ನಾಲೆಗೆ ಸಿಲುಕಿದ ಕಾಡಾನೆಗೆ ಅರಣ್ಯ ಇಲಾಖೆಯ ಅದ್ಭುತ ರಕ್ಷಣಾ ಆಪರೇಷನ್ | Hosa Suddi

ದೇಶ

ನಾಲೆಗೆ ಸಿಲುಕಿದ ಕಾಡಾನೆಗೆ ಅರಣ್ಯ ಇಲಾಖೆಯ ಅದ್ಭುತ ರಕ್ಷಣಾ ಆಪರೇಷನ್

Published

on

ಮಂಡ್ಯ: ಎರಡು ದಿನಗಳ ಹಿಂದೆ ಶಿವನಸಮುದ್ರ ಬಳಿಯ 20 ಅಡಿ ಆಳದ ನಾಲೆಗೆ ಬಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದೆ. ಮಳವಳ್ಳಿ ತಾಲೂಕಿನ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಆನೆ ಓಡಾಡುತ್ತಿರುವುದು ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆದರೆ ನವೆಂಬರ್ 15ರ ರಾತ್ರಿ ನೀರು ಪೂರೈಸುವ ಕೆನಲ್‌ ಗೇಟ್‌ ಮೂಲಕ ಆನೆ ನಾಲೆಗೆ ಇಳಿದಿದ್ದು, ಜೋರಾದ ನೀರಿನ ಹರಿವು ಕಾರಣದಿಂದ ಮೇಲೆ ಬರಲು ಸಾಧ್ಯವಾಗಿರಲಿಲ್ಲ.

ಭಾನುವಾರ ಬೆಳಗ್ಗೆ ಆನೆ ಕಾಣದಿರುವುದನ್ನು ಗಮನಿಸಿದ ಸಿಬ್ಬಂದಿ ಹುಡುಕಾಟ ನಡೆಸಿ ಅದು ನಾಲೆಯಲ್ಲಿ ಸಿಲುಕಿರುವುದು ಪತ್ತೆಯಾಯಿತು. ಸಂಜೆವರೆಗೂ ಆನೆ ಸ್ವತಃ ಮೇಲಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯಲಾದರೂ ಯಾವುದೂ ಫಲಿಸಲಿಲ್ಲ. ಇದರಿಂದ ಡಿಸಿಎಫ್ ರಘು ಮತ್ತು ವನ್ಯಜೀವಿ ವಲಯ ಮೈಸೂರು ವಿಭಾಗದ ಡಿಸಿಎಫ್ ಪ್ರಭು ನೇತೃತ್ವದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

ಮೊದಲಿಗೆ ನಾಲೆಯ ನೀರಿನ ಹರಿವು ನಿಯಂತ್ರಿಸಲಾಯಿತು. ನಂತರ ಆನೆಗೆ ಆಹಾರ ನೀಡಿ, tranquilizer ಗನ್ ಮೂಲಕ ಅರವಳಿಕೆ ಮದ್ದು ನೀಡಲಾಯಿತು. ಪ್ರಜ್ಞೆ ತಪ್ಪಿದ ಬಳಿಕ ಹೈಡ್ರಾಲಿಕ್ ಕ್ರೇನ್ ಬಳಸಿ ಹಗ್ಗಗಳನ್ನು ಕಟ್ಟಿ ಆನೆಯನ್ನು ನಿಂತ ಸ್ಥಿತಿಯಲ್ಲಿ ಮೇಲಕ್ಕೆ ಎತ್ತಿ ಕಂಟೇನರ್ ವಾಹನದಲ್ಲಿ ಇರಿಸಲಾಯಿತು. ಬಳಿಕ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ನಾಲೆಯಲ್ಲಿ ಹಲವು ಗಂಟೆಗಳ ಕಾಲ ನಿಂತಿದ್ದರಿಂದ ಆನೆಯ ಸೊಂಡಿಲಿನ ತುದಿ ಬಿಳಿ ಬಣ್ಣಕ್ಕೆ ತಿರುಗಿದ್ದು, ಕಾಲಿಗೆ ಫಂಗಸ್ ಸೋಂಕಿನ ಅನುಮಾನ ವ್ಯಕ್ತವಾಗಿದೆ. ಪಶುವೈದ್ಯರು ಆನೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕಾರ್ಯಾಚರಣೆ ಅರಣ್ಯ ಇಲಾಖೆಯ ಸಮನ್ವಯ, ತಂತ್ರಜ್ಞಾನ ಬಳಕೆ ಮತ್ತು ತ್ವರಿತ ಚುರುಕು ಕಾರ್ಯಾಚರಣೆಯ ಉದಾಹರಣೆಯಾಗಿ ಗುರುತಿಸಲಾಗಿದೆ.

Trending

Exit mobile version