“ಆಹ್ವಾನ ಬಂದರೆ ಮಾತ್ರ ದೆಹಲಿಗೆ” — ಸಿಎಂ ಸಿದ್ದರಾಮಯ್ಯ ಬಿಗ್ ಸ್ಟೇಟ್ಮೆಂಟ್ | Hosa Suddi

ದೇಶ

“ಆಹ್ವಾನ ಬಂದರೆ ಮಾತ್ರ ದೆಹಲಿಗೆ” — ಸಿಎಂ ಸಿದ್ದರಾಮಯ್ಯ ಬಿಗ್ ಸ್ಟೇಟ್ಮೆಂಟ್

Published

on

ಮಂಗಳೂರು: “ಔಪಚಾರಿಕ ಆಹ್ವಾನ ಬಂದರೆ ಮಾತ್ರ ನವದೆಹಲಿಗೆ ಹೋಗುತ್ತೇನೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಡೀಕೆ ಶಿವಕುಮಾರ್ ನವದೆಹಲಿಗೆ ಮದುವೆ ಹಾಗೂ ಪಕ್ಷದ ಕಾರ್ಯಕ್ರಮಕ್ಕಾಗಿ ಭೇಟಿ ನೀಡಿದ ನಂತರ, ನಾಯಕತ್ವ ಬದಲಾವಣೆಯ ಊಹಾಪೋಹಗಳು ಮರುಚರ್ಚೆಗೆ ಬಂದಿರುವ ಸಂದರ್ಭದಲ್ಲಿಯೇ ಈ ಹೇಳಿಕೆ ಹೊರಬಿದ್ದಿದೆ.

ಇತ್ತೀಚೆಗೆ ಇಬ್ಬರು ನಾಯಕರು ಪರಸ್ಪರ ಉಪಹಾರ ಕೂಟಗಳ ಮೂಲಕ ಒಗ್ಗಟ್ಟಿನ ಸಂದೇಶ ನೀಡಿದ್ದರೂ, ರಾಜ್ಯ ರಾಜಕಾರಣದಲ್ಲಿ “ಪವರ್ ಫೈಟ್” ಮಾತುಕತೆಗಳು ಮುಂದುವರಿದಿವೆ.

ಶಿವಕುಮಾರ್ ದೆಹಲಿಗೆ ತೆರಳಿರುವಾಗ, ಸಿದ್ದರಾಮಯ್ಯ ಸಮಾಜ ಸುಧಾರಕ ಶ್ರೀ ನಾರಾಯಣ ಗುರು–ಮಹಾತ್ಮ ಗಾಂಧಿ ಭೇಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮುಖ್ಯ ಭಾಷಣ ಮಾಡಿದರು ಮತ್ತು ಬಳಿಕ ಇಬ್ಬರೂ ಉಪಹಾರ ಕೂಟದಲ್ಲಿ ಪಾಲ್ಗೊಂಡರು.

ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
“ಪಕ್ಷ ಹೈಕಮಾಂಡ್‌ನಿಂದ ಸಭೆಗೆ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ನಾನು ದೆಹಲಿಗೆ ಹೋಗುತ್ತೇನೆ. ನನಗೆ ಇನ್ನೂ ತಿಳಿಸಿಲ್ಲ,” ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ್ ದೆಹಲಿಗೆ ಹೋಗುತ್ತಿರುವ ಪ್ರಶ್ನೆಗೆ, “ಅವರಿಗೆ ಯಾರಾದರೂ ಹೋಗಬೇಡ ಎಂದು ಹೇಳಿದರುನಾ? ಹೋಗಲಿ,” ಎಂದು ಹಾಸ್ಯಮಿಶ್ರಿತ ಉತ್ತರ ನೀಡಿದರು.

ದೆಹಲಿಗೆ ಹೊರಡುವ ಮೊದಲು ಮಾತನಾಡಿದ ಡಿಕೆಶಿ,
“ನಾನು ಮದುವೆಗೆ ಮತ್ತು ಡಿಸೆಂಬರ್ 14ರ ‘ವೋಟ್ ಚೋರಿ’ ಕಾರ್ಯಕ್ರಮದ ಸಿದ್ಧತೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ. ಪ್ರತಿ ಜಿಲ್ಲೆಯಿಂದ ಕನಿಷ್ಠ 300 ಕಾರ್ಯಕರ್ತರನ್ನು ದೆಹಲಿಗೆ ಕರೆದೊಯ್ಯಲು ಸೂಚಿಸಿದ್ದೇನೆ,” ಎಂದು ತಿಳಿಸಿದರು.

ವೇಣುಗೋಪಾಲ್ ಅವರನ್ನು ಸಿಎಂ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ,
“ಸಿದ್ದರಾಮಯ್ಯ ಅವರು ವೇಣುಗೋಪಾಲ್, ರಾಹುಲ್ ಗಾಂಧಿ ಅಥವಾ ಖರ್ಗೆ ಅವರನ್ನು ಭೇಟಿಯಾದರೆ ಅದರಲ್ಲಿ ತಪ್ಪೇನು?” ಎಂದು ಪ್ರತಿಪ್ರಶ್ನಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ವೇಣುಗೋಪಾಲ್ ಆಗಮನದ ವೇಳೆ ಘೋಷಣೆ ಕೂಗಿದ ಬಗ್ಗೆ ಪ್ರಶ್ನಿಸಿದಾಗ,
“ಘೋಷಣೆಗಳಲ್ಲಿ ತಪ್ಪೇನಿದೆ? ಕೆಲವರು ‘ಮೋದಿ ಮೋದಿ’, ಕೆಲವರು ‘ಡಿಕೆ ಡಿಕೆ’, ಇನ್ನೂ ಕೆಲವರು ‘ಸಿದ್ದು ಸಿದ್ದು’ ಅಂತ ಕೂಗುತ್ತಾರೆ. ಜನರು ಪ್ರೀತಿಯಿಂದ ಮಾಡುತ್ತಾರೆ. ಅದನ್ನು ಕ್ರೀಡಾ ಮನೋಭಾವದಿಂದಲೇ ತೆಗೆದುಕೊಳ್ಳಬೇಕು,” ಎಂದು ಡಿಕೆಶಿ ಹೇಳಿದ್ದಾರೆ.

Trending

Exit mobile version