Connect with us

ಅಪರಾಧ

Ramanagara ದಲ್ಲಿ ಕೋಟಿ ಕೋಟಿ ನಕಲಿ ಔಷಧ ದಂಧೆ ಬಯಲು! ಫಾರ್ಮ್‌ಹೌಸ್‌ನಲ್ಲಿ ಏನಾಗುತ್ತಿತ್ತು?

Published

on

ರಾಮನಗರ: Ramanagara ಜಿಲ್ಲೆಯ ದೊಡ್ಡೇರಿ ಗ್ರಾಮದ ಸಮೀಪ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಎನ್ನಲಾದ ನಕಲಿ ಔಷಧ ದಂಧೆ (Ramanagara Fake Medicine Racket) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಸದ್ಯ ವಿದೇಶದಲ್ಲಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಅನುಮಾನಾಸ್ಪದ ವಾಹನ ಸಂಚಾರದಿಂದ ಬಯಲಾಯ್ತು ದಂಧೆ!

ಫಾರ್ಮ್‌ಹೌಸ್‌ಗೆ ಅನುಮಾನಾಸ್ಪದವಾಗಿ ವಾಹನಗಳು ಬಂದು ಹೋಗುತ್ತಿರುವುದು ಹಾಗೂ ಬಾಕ್ಸ್‌ಗಳನ್ನು ಲೋಡ್ ಮಾಡಲಾಗುತ್ತಿದೆ ಎಂಬ ಮಾಹಿತಿ ಬೀಟ್ ಸಿಬ್ಬಂದಿಗಳಿಗೆ ಲಭ್ಯವಾಗಿತ್ತು. ಶಿವರಾಜು ಮತ್ತು ರಘು ನೀಡಿದ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ದೊಡ್ಡ ಪ್ರಮಾಣದ ಔಷಧಗಳು ಪತ್ತೆಯಾಗಿವೆ.

ಬಳಿಕ ಡ್ರಗ್ ಕಂಟ್ರೋಲರ್ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಲಾಗಿದ್ದು, ಪತ್ತೆಯಾದ ಔಷಧಗಳು ನಕಲಿಯಾಗಿರುವ ಶಂಕೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈ ಎಂಡ್ ICU ಔಷಧಗಳೇ ಟಾರ್ಗೆಟ್?

ತನಿಖೆಯ ಪ್ರಕಾರ, ಐಸಿಯುನಲ್ಲಿ ಬಳಸುವ ದುಬಾರಿ ಮತ್ತು ಹೈ ಎಂಡ್ ಔಷಧಗಳನ್ನು ನಕಲಿ ರೂಪದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಡಿಮೆ ಬೆಲೆಯ ಔಷಧಗಳಿಗೆ ವಿದೇಶಿ ಕಂಪನಿಗಳ ಹೆಸರಿನ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತೇ ಎಂಬ ಶಂಕೆಯೂ ವ್ಯಕ್ತವಾಗಿದೆ.

ಒಬ್ಬನ ಬಂಧನ, ಪ್ರಮುಖ ಆರೋಪಿ ವಿದೇಶದಲ್ಲಿ

ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ಸುಮಾರು 10 ಎಕರೆ ವಿಸ್ತೀರ್ಣದ ಫಾರ್ಮ್‌ಹೌಸ್ ಅನ್ನು ಪ್ರಮುಖ ಆರೋಪಿ ವರ್ಷಕ್ಕೆ ಸುಮಾರು ₹10 ಲಕ್ಷಕ್ಕೆ ಲೀಸ್‌ಗೆ ಪಡೆದಿದ್ದ ಎನ್ನಲಾಗಿದೆ. ಕೃಷಿ ಚಟುವಟಿಕೆ ನೆಪದಲ್ಲಿ ಈ ದಂಧೆ ನಡೆಸಲಾಗುತ್ತಿತ್ತೇ ಎಂಬ ಕೋನದಲ್ಲೂ ತನಿಖೆ ಮುಂದುವರಿದಿದೆ.

ಇದೇ ವೇಳೆ ಸಾರ್ವಜನಿಕರು ಔಷಧ ಖರೀದಿಸುವಾಗ QR Code, Batch Number ಹಾಗೂ ಉತ್ಪನ್ನದ ವಿವರಗಳನ್ನು ಪರಿಶೀಲಿಸುವಂತೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಪ್ರಕರಣದ ಜಾಲ ಎಷ್ಟು ವಿಸ್ತಾರವಾಗಿದೆ ಮತ್ತು ನಕಲಿ ಔಷಧಗಳನ್ನು ಎಲ್ಲೆಲ್ಲಿ ಪೂರೈಸಲಾಗಿದೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

‘Shri Ram Mandir Prasad’ ಹೆಸರಿನಲ್ಲಿ ಸಿಹಿ ಮಾರಾಟ: Amazon ಗೆ ಕೇಂದ್ರದಿಂದ ಭಾರೀ ಕ್ರಮ!

Published

on

ನವದೆಹಲಿ: ಅಯೋಧ್ಯೆಯ Shri Ram Mandir Prasad ವೆಂದು ಪ್ರತಿಪಾದಿಸಿ ಸಾಮಾನ್ಯ ಸಿಹಿ ತಿಂಡಿಗಳನ್ನು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿAmazon ಇಂಡಿಯಾಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸಿದೆ.

‘ಶ್ರೀ ರಾಮಮಂದಿರ ಅಯೋಧ್ಯೆ ಪ್ರಸಾದ’ ಎಂಬ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿತ್ತು. ಆದರೆ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು CCPA ತಿಳಿಸಿದೆ. ಇದರಿಂದ ಗ್ರಾಹಕರನ್ನು ದಾರಿ ತಪ್ಪಿಸಲಾಗಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

Amazon ₹1 ಲಕ್ಷ ದಂಡ

CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರಿದ್ದ ಪ್ರಾಧಿಕಾರವು ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ಗೆ ದಂಡ ವಿಧಿಸಿದೆ. ದಂಡದ ಮೊತ್ತವನ್ನು 15 ದಿನಗಳ ಒಳಗಾಗಿ ಪಾವತಿಸುವಂತೆ ಸೂಚಿಸಲಾಗಿದೆ.

ಖಾಸಗಿ ಕಂಪನಿಯೊಂದು ತನ್ನದೇ ಬ್ರ್ಯಾಂಡ್ ಅಡಿಯಲ್ಲಿ ತುಪ್ಪದ ಲಾಡು, ಖೋವಾ ಲಾಡು, ಬೂಂದಿ ಲಾಡು ಹಾಗೂ ಹಸುವಿನ ಹಾಲಿನ ಪೇಡಾಗಳನ್ನು ‘ಪ್ರಸಾದ’ ಎಂದು ಜಾಹೀರಾತು ನೀಡಿ ಮಾರಾಟ ಮಾಡುತ್ತಿತ್ತು ಎಂದು CCPA ತಿಳಿಸಿದೆ.

CAIT ದೂರಿನ ಬಳಿಕ ತನಿಖೆ

ಅಖಿಲ ಭಾರತ ವರ್ತಕರ ಒಕ್ಕೂಟ (CAIT) ನೀಡಿದ ದೂರಿನ ಆಧಾರದ ಮೇಲೆ CCPA ಈ ಕುರಿತು ವಿಚಾರಣೆ ನಡೆಸಿತ್ತು. ಧಾರ್ಮಿಕ ಕ್ಷೇತ್ರದ ಹೆಸರನ್ನು ಬಳಸಿಕೊಂಡು ಸಾಮಾನ್ಯ ಸಿಹಿ ತಿಂಡಿಗಳನ್ನು ಪ್ರಸಾದವೆಂದು ಮಾರಾಟ ಮಾಡುವುದು ಗ್ರಾಹಕರನ್ನು ದಾರಿ ತಪ್ಪಿಸುವುದಲ್ಲದೆ, ಭಕ್ತರ ಧಾರ್ಮಿಕ ಭಾವನೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಪ್ರಾಧಿಕಾರ ಪರಿಗಣಿಸಿದೆ.

ಈ ಪ್ರಕರಣದಲ್ಲಿ ಅಮೆಜಾನ್ ತನ್ನನ್ನು ಕೇವಲ ಮಧ್ಯವರ್ತಿ ಇ-ಕಾಮರ್ಸ್ ವೇದಿಕೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ ಈ ವಾದವನ್ನು CCPA ತಳ್ಳಿಹಾಕಿದೆ.

‘ಮಧ್ಯವರ್ತಿ’ ವಾದ ತಳ್ಳಿಹಾಕಿದ CCPA

ತನ್ನ ವೇದಿಕೆಯಲ್ಲಿ ಇಂತಹ ಉತ್ಪನ್ನಗಳನ್ನು ಪ್ರದರ್ಶಿಸಿ, ಅವುಗಳ ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅಮೆಜಾನ್ ಕೂಡ ಗ್ರಾಹಕರನ್ನು ದಾರಿ ತಪ್ಪಿಸುವ ಪ್ರಕ್ರಿಯೆಯಲ್ಲಿ ಹೊಣೆಗಾರಿಕೆಯ ಭಾಗವಾಗಿದೆ ಎಂದು CCPA ಸ್ಪಷ್ಟಪಡಿಸಿದೆ.

ಪ್ರಸಾದ ಎಂದು ತಪ್ಪಾಗಿ ಬಿಂಬಿಸಲಾದ ಉತ್ಪನ್ನಗಳನ್ನು ಗ್ರಾಹಕರು ನಿಜವಾಗಿಯೂ ಅಯೋಧ್ಯೆ ರಾಮಮಂದಿರದಿಂದ ಬಂದ ಪ್ರಸಾದ ಎಂದು ನಂಬುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಜಾಹೀರಾತುಗಳ ಬಗ್ಗೆ ಇ-ಕಾಮರ್ಸ್ ವೇದಿಕೆಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಪ್ರಾಧಿಕಾರ ಸೂಚಿಸಿದೆ.

ಇನ್ನು ಮುಂದೆ ಇಂತಹ ಮಾರಾಟಕ್ಕೆ ಬ್ರೇಕ್

ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಟ್ರಸ್ಟ್‌ಗಳ ಅನುಮತಿ ಇಲ್ಲದೆ ‘ಪ್ರಸಾದ’, ‘ಮಹಾಪ್ರಸಾದ’ ಅಥವಾ ‘ಭೋಗ್’ ಎಂಬ ಹೆಸರಿನಲ್ಲಿ ಯಾವುದೇ ಉತ್ಪನ್ನಗಳನ್ನು ತನ್ನ ವೇದಿಕೆಯಲ್ಲಿ ಮಾರಾಟ ಮಾಡದಂತೆ ಅಮೆಜಾನ್‌ಗೆ CCPA ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಕ್ರಮವು ಧಾರ್ಮಿಕ ಸಂಸ್ಥೆಗಳ ಹೆಸರನ್ನು ಬಳಸಿಕೊಂಡು ನಡೆಯುವ ದಾರಿ ತಪ್ಪಿಸುವ ಜಾಹೀರಾತುಗಳು ಹಾಗೂ ಆನ್‌ಲೈನ್ ಮಾರಾಟದ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಕೈಗೊಂಡಿರುವ ಮಹತ್ವದ ಕ್ರಮವಾಗಿದೆ.

Continue Reading

ಅಪರಾಧ

AAPಗೆ ಬಿಗ್ ಶಾಕ್: ಸತ್ಯೇಂದ್ರ ಜೈನ್ ಮತ್ತೆ ಬಂಧನ; ₹1.52 ಕೋಟಿ ಲಂಚದ ಆರೋಪ

Published

on

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ದೆಹಲಿ ಸರ್ಕಾರದ ಮಾಜಿ ಜಲ ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರನ್ನು ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ. ದೆಹಲಿ ಜಲ ಮಂಡಳಿಯ (Delhi Jal Board) ಒಳಚರಂಡಿ ಸಂಸ್ಕರಣಾ ಘಟಕಗಳ (STP) ಮೇಲ್ದರ್ಜೆಗೇರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಟೆಂಡರ್ ಷರತ್ತುಗಳ ತಿರುಚಾಟ ಹಾಗೂ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದೆಹಲಿ ACB ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಟೆಂಡರ್ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ತಂತ್ರಜ್ಞಾನ ಪೂರೈಕೆದಾರ ಸಂಸ್ಥೆಗೆ ಅನುಕೂಲವಾಗುವಂತೆ ಷರತ್ತುಗಳನ್ನು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಜಿಲೆನ್ಸ್ ನಿರ್ದೇಶನಾಲಯದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಸತ್ಯೇಂದ್ರ ಜೈನ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ದೆಹಲಿ ಜಲ ಮಂಡಳಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಉದಿತ್ ಪ್ರಕಾಶ್ ರೈ ಕೂಡ ಸೇರಿದ್ದಾರೆ.

ಟೆಂಡರ್‌ನಲ್ಲಿ ಷರತ್ತು ತಿರುಚಿದ ಆರೋಪ

ACB ತನಿಖೆಯ ಪ್ರಕಾರ, ಒಳಚರಂಡಿ ಸಂಸ್ಕರಣಾ ಘಟಕಗಳ ಮೇಲ್ದರ್ಜೆಗೇರಿಸುವ ಟೆಂಡರ್‌ನಲ್ಲಿ ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ತಾಂತ್ರಿಕ ಷರತ್ತುಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ.

ಪ್ರಸ್ತಾವಿತ ಪ್ರಾಯೋಗಿಕ ಅಧ್ಯಯನವನ್ನು ಸಮರ್ಪಕವಾಗಿ ನಡೆಸದೆ ಕೆಲವು ಷರತ್ತುಗಳನ್ನು ಸೇರಿಸಲಾಗಿತ್ತು. ಸಂಸ್ಕರಿಸಿದ ತ್ಯಾಜ್ಯ ನೀರಿಗೆ ಸಂಬಂಧಿಸಿದ ಕೆಲವು ಪ್ರಮುಖ ಮಾನದಂಡಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂಬ ಆರೋಪವೂ ತನಿಖಾ ಸಂಸ್ಥೆಯಿಂದ ಕೇಳಿಬಂದಿದೆ.

ಇದರ ಜೊತೆಗೆ, ಹಣದ ವರ್ಗಾವಣೆಗೆ ಕೆಲವು ಮಧ್ಯವರ್ತಿ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪವೂ ಇದೆ.

₹1.52 ಕೋಟಿ ಲಂಚ ಪಡೆದ ಆರೋಪ

ದೆಹಲಿ ಜಲ ಮಂಡಳಿಯ ಆಗಿನ CEO ಉದಿತ್ ಪ್ರಕಾಶ್ ರೈ ಅವರು ಲಂಚವಾಗಿ ಸುಮಾರು ₹1.52 ಕೋಟಿ ಹಣವನ್ನು ತಮ್ಮ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳ ಮೂಲಕ ಪಡೆದಿದ್ದಾರೆ ಎಂದು ACB ಆರೋಪಿಸಿದೆ.

ಈ ಹಣವನ್ನು ನಂತರ ಸ್ಥಿರಾಸ್ತಿ ಖರೀದಿಗೆ ಬಳಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ವಹಿವಾಟು, ಟೆಂಡರ್ ದಾಖಲೆಗಳು ಮತ್ತು ಸಂಬಂಧಪಟ್ಟ ವ್ಯಕ್ತಿಗಳ ನಡುವಿನ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ.

ಸತ್ಯೇಂದ್ರ ಜೈನ್ ಸೇರಿದಂತೆ ಆರು ಮಂದಿ ಬಂಧನ

ಈ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಮತ್ತು ಉದಿತ್ ಪ್ರಕಾಶ್ ರೈ ಹೊರತುಪಡಿಸಿ ಮಾಜಿ ಗುತ್ತಿಗೆ ಸಲಹೆಗಾರ ಅಂಕಿತ್ ಶ್ರೀವಾಸ್ತವ, ಎಎನ್ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕ ನಾಗೇಂದ್ರ ಯಾದವ್, ಯುರೋಟೆಕ್ ಎನ್ವಿರಾನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲೀಕ ರಾಜಾ ಕುಮಾರ್ ಕುರ್ರಾ ಹಾಗೂ ಸೃಜನ್‌ಹಾರ್ ಸಂಸ್ಥೆಯ ಮಾಲೀಕ ಪಂಕಜ್ ವರ್ಮಾ ಅವರನ್ನು ಬಂಧಿಸಲಾಗಿದೆ ಎಂದು ACB ತಿಳಿಸಿದೆ.

‘ಜೈನ್ ಜೈಲಿನಲ್ಲಿದ್ದರು, ಹೇಗೆ ಹೊಣೆ?’ ಎಂದ AAP

ಸತ್ಯೇಂದ್ರ ಜೈನ್ ಬಂಧನದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ರಾಜಕೀಯ ಪ್ರೇರಿತ ಕ್ರಮ ಎಂದು AAP ಆರೋಪಿಸಿದೆ.

ಪಕ್ಷದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ್ ಧಂಡಾ, ಟೆಂಡರ್ ನಡೆದ ಅವಧಿಯಲ್ಲಿ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದರು ಎಂದು ಹೇಳಿದ್ದಾರೆ. “ಜೈಲಿನಲ್ಲಿದ್ದ ವ್ಯಕ್ತಿಯನ್ನು ಈ ಪ್ರಕರಣಕ್ಕೆ ಹೇಗೆ ಹೊಣೆಗಾರರನ್ನಾಗಿ ಮಾಡಬಹುದು?” ಎಂದು ಪ್ರಶ್ನಿಸಿರುವ ಅವರು, ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ AAP ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

AAP ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಜೈನ್ ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಹಿಂದಿನ ಪ್ರಕರಣದಂತೆ ಈ ಪ್ರಕರಣವೂ ಸುಳ್ಳು ಎಂದು ಸಾಬೀತಾಗಲಿದೆ ಎಂದು ಅವರು ಹೇಳಿದ್ದಾರೆ.

‘ದೆಹಲಿ ಜಲ ಮಂಡಳಿಯನ್ನು ಲೂಟಿ ಮಾಡಲಾಗಿದೆ’ ಎಂದ ಬಿಜೆಪಿ

ಇನ್ನೊಂದೆಡೆ, ಬಿಜೆಪಿ ಈ ಬಂಧನವನ್ನು ಸ್ವಾಗತಿಸಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ವಿರೇಂದ್ರ ಸಚ್‌ದೇವಾ, ದೆಹಲಿ ಜಲ ಮಂಡಳಿಯ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಟೆಂಡರ್ ಷರತ್ತುಗಳ ತಿರುಚಾಟ ಮತ್ತು ಲಂಚದ ಆರೋಪಗಳು AAP ಸರ್ಕಾರದ ಆಡಳಿತ ಮಾದರಿಯನ್ನು ಪ್ರಶ್ನಿಸುವಂತಿವೆ ಎಂದು ಅವರು ಟೀಕಿಸಿದ್ದಾರೆ.

ಹಿಂದೆಯೂ ಜೈಲು ಸೇರಿದ್ದ ಸತ್ಯೇಂದ್ರ ಜೈನ್

ಸತ್ಯೇಂದ್ರ ಜೈನ್ ಅವರು 2015ರಿಂದ 2023ರವರೆಗೆ ದೆಹಲಿ ಸರ್ಕಾರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಮೇ 2022ರಲ್ಲಿ ಬಂಧಿಸಿತ್ತು.

ಆರೋಗ್ಯದ ಕಾರಣದಿಂದ ಮೇ 2023ರಲ್ಲಿ ಅವರಿಗೆ ಮಧ್ಯಂತರ ಜಾಮೀನು ದೊರೆತಿತ್ತು. ಬಳಿಕ ಮತ್ತೆ ಜೈಲಿನಲ್ಲಿದ್ದ ಅವರು ಅಕ್ಟೋಬರ್ 2024ರಲ್ಲಿ ನಿಯಮಿತ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಇದೀಗ ದೆಹಲಿ ಜಲ ಮಂಡಳಿಯ ಟೆಂಡರ್ ಅಕ್ರಮ ಪ್ರಕರಣದಲ್ಲಿ ಮತ್ತೊಮ್ಮೆ ಬಂಧನಕ್ಕೊಳಗಾಗಿರುವುದು ದೆಹಲಿ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ACB ಆರೋಪಗಳ ಆಧಾರದ ಮೇಲೆ ತನಿಖೆ ಮುಂದುವರಿಸುತ್ತಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.

Continue Reading

ಅಪರಾಧ

Cubbon Park Viral Video: ರೀಲ್ಸ್ ಮಾಡುವ ವಿಚಾರಕ್ಕೆ ಯುವತಿಯರ ಜಗಳ; ಕೂದಲು ಹಿಡಿದು ಎಳೆದಾಡಿದ ದೃಶ್ಯ ವೈರಲ್

Published

on

ಬೆಂಗಳೂರು: ನಗರದ ಕಬ್ಬನ್ ಪಾರ್ಕ್‌ (Cubbon Park) ನಲ್ಲಿ ರೀಲ್ಸ್‌ (Reels) ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ಜಗಳ ನಡೆದಿದ್ದು, ಪರಸ್ಪರ ಕೂದಲು ಹಿಡಿದು ಎಳೆದಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Viral Video) ವೈರಲ್ ಆಗಿದೆ.

ಭಾನುವಾರ ರಜಾದಿನವಾಗಿದ್ದರಿಂದ ಕಬ್ಬನ್ ಪಾರ್ಕ್‌ಗೆ ಸಾವಿರಾರು ಮಂದಿ ಆಗಮಿಸಿದ್ದರು. ಕುಟುಂಬಗಳು, ಸ್ನೇಹಿತರ ಗುಂಪುಗಳು ಸೇರಿದಂತೆ ಹಲವರು ಉದ್ಯಾನದಲ್ಲಿ ಸಮಯ ಕಳೆಯುತ್ತಿದ್ದರು. ಇದೇ ವೇಳೆ ರೀಲ್ಸ್ ವಿಡಿಯೋ ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ ಎಂದು ತಿಳಿದುಬಂದಿದೆ.

ಮಾತಿನ ಚಕಮಕಿ ಬಳಿಕ ಕೈ ಕೈ ಮಿಲಾಯಿಸಿದ ಯುವತಿಯರು

ಆರಂಭದಲ್ಲಿ ಮಾತಿನ ಜಗಳವಾಗಿದ್ದ ಘಟನೆ ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ ಎನ್ನಲಾಗಿದೆ. ಇಬ್ಬರೂ ಯುವತಿಯರು ಪರಸ್ಪರ ಕೂದಲು ಹಿಡಿದು ಎಳೆದಾಡಿಕೊಂಡು ಹೊಡೆದಾಡಿದ್ದಾರೆ. ಜಗಳದ ದೃಶ್ಯ ಕಂಡ ಸಾರ್ವಜನಿಕರು ಆರಂಭದಲ್ಲಿ ಅಚ್ಚರಿಗೊಂಡಿದ್ದು, ಬಳಿಕ ಕೆಲವರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ.

ಮೊಬೈಲ್‌ನಲ್ಲಿ ಸೆರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಸ್ಥಳದಲ್ಲಿದ್ದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಅದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಘಟನೆಯ ಕುರಿತು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಬ್ಬನ್ ಪಾರ್ಕ್‌ನಲ್ಲಿ ರೀಲ್ಸ್ ಮಾಡುವ ವಿಚಾರಕ್ಕೆ ಆರಂಭವಾದ ಎನ್ನಲಾದ ಈ ಜಗಳ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ನಿಖರ ಕಾರಣ ಮತ್ತು ಜಗಳಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Continue Reading

Trending