ಚುನಾವಣೆ
ಬಿಹಾರ ವಿಧಾನಸಭಾ ಚುನಾವಣೆ ಅರ್ಜಿ ತಿರಸ್ಕಾರ: ಜನ್ ಸುರಾಜ್‌ಗೆ ಸುಪ್ರೀಂಕೋರ್ಟ್ ಚಾಟಿ
ನವದೆಹಲಿ, ಫೆಬ್ರವರಿ 06: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ (Jan Suraaj) ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಚುನಾವಣಾ ಫಲಿತಾಂಶ ರದ್ದುಗೊಳಿಸಿ ಮರುಚುನಾವಣೆಗೆ ಆದೇಶಿಸಬೇಕು ಎಂಬ ಬೇಡಿಕೆಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ, “ನಿಮ್ಮ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ? ಜನರು ತಿರಸ್ಕರಿಸಿದ ನಂತರ ಜನಪ್ರಿಯತೆ ಗಳಿಸಲು ನ್ಯಾಯಾಂಗ ವೇದಿಕೆಯನ್ನು ಬಳಸುವುದು ಸರಿಯಲ್ಲ” ಎಂದು ಕಟುವಾಗಿ ಟೀಕಿಸಿದೆ. ರಾಜಕೀಯ ಪಕ್ಷದ ಒತ್ತಾಯದ ಮೇರೆಗೆ ಇಡೀ ರಾಜ್ಯಕ್ಕೆ ಸರ್ವವ್ಯಾಪಿ ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ತಲಾ 10,000 ರೂ. ವರ್ಗಾವಣೆ ಮಾಡುವ ಮೂಲಕ ಬಿಹಾರ ಸರ್ಕಾರ ಮಾದರಿ ನೀತಿ ಸಂಹಿತೆ (MCC) ಉಲ್ಲಂಘಿಸಿದೆ ಎಂದು ಜನ್ ಸುರಾಜ್ ಪಕ್ಷ ಆರೋಪಿಸಿತ್ತು. ಈ ಯೋಜನೆಯು ಮಹಿಳೆಯರ ಸ್ವ-ಉದ್ಯೋಗ ಹಾಗೂ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು ಆರಂಭಿಕ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.
ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ 15,600 ಕೋಟಿ ರೂ. ವಿತರಿಸಿದ್ದು, ಇದು ಸಂವಿಧಾನದ 324ನೇ ವಿಧಿ ಹಾಗೂ ಜನಪ್ರತಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಉಲ್ಲಂಘನೆಯಾಗಿ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ವಿಷಯದಲ್ಲಿ ರಿಟ್ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡರೆ, ಇಂಡಿ ಒಕ್ಕೂಟ 35 ಸ್ಥಾನಗಳನ್ನು ಮಾತ್ರ ಗಳಿಸಿತು. ಜನ್ ಸುರಾಜ್ ಪಕ್ಷ ಒಂದೂ ಸ್ಥಾನ ಗೆಲ್ಲದೆ ಭಾರೀ ಹಿನ್ನಡೆ ಅನುಭವಿಸಿತು.