ಚಿತ್ರರಂಗದಲ್ಲಿ ಮೌನ, ಅಭಿಮಾನಿಗಳಲ್ಲಿ ಆತಂಕ — ದರ್ಶನ್ ವಿಚಾರಣೆಯ ಹೊಸ ಹಂತಕ್ಕೆ ಚಾಲನೆ! | Hosa Suddi

ಅಪರಾಧ

ಚಿತ್ರರಂಗದಲ್ಲಿ ಮೌನ, ಅಭಿಮಾನಿಗಳಲ್ಲಿ ಆತಂಕ — ದರ್ಶನ್ ವಿಚಾರಣೆಯ ಹೊಸ ಹಂತಕ್ಕೆ ಚಾಲನೆ!

Published

on

ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಂದು (ನವೆಂಬರ್ 10) ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ನಟ ದರ್ಶನ್ ತೂಗುದೀಪ (ಎ2), ಪವಿತ್ರಾ ಗೌಡ (ಎ1) ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ವಿರುದ್ಧದ ನ್ಯಾಯಾಂಗ ವಿಚಾರಣೆ 64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ.

ವಿಚಾರಣೆಯನ್ನು ನ್ಯಾಯಾಧೀಶ ಐ.ಪಿ. ನಾಯಕ್ ಅವರ ಸಮ್ಮುಖದಲ್ಲಿ ನಡೆಸಲಾಗುತ್ತಿದೆ. ಕಳೆದ ನವೆಂಬರ್ 3ರಂದು ನ್ಯಾಯಾಲಯವು ಎಲ್ಲ 17 ಮಂದಿಯ ಮೇಲಿನ ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯನ್ನು ಓದಿ ಹೇಳಿದಾಗ, ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಸಾಕ್ಷಿಗಳನ್ನು ಹಾಜರುಪಡಿಸುತ್ತಿದ್ದು, ಆರೋಪಗಳನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ನಟ ದರ್ಶನ್ ಪರವಾಗಿ ವಕೀಲ ಸುನೀಲ್ ಕುಮಾರ್ ಮತ್ತು ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಬಾಲನ್ ವಾದ ಮಂಡಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಆಗಸ್ಟ್ 14, 2025 ರಂದು ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ್ದರಿಂದ, ಪ್ರಮುಖ ಆರೋಪಿಗಳು ಈಗಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ಪವಿತ್ರಾ ಗೌಡ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ನವೆಂಬರ್ 6ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಪವಿತ್ರಾ ವಿಚಾರಣೆಯ ಅವಧಿಯಲ್ಲಿ ಬಂಧನದಲ್ಲೇ ಮುಂದುವರಿಯಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಬೆಳವಣಿಗೆಗೆ ಮೌನ ವಾತಾವರಣ ಸೃಷ್ಟಿಯಾಗಿದೆ. ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆಂಬಲಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಇದರ ನಡುವೆ, ಪ್ರಾಸಿಕ್ಯೂಷನ್ ಪರವಾಗಿ ಒಟ್ಟು 230 ಸಾಕ್ಷ್ಯಗಳಲ್ಲಿ ಸುಮಾರು 70 ಸಾಕ್ಷ್ಯಗಳು ನಿರ್ಣಾಯಕವಾಗಿವೆ ಎಂದು ಮೂಲಗಳು ತಿಳಿಸಿವೆ. ಮೊದಲ ಹಂತದ ಸಾಕ್ಷ್ಯ ವಿಚಾರಣೆಯು ಇಂದು ಪ್ರಾರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಂಗ ತೀರ್ಪು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರತ್ತ ರಾಜ್ಯದ ಗಮನ ನೆಟ್ಟಿದೆ.

Trending

Exit mobile version