದೆ.
ಮೂಲಗಳ ಪ್ರಕಾರ, ಈ ಶಿಬಿರಗಳು ಈಗ ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಡ್ರೋನ್ ಕಣ್ಗಾವಲು ಮತ್ತು ವಾಯು ದಾಳಿಗಳನ್ನು ತಪ್ಪಿಸಲು ಹೊಸ ತಾಂತ್ರಿಕ ವಿನ್ಯಾಸವನ್ನು ಅಳವಡಿಸಿಕೊಂಡಿವೆ. ಪ್ರತಿ ಶಿಬಿರದಲ್ಲಿ 100 ಕ್ಕಿಂತ ಕಡಿಮೆ ಭಯೋತ್ಪಾದಕರು ಇರಲಿದ್ದು, ಒಂದು ಶಿಬಿರ ನಾಶವಾದರೂ ಸಮಗ್ರ ಕಾರ್ಯತಂತ್ರಕ್ಕೆ ಹೆಚ್ಚು ಪರಿಣಾಮ ಬೀರದು ಎಂದು ವರದಿ ಹೇಳಿದೆ.
ಲುನಿ, ಪುಟ್ವಾಲ್, ಟಿಪ್ಪು ಪೋಸ್ಟ್, ಜಮಿಲ್ ಪೋಸ್ಟ, ಉಮ್ರಾನ್ವಾಲಿ, ಛೋಟಾ ಚಕ್ ಹಾಗೂ ಜಂಗ್ಲೋರಾ ಪ್ರದೇಶಗಳಲ್ಲಿ ಮುಂಚೆ ನೆಲಸಮಗೊಳಿಸಿದ ಶಿಬಿರಗಳನ್ನು ಈಗ ಪುನಃ ಚೇತರಿಸಿಕೊಂಡಿವೆ. ಈ ಶಿಬಿರಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಗಳು ತೊಡಗಿಕೊಂಡಿವೆ.
ಪಾಕಿಸ್ತಾನ ಸೇನೆ ಹಾಗೂ ಐಎಸ್ಐ ನಿಂದ ನೇರ ಬೆಂಬಲ ಸಿಗುತ್ತಿರುವುದರಿಂದ ಗಡಿಯುದ್ದಕ್ಕೂ ಭದ್ರತಾ ಸವಾಲು ಹೆಚ್ಚುತ್ತಿದೆ. ಗೃಹ ಸಚಿವಾಲಯವು ಭದ್ರತಾ ಸಂಸ್ಥೆಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಹಾಗೂ ಕಾರ್ಯತಂತ್ರಗಳನ್ನು ಪುನರ್ ರಚಿಸಲು ಸೂಚನೆ ನೀಡಿದೆ.