ದೇಶ
NEET ‘ಯುವಕರ ಹೋರಾಟ ನೋಡಿ ಭರವಸೆ ಮೂಡಿತು’ : ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಂದೇಶ
ನವದೆಹಲಿ: NEET ದೇಶದ ಯುವಜನರ ಧ್ವನಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ Rahul Gandhi ಕರೆ ನೀಡಿದರು. ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ-2026’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ, ದ್ವೇಷ ಅಥವಾ ಹಿಂಸೆಯ ಅಭಿವ್ಯಕ್ತಿ ಅಲ್ಲ. ಅದು ಭಾರತದ ಯುವಜನತೆಯ ಭರವಸೆ ಮತ್ತು ಭವಿಷ್ಯದ ಕನಸುಗಳ ಪ್ರತಿಬಿಂಬ ಎಂದು ರಾಹುಲ್ ಗಾಂಧಿ ಹೇಳಿದರು.
“ದೇಶದ ಭವಿಷ್ಯವಾದ ಯುವಕರು ತಮ್ಮ ಆತಂಕ ಮತ್ತು ನೋವನ್ನು ವ್ಯಕ್ತಪಡಿಸಲು ಬೀದಿಗಿಳಿದಿರುವುದು ನನಗೆ ಸಂತೋಷ ಮತ್ತು ಹೊಸ ಭರವಸೆ ಮೂಡಿಸಿದೆ. ಅವರು ಹೋರಾಟ ಮಾಡಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸುತ್ತದೆ,” ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಯ ಆಶೋತ್ತರಗಳನ್ನು ಪ್ರತಿಭಟನೆಗಳು ಪ್ರತಿಬಿಂಬಿಸುತ್ತವೆ ಎಂದು ಒತ್ತಿ ಹೇಳಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಧ್ವನಿಯನ್ನು ಕಡೆಗಣಿಸುವ ಬದಲು ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಯುವಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.
ಬೆಂಗಳೂರು
Cauvery ಬಿಕ್ಕಟ್ಟು ತೀವ್ರ! ‘ನೀರಿಲ್ಲ, ತಮಿಳುನಾಡಿಗೆ ಹೇಗೆ ಬಿಡೋದು?’ ಎಂದು ಎಂ.ಬಿ. ಪಾಟೀಲ ಪ್ರಶ್ನೆ
ಬೆಂಗಳೂರು: ರಾಜ್ಯದ Cauvery ಜಲಾನಯನ ಪ್ರದೇಶದಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಪರಿಣಾಮವಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಕಡಿಮೆಯಾಗಿದ್ದು, ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 4.50 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಸೂಚನೆ ಸಮಂಜಸವಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತಮ ಮಳೆಯಾದ ವರ್ಷಗಳಲ್ಲಿ ಕರ್ನಾಟಕವು ನಿಗದಿತ 177 ಟಿಎಂಸಿಗಿಂತಲೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿದೆ. ಆದರೆ ಬರ ಪರಿಸ್ಥಿತಿಯಲ್ಲಿ ನೀರು ಹಂಚಿಕೆಗೆ ಸ್ಪಷ್ಟ ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು.
ಈ ಸಮಸ್ಯೆಗೆ ಮೇಕೆದಾಟು ಜಲಾಶಯ ಯೋಜನೆಯೇ ಶಾಶ್ವತ ಪರಿಹಾರ ಎಂದು ಪುನರುಚ್ಚರಿಸಿದ ಸಚಿವರು, ಕಾವೇರಿ ನೀರು ಹಂಚಿಕೆಯ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ದೊರೆತ 14 ಟಿಎಂಸಿ ಸೇರಿ ಒಟ್ಟು 65 ಟಿಎಂಸಿ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಅಗತ್ಯವಿದೆ ಎಂದು ತಿಳಿಸಿದರು.
ತಾವು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲೇ ಮೇಕೆದಾಟು ಯೋಜನೆಯ ಪರಿಕಲ್ಪನೆ ರೂಪುಗೊಂಡಿತ್ತು. ಈ ಯೋಜನೆಯಿಂದ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿಗೂ ಪ್ರಯೋಜನವಾಗಲಿದೆ. ಆದರೆ ಅಲ್ಲಿನ ಆಂತರಿಕ ರಾಜಕೀಯ ಕಾರಣಗಳಿಂದ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ವಾಸ್ತವದಲ್ಲಿ ಈ ಯೋಜನೆಯ ಲಾಭವನ್ನು ತಮಿಳುನಾಡು ಕೂಡ ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸಮಾಲೋಚನೆ ನಡೆಸಿ ಮುಂದಿನ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.
ಅಲ್ಲದೆ, ಕೇಂದ್ರ ಸರ್ಕಾರದ ಸಮಿತಿ ರಾಜ್ಯದ ಜಲಾಶಯಗಳಲ್ಲಿನ ನೈಜ ನೀರಿನ ಸಂಗ್ರಹ, ವಿಡಿಯೋ ದಾಖಲೆಗಳು ಹಾಗೂ ಅಂಕಿಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದೇಶ
ISRO Recruitment 2026: ಇಸ್ರೋದಲ್ಲಿ 92 ಸೈಂಟಿಸ್ಟ್-ಎಂಜಿನಿಯರ್ ಹುದ್ದೆಗಳ ಭರ್ತಿ! BE/BTech ಅಭ್ಯರ್ಥಿಗಳಿಗೆ ₹56,100 ಸಂಬಳ
ಬೆಂಗಳೂರು: ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ (ISRO) ವಿವಿಧ ಕೇಂದ್ರಗಳಲ್ಲಿ ಖಾಲಿ ಇರುವ 92 ಸೈಂಟಿಸ್ಟ್/ಎಂಜಿನಿಯರ್ (Scientist/Engineer) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. BE/BTech ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹56,100 ಆರಂಭಿಕ ವೇತನ ದೊರೆಯಲಿದ್ದು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಇಸ್ರೋ ಕೇಂದ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ.
ಹುದ್ದೆಗಳ ವಿವರ
- ಸಂಸ್ಥೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
- ಹುದ್ದೆ ಹೆಸರು: ಸೈಂಟಿಸ್ಟ್/ಎಂಜಿನಿಯರ್
- ಒಟ್ಟು ಹುದ್ದೆಗಳು: 92
ಉದ್ಯೋಗ ಸ್ಥಳ
ಆಯ್ಕೆಯಾದ ಅಭ್ಯರ್ಥಿಗಳನ್ನು ಕೆಳಗಿನ ಕೇಂದ್ರಗಳಲ್ಲಿ ನೇಮಕ ಮಾಡಲಾಗುತ್ತದೆ:
- ಬೆಂಗಳೂರು (ಕರ್ನಾಟಕ)
- ಹಾಸನ (ಕರ್ನಾಟಕ)
- ಮಹೇಂದ್ರಗಿರಿ (ತಮಿಳುನಾಡು)
- ಹೈದರಾಬಾದ್ (ತೆಲಂಗಾಣ)
- ಅಹಮದಾಬಾದ್ (ಗುಜರಾತ್)
- ಶ್ರೀಹರಿಕೋಟಾ (ಆಂಧ್ರಪ್ರದೇಶ)
- ತಿರುವನಂತಪುರ (ಕೇರಳ)
- ವಲಿಯಮಾಲಾ (ಕೇರಳ)
ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ BE ಅಥವಾ BTech ಪದವಿ ಪಡೆದಿರಬೇಕು.
ವಯೋಮಿತಿ
- ಗರಿಷ್ಠ ವಯಸ್ಸು: 28 ವರ್ಷ
ವೇತನ
- ಆರಂಭಿಕ ಮೂಲ ವೇತನ: ₹56,100 ಪ್ರತಿ ತಿಂಗಳು
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳು: ₹250
- SC/ST ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕದಿಂದ ವಿನಾಯಿತಿ
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಆನ್‌ಲೈನ್ ಪರೀಕ್ಷೆ ಮೂಲಕ ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
17 ಆಗಸ್ಟ್ 2026
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ದೇಶ
One Nation One Election ಗೆ ಮತ್ತೆ ವಿಳಂಬ! ಜಂಟಿ ಸಮಿತಿಗೆ ಸಂಸತ್ ನೀಡಿದ ಹೊಸ ಗಡುವೇನು?
ನವದೆಹಲಿ: ದೇಶಾದ್ಯಂತ ಒಂದು ರಾಷ್ಟ್ರ, ಒಂದು ಚುನಾವಣೆ (One Nation One Election) ಜಾರಿಗೆ ತರುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸಂಸತ್ತಿನ ಜಂಟಿ ಸಮಿತಿ (JPC) ತನ್ನ ವರದಿ ಸಲ್ಲಿಸಲು ಇನ್ನಷ್ಟು ಸಮಯವನ್ನು ಪಡೆದುಕೊಂಡಿದೆ. ವರದಿ ಸಲ್ಲಿಕೆಗೆ ನೀಡಲಾಗಿದ್ದ ಗಡುವನ್ನು ಮುಂದೂಡುವಂತೆ ಸಮಿತಿಯ ಅಧ್ಯಕ್ಷ ಪಿ.ಪಿ. ಚೌಧರಿ ಮಂಡಿಸಿದ ನಿರ್ಣಯವನ್ನು ಲೋಕಸಭೆ ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಿದೆ.
ಹೊಸ ನಿರ್ಧಾರದ ಪ್ರಕಾರ, ಜಂಟಿ ಸಮಿತಿಯು ತನ್ನ ವರದಿಯನ್ನು ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ಸಲ್ಲಿಸಬಹುದಾಗಿದೆ. ಇದರಿಂದ ವರದಿ ಸಲ್ಲಿಕೆ ಪ್ರಕ್ರಿಯೆಗೆ ಅಧಿಕೃತವಾಗಿ ಕಾಲಾವಕಾಶ ವಿಸ್ತರಣೆ ದೊರೆತಂತಾಗಿದೆ.
ಪ್ರಸ್ತುತ 41 ಸದಸ್ಯರ ಜಂಟಿ ಸಮಿತಿಯು ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024 ಅನ್ನು ಪರಿಶೀಲಿಸುತ್ತಿದೆ. ಈ ಮಸೂದೆಯ ಮುಖ್ಯ ಉದ್ದೇಶ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿದೆ.
ಈ ಸಂಬಂಧ ಸಮಿತಿಯು ದೇಶದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು, ರಾಜಕೀಯ ಪಕ್ಷಗಳು, ಕಾನೂನು ತಜ್ಞರು ಹಾಗೂ ವಿವಿಧ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. 2029ರ ವೇಳೆಗೆ ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಜಂಟಿ ಸಮಿತಿಯು ತನ್ನ ಸಮಾಲೋಚನೆಗಳನ್ನು ಪೂರ್ಣಗೊಳಿಸಿ ಅಂತಿಮ ವರದಿ ಸಿದ್ಧಪಡಿಸುವ ಸಾಧ್ಯತೆ ಇದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆ ಕುರಿತು ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಮುಂದುವರಿದಿವೆ. ಕೇಂದ್ರ ಸರ್ಕಾರ ಈ ಕ್ರಮದಿಂದ ಚುನಾವಣಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಆಡಳಿತ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ವಾದಿಸುತ್ತಿದ್ದರೆ, ಪ್ರತಿಪಕ್ಷಗಳು ಫೆಡರಲ್ ವ್ಯವಸ್ಥೆ ಹಾಗೂ ರಾಜ್ಯಗಳ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿವೆ.
-
ರಾಜ್ಯ22 hours agoDK Shivkumar-Usha ದಂಪತಿಗೆ 33ನೇ ವಿವಾಹ ವಾರ್ಷಿಕೋತ್ಸವ; ಹಳೆಯ ಆಮಂತ್ರಣ ಪತ್ರ ವೈರಲ್
-
ದೇಶ23 hours ago16 Crores ವೆಚ್ಚದ ಸಂಪರ್ಕ ರಸ್ತೆ 16 ದಿನದಲ್ಲೇ ಕುಸಿತ; ಉತ್ತರಾಖಂಡದಲ್ಲಿ ಕಾಂಗ್ರೆಸ್ ಆಕ್ರೋಶ
-
ಬೆಂಗಳೂರು2 hours agoNICE ಗೆ ಹೈಕೋರ್ಟ್ನಿಂದ ಭಾರಿ ಶಾಕ್! ರೈತರ ಪರ ಐತಿಹಾಸಿಕ ತೀರ್ಪು
-
ದೇಶ22 hours agoGoogle Pay, PhonePe, Paytm ಬಳಕೆದಾರರಿಗೆ ಹೊಸ ಅಪ್ಡೇಟ್; UPIನಲ್ಲಿ ಬದಲಾಗಲಿದೆ ಈ ನಿಯಮ
-
ರಾಜ್ಯ23 hours agoMandya ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶ; ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯ
-
ದೇಶ23 hours agoCJP ಸಂಭ್ರಮಾಚರಣೆ ಕುರಿತು ಸೋನಮ್ ವಾಂಗ್ಚುಕ್ ಪ್ರತಿಕ್ರಿಯೆ; ಹೇಳಿದ್ದೇನು?
-
ದೇಶ2 hours agoMiddle East ದಲ್ಲಿ ಮತ್ತೆ ಯುದ್ಧದ ಮೋಡ! ಇರಾನ್ ಬೆಂಬಲಿತ ನೆಲೆಗಳ ಮೇಲೆ ಭೀಕರ ವಾಯುದಾಳಿ
-
ಬೆಂಗಳೂರು6 hours agoBengaluru ರಿನ ರಸ್ತೆ ಗುಂಡಿ ಮುಚ್ಚಿದ ಮಹಿಳೆ; ವೈರಲ್ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ, ಆಡಳಿತದ ವಿರುದ್ಧ ಆಕ್ರೋಶ
