ದೇಶ
ಹಾವು ಕಚ್ಚಿದರೆ 2 ನಿಮಿಷದಲ್ಲೇ ವಿಷ ಪತ್ತೆ; ರಾಜ್ಯದ ವಿಜ್ಞಾನಿಯಿಂದ ಕ್ರಾಂತಿಕಾರಿ ಮೆಡಿಕಲ್ ಕಿಟ್
ಬೆಂಗಳೂರು: ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ಹಾವು ಕಚ್ಚಿದಾಗ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪ್ರಾಣಾಪಾಯ ಎದುರಿಸುವ ಪ್ರಕರಣಗಳು ಇಂದಿಗೂ ಹೆಚ್ಚಾಗಿವೆ. ಆದರೆ ಇನ್ನು ಮುಂದೆ ಹಾವು ಕಚ್ಚಿತೆಂದು ಆತಂಕಪಡಬೇಕಾಗಿಲ್ಲ. ರಾಜ್ಯದ ವಿಜ್ಞಾನಿಯೊಬ್ಬರು ಹಾವಿನ ವಿಷವನ್ನು ಕೇವಲ ಎರಡು ನಿಮಿಷಗಳಲ್ಲಿ ಪತ್ತೆಹಚ್ಚುವ ಕ್ರಾಂತಿಕಾರಿ ಮೆಡಿಕಲ್ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಎಡನೀರು ಗ್ರಾಮದವರಾಗಿರುವ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಶ್ಯಾಮ ಭಟ್ ಅವರು ಈ ಹೊಸ ಆವಿಷ್ಕಾರಕ್ಕೆ ರೂಪ ನೀಡಿದ್ದಾರೆ. ಈ ಕಿಟ್‌ಗೆ ‘ಸ್ನೇಕ್ ವೆನಮ್ ರ್ಯಾಪಿಡ್ ಟೆಸ್ಟ್ ಕಿಟ್’ ಎಂದು ಹೆಸರಿಡಲಾಗಿದ್ದು, ಕೇಂದ್ರ ಸರ್ಕಾರದಿಂದ ಪೇಟೆಂಟ್ ಕೂಡ ಲಭಿಸಿದೆ.
ಈ ಕಿಟ್ ಗರ್ಭಧಾರಣೆ ಪರೀಕ್ಷಿಸುವ ಕಿಟ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಹಾವು ಕಚ್ಚಿದ ವ್ಯಕ್ತಿಯ ರಕ್ತದ ಎರಡು ಹನಿಗಳನ್ನು ಕಿಟ್‌ನಲ್ಲಿ ಹಾಕಿದರೆ, ಕೇವಲ 2 ನಿಮಿಷಗಳಲ್ಲಿ ಅದು ವಿಷಕಾರಿ ಹಾವೋ ಅಥವಾ ವಿಷರಹಿತ ಹಾವೋ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಸಾಮಾನ್ಯವಾಗಿ ವಿಷಕಾರಿ ಹಾವಿನ ವಿಷ ಹತ್ತು ನಿಮಿಷಗಳಲ್ಲಿ ದೇಹದಾದ್ಯಂತ ಹರಡುವುದರಿಂದ, ಈ ಕಿಟ್ ಅಮೂಲ್ಯ ಸಮಯ ಉಳಿಸಲು ಸಹಕಾರಿಯಾಗಿದೆ.
ಇದುವರೆಗೆ ಜಗತ್ತಿನಲ್ಲೇ ಹಾವಿನ ವಿಷವನ್ನು ತಕ್ಷಣ ಪತ್ತೆ ಮಾಡುವಂತಹ ಸಾಧನ ಅಭಿವೃದ್ಧಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭಟ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ ಈ ಸಂಶೋಧನೆಯನ್ನು ಯಶಸ್ವಿಯಾಗಿ ರೂಪಿಸಲಾಗಿದೆ ಎಂದು ಡಾ. ಶ್ಯಾಮ ಭಟ್ ತಿಳಿಸಿದ್ದಾರೆ.
ಗಮನಾರ್ಹವಾಗಿ, ಮಹಾರಾಷ್ಟ್ರ ಸರ್ಕಾರದಿಂದ ಈಗಾಗಲೇ ಈ ಕಿಟ್‌ಗೆ ಆರ್ಡರ್ ಬಂದಿದೆ. ಹಲವು ಸಂಘ ಸಂಸ್ಥೆಗಳು ಕೂಡ ಬೇಡಿಕೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಕಿಟ್ ಅನೇಕ ಜೀವಗಳನ್ನು ಉಳಿಸುವ ನಿರೀಕ್ಷೆ ವ್ಯಕ್ತವಾಗಿದೆ.