ರಾಜಕೀಯ
ಯತೀಂದ್ರ ಬಾಂಬ್ ನಂತರ ಜಾರಕಿಹೊಳಿ ಸ್ಪಷ್ಟನೆ — “ಅದು ಅವರ ವೈಯಕ್ತಿಕ ಅಭಿಪ್ರಾಯ”
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾದ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. “ಯತೀಂದ್ರ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಅಂತಿಮವಾಗಿ ನಾಯಕತ್ವದ ವಿಚಾರವನ್ನು ಪಕ್ಷ ಮತ್ತು ಶಾಸಕರು ತೀರ್ಮಾನಿಸುತ್ತಾರೆ,” ಎಂದು ಅವರು ಸ್ಪಷ್ಟಪಡಿಸಿದರು.
ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದ ಕಾಕತಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಅಂತಾ ಈಗಲೇ ಹೇಳಿದ್ದೇವೆ. ಆದರೆ ಪಕ್ಷವೇ ಅಂತಿಮ ನಿರ್ಧಾರ ಮಾಡುತ್ತದೆ,” ಎಂದು ಹೇಳಿದರು.
ಅಹಿಂದ ನಾಯಕತ್ವದ ವಿಷಯದಲ್ಲೂ ಅವರು ಸ್ಪಷ್ಟನೆ ನೀಡುತ್ತಾ, “ಅಹಿಂದ ನಾಯಕತ್ವ ಹಿಂದೆಯೂ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೆ. ಸಿದ್ದರಾಮಯ್ಯ ಅವರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಅಂತಿಮ ನಿರ್ಧಾರ ಪಕ್ಷದ ಹಸ್ತದಲ್ಲಿದೆ,” ಎಂದರು.
ಈ ಹಿಂದೆ ಯತೀಂದ್ರ ಸಿದ್ದರಾಮಯ್ಯ ಅವರು, “2028ರ ಚುನಾವಣೆಯಲ್ಲಿ ನನ್ನ ತಂದೆ ಸ್ಪರ್ಧಿಸಲಾರರು. ಅವರ ನಂತರ ಸತೀಶ್ ಜಾರಕಿಹೊಳಿ ಅವರಂತವರು ಪಕ್ಷವನ್ನು ಮುನ್ನಡೆಸುವ ಶಕ್ತಿ ಹೊಂದಿದ್ದಾರೆ,” ಎಂದು ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿತ್ತು.
ಆದರೆ ಬಳಿಕ ಸ್ಪಷ್ಟನೆ ನೀಡಿದ ಯತೀಂದ್ರ, “ನಾನು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಹೇಳಿಲ್ಲ. ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರು ಮುಂದಾಳತ್ವ ವಹಿಸಬೇಕು ಎಂಬ ಉದ್ದೇಶದಿಂದ ಹೇಳಿದ್ದೇನೆ,” ಎಂದು ತಿಳಿಸಿದ್ದಾರೆ.