ದೇಶ
ಇದು ‘ಜೋಕ್ ಆಫ್ ದ ಇಯರ್ 2026’ – ಹೆಚ್. ವಿಶ್ವನಾಥ್ ವ್ಯಂಗ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದೇವರಾಜ ಅರಸು (D. Devaraj Urs) ಅವರ ಆಡಳಿತ ದಾಖಲೆಯನ್ನು ಮುರಿದಿದ್ದೇನೆ ಎನ್ನುವ ಹೇಳಿಕೆಗೆ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H. Vishwanath) ತೀವ್ರ ವ್ಯಂಗ್ಯವಾಡಿದ್ದಾರೆ. ಇದು ‘ಜೋಕ್ ಆಫ್ ದ ಇಯರ್ 2026’ ಎಂದು ಅವರು ಕಿಡಿಕಾರಿದ್ದಾರೆ.
ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿಶ್ವನಾಥ್, ದೇವರಾಜ ಅರಸು ಅವರು ನಮ್ಮೆಲ್ಲರನ್ನು ಬೆಳೆಸಿದ ಮಹಾನ್ ನಾಯಕ ಎಂದು ಹೇಳಿದರು. ದೇವರಾಜ ಅರಸು ಮತ್ತು ಇಂದಿರಾ ಗಾಂಧಿ ಅವರನ್ನು ಸಿದ್ದರಾಮಯ್ಯನವರಷ್ಟು ಯಾರೂ ಬೈದಿಲ್ಲ. ಆದರೆ ಈಗ ಅದೇ ಅರಸು ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.
ದೇವರಾಜ ಅರಸು ಅವರು ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳಿಗೆ ನ್ಯಾಯ ನೀಡಿದರು. ಇಂದು ರಾಜ್ಯದಲ್ಲಿ ಹಿಂದುಳಿದ ವರ್ಗದ ಅಧಿಕಾರಿಗಳು ಇದ್ದರೆ, ಅದಕ್ಕೆ ಅರಸು ಕಾರಣ ಎಂದು ವಿಶ್ವನಾಥ್ ಹೇಳಿದರು. ರಾಹುಲ್ ಗಾಂಧಿ ಹೇಳಿದ್ರು ಅನ್ನೋ ಕಾರಣಕ್ಕೆ ವರದಿಯನ್ನು ಬಿಸಾಕಿದಿರಿ. ಆದರೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಧೈರ್ಯ ಸಿದ್ದರಾಮಯ್ಯಗೆ ಇಲ್ಲ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಶಾಂತಿ ಇಲ್ಲ, ಸುಭಿಕ್ಷೆಯೂ ಇಲ್ಲ. ದೇವರಾಜ ಅರಸು ಅವರಿಗೆ ಸಾಟಿ ಯಾರೂ ಇಲ್ಲ. ಅರಸು ಸಮಾನ ಎನ್ನುವುದು ನಗೆಪಾಟಲು ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಯಾವ ಅಹಿಂದ ನಾಯಕರು? ಅವರಿಗೆ ಕೃತಜ್ಞತೆ ಇಲ್ಲ. ಯುವ ನಾಯಕತ್ವವನ್ನು ಬೆಳೆಸುವುದಿಲ್ಲ. ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದ್ದಾರೆ. ಯಾವಾಗ ಹೊಡೆಯುತ್ತೋ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.