Connect with us

ಅಪರಾಧ

ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾ ಗೌಡ ಭೇಟಿ ಬೇಡ ಎಂದ ನಟ ದರ್ಶನ್? ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಳವಣಿಗೆ

Published

on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಸಹ ವಿಚಾರಣಾಧೀನ ಕೈದಿ ಪವಿತ್ರಾ ಗೌಡ ಹಲವು ಬಾರಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಪವಿತ್ರಾ ಗೌಡರ ಭೇಟಿಯನ್ನು ದರ್ಶನ್ ನಯವಾಗಿ ನಿರಾಕರಿಸಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.

ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ದರ್ಶನ್ ಹಾಗೂ ಪವಿತ್ರಾ ಗೌಡರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಹ ಕೈದಿಗಳ ಭೇಟಿಗೆ ಅವಕಾಶ ಕಲ್ಪಿಸುವಂತೆ ಪವಿತ್ರಾ ಗೌಡ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರ ತಿಳಿದ ದರ್ಶನ್, ಯಾವುದೇ ಕಾರಣಕ್ಕೂ ಪವಿತ್ರಾ ಗೌಡರ ಭೇಟಿ ಬೇಡ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ (ಟ್ರಯಲ್) ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಲು ದರ್ಶನ್ ಅವರನ್ನು ಭೇಟಿಯಾಗಲು ಅವರ ವಕೀಲರು ಹಾಗೂ ಆಪ್ತರು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಸಹ ಹೊರಬಂದಿದೆ.

ಈ ಬೆಳವಣಿಗೆಗಳು ದರ್ಶನ್ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಜೈಲಿನೊಳಗಿನ ಬೆಳವಣಿಗೆಗಳ ಮೇಲೆ ಸಾರ್ವಜನಿಕರು ಹಾಗೂ ಅಭಿಮಾನಿಗಳ ಗಮನ ನೆಟ್ಟಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆಯ ವೇಳೆ ಈ ಅಂಶಗಳು ಯಾವ ರೀತಿ ಪ್ರಭಾವ ಬೀರುತ್ತವೆ ಎಂಬುದು ಕಾದು ನೋಡಬೇಕಿದೆ.

ಬೆಂಗಳೂರು

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು; ರಾಜ್ಯಪಾಲರಿಂದ ರಾಷ್ಟ್ರಪತಿಗೆ ತನಿಖೆ ಶಿಫಾರಸು

Published

on

ಬೆಂಗಳೂರು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಕುರಿತು ತನಿಖೆ ನಡೆಸಲು ಭಾರತದ ಸಂವಿಧಾನದ 317(1)ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ.

ರಾಜ್ಯಪಾಲರ ಆದೇಶದಂತೆ, ತನಿಖೆ ಪೂರ್ಣಗೊಂಡು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರು ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಿತಾಸಕ್ತಿ ಸಂಘರ್ಷವನ್ನು ಘೋಷಿಸದೇ ಇದ್ದಿರುವುದು, ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯದಿರುವುದು ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿರುವ ಆರೋಪಗಳು ತನಿಖೆಗೆ ಕಾರಣವಾಗಿವೆ. ಪ್ರಕರಣದಲ್ಲಿ ಅವರ ಪುತ್ರಿಯೊಬ್ಬರು ವಾರ್ಷಿಕ ಆದಾಯವನ್ನು ಕೇವಲ ₹40,000 ಎಂದು ನಮೂದಿಸಿದ ಆದಾಯ ಪ್ರಮಾಣಪತ್ರ ಸಲ್ಲಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ‘ಕ್ರೀಮಿ ಲೇಯರ್’ ವಿನಾಯಿತಿ ಪಡೆಯಲು ಯತ್ನಿಸಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಕೆಪಿಎಸ್‌ಸಿ ಕಾರ್ಯದರ್ಶಿ ಶೋಭಾ ಅವರ ದೂರಿನ ಮೇರೆಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಆದಾಯ ಪ್ರಮಾಣಪತ್ರ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಬೆಳವಣಿಗೆಯಿಂದ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಕುರಿತು ಹೊಸ ಚರ್ಚೆ ಆರಂಭವಾಗಿದ್ದು, ತನಿಖೆಯ ಅಂತಿಮ ವರದಿಯತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.

Continue Reading

ಅಪರಾಧ

Telangana ‘ಇದು ನನ್ನ ಆಯ್ಕೆ’ ಎಂದ ಎಸ್‌ಐಗೆ ದುಬಾರಿ ಆಯಿತು; ಡಿಜಿಪಿಯಿಂದ ಅಮಾನತು ಸೂಚನೆ

Published

on

ಹೈದರಾಬಾದ್: Telangana ದ ರಂಗಾರೆಡ್ಡಿ ಜಿಲ್ಲೆಯಲ್ಲಿ ಆರು ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲನೆ ಮಾಡಲು ಅವಕಾಶ ನೀಡಿದ ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್ (SI) ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಅಮಾನತು ಮಾಡಲು ಆದೇಶ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ವರದಿಗಳ ಪ್ರಕಾರ, ಸಬ್‌-ಇನ್‌ಸ್ಪೆಕ್ಟರ್ ಪೂಜಾರಿ ತಿರುಪತಿ ಅವರು ತಮ್ಮ ಆರು ವರ್ಷದ ಮೊಮ್ಮಗಳನ್ನು ನಗರದ ಜನನಿಬಿಡ ರಸ್ತೆಯಲ್ಲಿ ಕಾರಿನ ಸ್ಟೀರಿಂಗ್ ಹಿಂದೆ ಕುಳ್ಳಿರಿಸಿ ಚಾಲನೆ ಮಾಡಲು ಅವಕಾಶ ನೀಡಿದ್ದರು. ವಾಹನ ನಿಧಾನವಾಗಿ ಚಲಿಸುತ್ತಿದ್ದರೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ವಾಹನಗಳ ಸಾಲು ನಿರ್ಮಾಣವಾಗಿತ್ತು.

ಸ್ಥಳೀಯರು ಈ ಅಪಾಯಕಾರಿ ಕ್ರಮವನ್ನು ಪ್ರಶ್ನಿಸಿದಾಗ, “ಇದು ನನ್ನ ಆಯ್ಕೆ, ಪ್ರಶ್ನೆ ಮಾಡಲು ನೀವು ಯಾರು?” ಎಂದು ಅಧಿಕಾರಿ ಪ್ರತಿಕ್ರಿಯಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪೊಲೀಸ್ ಇಲಾಖೆಯ ವಿರುದ್ಧ ಟೀಕೆ ವ್ಯಕ್ತಪಡಿಸಿ, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಆಗ್ರಹಿಸಿದರು.

ಘಟನೆಯ ಬಳಿಕ ನರ್ಸಿಂಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 125 ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 180 ಮತ್ತು 184ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಇದು ಆಟೋಮ್ಯಾಟಿಕ್ ಕಾರಾಗಿದ್ದರಿಂದ ವಾಹನ ತನ್ನ ನಿಯಂತ್ರಣದಲ್ಲೇ ಇತ್ತು ಎಂದು ಎಸ್‌ಐ ಹೇಳಿದ್ದು, ಮೊಮ್ಮಗಳನ್ನು ವಿಶ್ವದ ಅತಿ ಕಿರಿಯ ಚಾಲಕಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಪ್ರಯತ್ನಕ್ಕೆ ಸಿದ್ಧಪಡಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್, ಸೈಬರಾಬಾದ್ ಪೊಲೀಸ್ ಆಯುಕ್ತರಿಗೆ ಆರೋಪಿತ ಎಸ್‌ಐ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ಆರಂಭಿಸುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ಕ್ರಮವನ್ನು ಇಲಾಖೆ ಕೈಗೊಳ್ಳಲಿದೆ.

Continue Reading

ದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ

Published

on

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.

ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Continue Reading

Trending