ದೇಶ
ಶಶಿಕಲಾ ಹೊಸ ಪಕ್ಷಕ್ಕೆ ಮುಹೂರ್ತ: ಒಂದು ವಾರದಲ್ಲಿ ಹೆಸರು ಘೋಷಣೆ, 2026ರಲ್ಲಿ ನಿರ್ಣಾಯಕ ಪಾತ್ರದ ಗುರಿ
ಮಧುರೈ
ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ತಾವು ಸ್ಥಾಪಿಸಿರುವ ಹೊಸ ರಾಜಕೀಯ ಪಕ್ಷದ ಹೆಸರನ್ನು ಒಂದು ವಾರದೊಳಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷವು ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, ಪಕ್ಷದ ಹೆಸರು ಶೀಘ್ರದಲ್ಲೇ ಬಹಿರಂಗವಾಗಲಿದ್ದು, ಮೈತ್ರಿಕೂಟದ ಕುರಿತು ಮಾತುಕತೆ ನಡೆಯುತ್ತಿದೆ. ಈ ಮಾತುಕತೆಗಳು ಉತ್ತಮ ನಿರ್ಧಾರದಲ್ಲಿ ಅಂತ್ಯಗೊಳ್ಳಲಿವೆ ಎಂದು ಹೇಳಿದರು.
ರಾಮನಾಥಪುರಂನಲ್ಲಿ ಘೋಷಣೆ, ಧ್ವಜ ಅನಾವರಣ
ಮಂಗಳವಾರ ರಾಮನಾಥಪುರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಶಿಕಲಾ ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಘೋಷಣೆ ಮಾಡಿದರು. ಜೊತೆಗೆ ಪಕ್ಷದ ಧ್ವಜವನ್ನೂ ಅನಾವರಣಗೊಳಿಸಿದರು. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮವಾರ್ಷಿಕೋತ್ಸವದಂದೇ ಪಸುಂಪನ್ ಬಳಿಯ ಕೊಟ್ಟೈಮೇಡುವಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.
ಅಣ್ಣಾದೊರೈ, ಎಂಜಿಆರ್ ಹಾಗೂ ಜಯಲಲಿತಾ ಅವರ ಭಾವಚಿತ್ರಗಳನ್ನು ಒಳಗೊಂಡ ಕಪ್ಪು-ಬಿಳಿ-ಕೆಂಪು ಬಣ್ಣಗಳ ಧ್ವಜವನ್ನು ಅನಾವರಣಗೊಳಿಸಿ, ಇದು ದ್ರಾವಿಡ ಚಳವಳಿಯ ನಿರಂತರತೆಯ ಸಂಕೇತ ಎಂದು ಶಶಿಕಲಾ ಹೇಳಿದರು. ತಮ್ಮ ಪಕ್ಷವು ದ್ರಾವಿಡ ದಿಗ್ಗಜರ ಸೈದ್ಧಾಂತಿಕ ಮಾರ್ಗವನ್ನು ಅನುಸರಿಸಲಿದೆ ಎಂಬುದನ್ನೂ ಸ್ಪಷ್ಟಪಡಿಸಿದರು.
ಎಐಎಡಿಎಂಕೆಯಿಂದ ಉಚಿತ ಭರವಸೆಗಳು
ಇತ್ತ, ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಹೊಸ ಉಚಿತ ಕೊಡುಗೆಗಳನ್ನು ಘೋಷಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಡಿಎಂಕೆ ಸರ್ಕಾರದ ತೆರಿಗೆಗಳಿಂದ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ತಗ್ಗಿಸಲು ಪ್ರತಿ ಕುಟುಂಬಕ್ಕೆ 10,000 ರೂ. ನಗದು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಬಿಪಿಎಲ್ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ಸಹಾಯವನ್ನು 2,000 ರೂ.ಗೆ ಹೆಚ್ಚಿಸುವುದನ್ನೂ ಅವರು ಘೋಷಿಸಿದ್ದಾರೆ.