ದೇಶ
ಗೋದೂಳಿ ಮುಹೂರ್ತದಲ್ಲಿ ಡಿಕೆಶಿ ಪ್ರಮಾಣವಚನ? ಕಾಂಗ್ರೆಸ್‌ನಲ್ಲಿ ಭಾರಿ ಚಟುವಟಿಕೆ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಅಂಗೀಕರಿಸಿರುವುದಾಗಿ ತಿಳಿದುಬಂದಿದೆ. ಸಂವಿಧಾನಬದ್ಧ ಪ್ರಕ್ರಿಯೆಯಂತೆ ರಾಜೀನಾಮೆ ಅಂಗೀಕಾರಗೊಂಡಿದ್ದು, ಈ ಕುರಿತು ಲೋಕಭವನದಿಂದ ಅಧಿಕೃತ ಆದೇಶ ಹೊರಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದಾಗ್ಯೂ, ಹೊಸ ಸರ್ಕಾರ ರಚನೆಯಾಗುವವರೆಗೆ ಸಿದ್ದರಾಮಯ್ಯ ಅವರು ಮುಂದಿನ 2-3 ದಿನಗಳ ಕಾಲ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಹಿನ್ನೆಲೆ ಗುರುವಾರ ಸಿಎಂ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದರು. ಬಳಿಕ ಇಂದೋರ್‌ನಿಂದ ಬೆಂಗಳೂರಿಗೆ ವಾಪಸ್ಸಾದ ರಾಜ್ಯಪಾಲರು ಇಂದು ಬೆಳಿಗ್ಗೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಅಂಗೀಕಾರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯುವ ಸಾಧ್ಯತೆಗಳಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಪಕ್ಷದ ಮೂಲಗಳ ಪ್ರಕಾರ, ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋದೂಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಸಲು ಈಗಾಗಲೇ ಭರದ ಸಿದ್ಧತೆಗಳು ಆರಂಭವಾಗಿವೆ.
ರಾಜ್ಯದ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆದಿದ್ದ ಹೈಡ್ರಾಮಾಕ್ಕೆ ಈಗ ಅಂತಿಮ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಸರ್ಕಾರದ ಹೊಸ ಅಧ್ಯಾಯ ಆರಂಭವಾಗಲಿದೆಯೇ ಎಂಬ ಕುತೂಹಲ ರಾಜ್ಯದಾದ್ಯಂತ ಹೆಚ್ಚಾಗಿದೆ.