ಅಪರಾಧ
ಚೆಕ್ ಬೌನ್ಸ್ ಪ್ರಕರಣ: ನಟ ರಾಜ್ಪಾಲ್ ಯಾದವ್ ತಿಹಾರ್ ಜೈಲಿಗೆ ಶರಣು
ನವದೆಹಲಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ಹಾಸ್ಯ ನಟ ರಾಜ್ಪಾಲ್ ಯಾದವ್ (Rajpal Yadav) ಅವರು ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಗುರುವಾರ (ಫೆ.5) ತಿಹಾರ್ ಜೈಲಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ದೂರುದಾರರಿಗೆ ಪಾವತಿಸಬೇಕಿದ್ದ ಮೊತ್ತವನ್ನು ಮರುಮರು ಭರವಸೆ ನೀಡಿದರೂ ನೆರವೇರಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಠಿಣ ಕ್ರಮ ಕೈಗೊಂಡಿದೆ.
ಜೈಲಿಗೆ ಶರಣಾದ ಬಳಿಕ ರಾಜ್ಪಾಲ್ ಯಾದವ್ ದೆಹಲಿ ಹೈಕೋರ್ಟ್ ಮುಂದೆ ವೈಯಕ್ತಿಕವಾಗಿ ಹಾಜರಾಗಿ, 25 ಲಕ್ಷ ರೂ.ಗಳ ಚೆಕ್ ತಂದಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಉಳಿದ ಮೊತ್ತವನ್ನೂ ಪಾವತಿಸುವುದಾಗಿ ಭರವಸೆ ನೀಡಿ, ಈ ಆಧಾರದ ಮೇಲೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಆದರೆ, ಯಾವುದೇ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೊದಲು ಜೈಲಿಗೆ ಶರಣಾಗುವುದು ಕಡ್ಡಾಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಈ ಪ್ರಕರಣದಲ್ಲಿ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಮತ್ತು ದೂರುದಾರ ಕಂಪನಿಗೆ ಹಣ ಪಾವತಿಸಲಾಗುವುದು ಎಂದು ನಟ ಈ ಹಿಂದೆ ಹಲವಾರು ಬಾರಿ ಭರವಸೆ ನೀಡಿದ್ದರೂ, ಅದನ್ನು ಪಾಲಿಸದ ಹಿನ್ನೆಲೆ ಜೈಲು ಶರಣಾಗತಿಗೆ ಆದೇಶಿಸಲಾಗಿದೆ ಎಂದು ನ್ಯಾಯಾಲಯ ಹೇಳಿತು. ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಿದ್ದರೂ, ನಟ ತನ್ನ ಭರವಸೆಗಳನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಗಮನಿಸಿದೆ.
ಇದಕ್ಕೂ ಮೊದಲು, ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು, ವಿಚಾರಣಾ ನ್ಯಾಯಾಲಯ ಜೂನ್ 2024ರಲ್ಲಿ ವಿಧಿಸಿದ್ದ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ರಾಜ್ಪಾಲ್ ಯಾದವ್ಗೆ ಇತ್ಯರ್ಥಕ್ಕೆ ಸಮಯ ನೀಡಿದ್ದರು. ಆದರೆ, ಹಲವು ಕೋಟಿ ರೂಪಾಯಿ ಪಾವತಿಯನ್ನು ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಕಂತುಗಳ ಮೂಲಕ ನೀಡುವುದಾಗಿ ಹೇಳಿ, ಅದನ್ನು ಅನುಸರಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತಷ್ಟು ಸಮಯ ನೀಡಲು ನಿರಾಕರಿಸಿತು.
ರಿಜಿಸ್ಟ್ರಾರ್ ಜನರಲ್ ಬಳಿ ಈಗಾಗಲೇ ಠೇವಣಿ ಇಟ್ಟಿರುವ ಮೊತ್ತವನ್ನು ದೂರುದಾರ ಕಂಪನಿಗೆ ಬಿಡುಗಡೆ ಮಾಡಲು ಆದೇಶಿಸಿ, ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಅನುಭವಿಸಲು ನಟನಿಗೆ ಶರಣಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.