Connect with us

ದೇಶ

‘ಏಳು ತಿಂಗಳಿಗೆ ಹುಟ್ಟಿದವರಂತೆ ಮಾತನಾಡಬೇಡಿ’ – ಸುರೇಶ್ ಕುಮಾರ್ ವ್ಯಂಗ್ಯ

Published

on

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮಾತಿನ ಮಲ್ಲಯುದ್ಧ ತೀವ್ರ ಸ್ವರೂಪ ಪಡೆದಿದ್ದು, ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಹಾಲಿ ಸಚಿವ ಬೈರತಿ ಸುರೇಶ್ ನಡುವಿನ ಟಾಕ್ ವಾರ್ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣ ವಿವಾದದ ಹಿನ್ನೆಲೆಯಲ್ಲಿ ನಡೆದ ಚರ್ಚೆ ವೇಳೆ ಈ ವಾಗ್ವಾದ ಉಂಟಾಯಿತು.

ಆರೋಪ–ಪ್ರತ್ಯಾರೋಪದ ನಡುವೆ ಮಾತನಾಡುತ್ತಿದ್ದ ಸುರೇಶ್ ಕುಮಾರ್, ಮಧ್ಯಪ್ರವೇಶ ಮಾಡಿದ ಬೈರತಿ ಸುರೇಶ್ ವಿರುದ್ಧ ವ್ಯಂಗ್ಯವಾಡಿದರು. “ಒಂಬತ್ತು ತಿಂಗಳಿಗೆ ಹುಟ್ಟಿದ್ದರೆ ಸರಿಯಾಗುತ್ತಿತ್ತು, ಏಳು ತಿಂಗಳಿಗೆ ಹುಟ್ಟಿದವರಂತೆ ಮಾತನಾಡಬಾರದು” ಎಂದು ಅವರು ಹೇಳಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸುರೇಶ್ ಕುಮಾರ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬೈರತಿ ಸುರೇಶ್ ಆಕ್ರೋಶ ಹೊರಹಾಕಿದ್ದು, ಬಿಜೆಪಿ ಶಾಸಕ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸುರೇಶ್ ಕುಮಾರ್ ನೀವು ಹಿರಿಯರು, ಇಂತಹ ಮಾತುಗಳು ಸರಿಯಲ್ಲ” ಎಂದು ಸ್ಪಷ್ಟಪಡಿಸಿದರು.

ಮುಂದುವರಿದು ಮಾತನಾಡಿದ ಸಿಎಂ, ರಾಜ್ಯಪಾಲರ ಕುರಿತ ಅಭಿಪ್ರಾಯ ಬೇರೆ ವಿಷಯ, ಆದರೆ ವ್ಯಕ್ತಿಗತವಾಗಿ ಬೈರತಿ ಸುರೇಶ್ ಕುರಿತು ಬಳಸಿದ ಪದಗಳನ್ನು ಒಪ್ಪಲು ಸಾಧ್ಯವಿಲ್ಲ. ಆ ವಿವಾದಿತ ಪದವನ್ನು ಕಡತದಿಂದ ತೆಗೆದುಹಾಕಬೇಕು ಎಂದು ಸಲಹೆ ನೀಡಿದರು. ಬಳಿಕ ಸ್ಪೀಕರ್ ಆ ಪದವನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕುವಂತೆ ಸೂಚಿಸಿದರು.

ಇದೇ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು. “ರಾಜ್ಯಪಾಲರು ಕರ್ನಾಟಕ ಬಿಟ್ಟು ತೊಲಗಲಿ, ರಾಜಭವನದಲ್ಲಿ ಇರಲು ಯೋಗ್ಯತೆ ಇಲ್ಲ” ಎಂದು ಕಿಡಿಕಾರಿದರು. ಜೊತೆಗೆ, “ಬಿಜೆಪಿ ಲಜ್ಜೆಗೆಟ್ಟ ಪಕ್ಷ, ಅದರಿಂದ ಪಾಠ ಕಲಿಯಬೇಕಿಲ್ಲ” ಎಂದು ಅವರು ವಾಗ್ವಾದ ಮುಂದುವರಿಸಿದರು.

ವಿಧಾನಸಭೆಯಲ್ಲಿ ನಡೆದ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಉದ್ವಿಗ್ನತೆಯನ್ನು ಸೃಷ್ಟಿಸಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

Nepal ಭೀಕರ ಪ್ರವಾಹ: ಸಾವಿನ ಸಂಖ್ಯೆ 469ಕ್ಕೆ ಏರಿಕೆ, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ!

Published

on

By

ಕಠ್ಮಂಡು, ನೇಪಾಳ: Nepal ದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ದೇಶ ತತ್ತರಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದ್ದು, ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಭರದಿಂದ ಸಾಗಿವೆ.

ಪ್ರವಾಹದಲ್ಲಿ ನಾಪತ್ತೆಯಾಗಿರುವವರಲ್ಲಿ ನೇಪಾಳ ಪೊಲೀಸ್, ಸೇನೆ, ಸಶಸ್ತ್ರ ಪೊಲೀಸ್ ಪಡೆ, ಕಸ್ಟಮ್ಸ್ ಹಾಗೂ ವಲಸೆ ಕಚೇರಿ ಸಿಬ್ಬಂದಿಯೂ ಸೇರಿದ್ದಾರೆ. ವಿದೇಶಿ ಪ್ರಜೆಗಳು ಹಾಗೂ ವಿದೇಶಗಳಲ್ಲಿ ವಾಸಿಸುವ ನೇಪಾಳಿ ನಾಗರಿಕರೂ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ. ಪ್ರವಾಹದಲ್ಲಿ ಗಾಯಗೊಂಡವರಿಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆಗೆ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನೇಪಾಳ ಸೇನೆ ಹಾಗೂ ಖಾಸಗಿ ವಲಯದ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಹೆಲಿಕಾಪ್ಟರ್‌ಗಳ ಮೂಲಕ ಈಗಾಗಲೇ ಸಾವಿರಾರು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಕೆಸರು, ಬಂಡೆಗಳು ಮತ್ತು ನೀರು ಹರಿದುಬಂದಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ರಸ್ತೆ ಸಂಪರ್ಕ ಪುನಃಸ್ಥಾಪನೆ ಹಾಗೂ ಪರಿಹಾರ ಕಾರ್ಯಾಚರಣೆಗಳೂ ಮುಂದುವರಿದಿವೆ.

ಈ ನಡುವೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣಾ ಕಾರ್ಯವೂ ನಡೆಯುತ್ತಿದೆ. ನೇಪಾಳದ ತ್ರಿಶೂಲಿ-1 ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ಸೇರಿದಂತೆ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಭಾರತೀಯ ಅಧಿಕಾರಿಗಳು ನೇಪಾಳದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ನೇಪಾಳದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ರಸ್ತೆ ಮತ್ತು ಸಂವಹನ ವ್ಯವಸ್ಥೆ ಹಾನಿಗೊಳಗಾಗಿರುವುದರಿಂದ ರಕ್ಷಣಾ ತಂಡಗಳಿಗೆ ಹಲವು ಸವಾಲುಗಳು ಎದುರಾಗಿವೆ.

Continue Reading

ಬೆಂಗಳೂರು

Liver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ

Published

on

By

ಬೆಂಗಳೂರು: ಯಕೃತ್ತಿನಲ್ಲಿ ಕಂಡುಬರುವ ಗಂಟು, ಗೆಡ್ಡೆ ಹಾಗೂ ಅಸಹಜ ಬೆಳವಣಿಗೆಗಳಿಗೆ ಸಮನ್ವಯದ ತಪಾಸಣೆ, ನಿಖರ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಫೋರ್ಟಿಸ್ ಹೆಲ್ತ್‌ಕೇರ್ ಜಾಲದ ಭಾಗವಾಗಿರುವ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಲಾಗಿದೆ.

ರೋಗಿಗಳು ವಿವಿಧ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಒಂದೇ ರೀತಿಯ ಪರೀಕ್ಷೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ. ಯಕೃತ್ತಿನ ತಜ್ಞರು, ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ತಜ್ಞರು, ಜಠರ-ಕರುಳಿನ ತಜ್ಞರು, ರೇಡಿಯಾಲಜಿಸ್ಟ್‌ಗಳು, ಕ್ಯಾನ್ಸರ್ ತಜ್ಞರು, ರೋಗಶಾಸ್ತ್ರ ತಜ್ಞರು ಹಾಗೂ ಪೌಷ್ಟಿಕ ಆಹಾರ ತಜ್ಞರು ಒಂದೇ ತಂಡವಾಗಿ ರೋಗಿಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ವೈದ್ಯಕೀಯ ಜಠರರೋಗ ಶಾಸ್ತ್ರ, ಹೆಪಟಾಲಜಿ ಮತ್ತು ಸುಧಾರಿತ ಎಂಡೋಸ್ಕೋಪಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಆದರ್ಶ್ ಸಿ.ಕೆ. ಮಾತನಾಡಿ, ನಿಯಮಿತ ತಪಾಸಣೆ ವೇಳೆ ಯಕೃತ್ತಿನ ಗೆಡ್ಡೆಗಳು ಮತ್ತು ದ್ರವ ತುಂಬಿದ ಚೀಲಗಳು ಆಕಸ್ಮಿಕವಾಗಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಇವುಗಳಲ್ಲಿ ಅನೇಕವು ಅಪಾಯಕಾರಿಯಲ್ಲದಿದ್ದರೂ, ಕೆಲವು ಯಕೃತ್ತಿನ ಕಾಯಿಲೆ ಅಥವಾ ಆರಂಭಿಕ ಹಂತದ ಕ್ಯಾನ್ಸರ್‌ನ ಸೂಚನೆಯಾಗಿರಬಹುದು. ಹೀಗಾಗಿ ಯಾವ ಗೆಡ್ಡೆಗೆ ಚಿಕಿತ್ಸೆ ಬೇಕು ಮತ್ತು ಯಾವುದನ್ನು ಮೇಲ್ವಿಚಾರಣೆ ಮಾಡಿದರೆ ಸಾಕು ಎಂಬುದನ್ನು ಗುರುತಿಸುವುದು ಪ್ರಮುಖ ಸವಾಲಾಗಿದೆ ಎಂದು ಹೇಳಿದ್ದಾರೆ.

ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗೋಪಸೆಟ್ಟಿ, ಚಿಕಿತ್ಸೆಯ ನಿರ್ಧಾರವು ಗೆಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ ಯಕೃತ್ತಿನ ಕಾರ್ಯಕ್ಷಮತೆ ಹಾಗೂ ರೋಗಿಯ ಒಟ್ಟಾರೆ ಆರೋಗ್ಯವನ್ನೂ ಆಧರಿಸಿರಬೇಕು ಎಂದು ತಿಳಿಸಿದ್ದಾರೆ. ಸಮಗ್ರ ಮೌಲ್ಯಮಾಪನದಿಂದ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವುದರ ಜೊತೆಗೆ, ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದಿದ್ದಾರೆ.

ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಮಾತನಾಡಿ, ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಿರುವುದು ರೋಗಿ ಕೇಂದ್ರಿತ ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಆರೋಗ್ಯ ಸೇವೆ ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಪರಿಣತಿಯನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸುವ ಮೂಲಕ ಚಿಕಿತ್ಸಾ ಫಲಿತಾಂಶ ಮತ್ತು ರೋಗಿಗಳ ಅನುಭವ ಸುಧಾರಿಸುವುದು ಕ್ಲಿನಿಕ್‌ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಯಕೃತ್ತಿನ ಚೀಲಗಳು, ರಕ್ತನಾಳದ ಗೆಡ್ಡೆಗಳು, ಫೋಕಲ್ ನೊಡ್ಯುಲರ್ ಹೈಪರ್‌ಪ್ಲಾಸಿಯಾ, ಯಕೃತ್ತಿನ ಕ್ಯಾನ್ಸರ್, ದೇಹದ ಇತರ ಭಾಗಗಳಿಂದ ಯಕೃತ್ತಿಗೆ ಹರಡಿದ ಕ್ಯಾನ್ಸರ್ ಹಾಗೂ ಸಂಕೀರ್ಣ ಯಕೃತ್ತಿನ ಗೆಡ್ಡೆಗಳಿಗೆ ಇಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಚಿಕಿತ್ಸಾ ಸಲಹೆ ದೊರೆಯಲಿದೆ. ರೋಗನಿರ್ಣಯದ ನಿಖರತೆ ಹೆಚ್ಚಿಸುವುದು ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಗುರಿಯಾಗಿದೆ.

Continue Reading

ದೇಶ

Nepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್

Published

on

By

ಬಹ್ರೈಚ್: Nepal flood ದಲ್ಲಿ ಉಂಟಾದ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿದ್ದ 5 ಕಾಡಾನೆಗಳ ಹಿಂಡು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯ ಗಿರ್ಜಾಪುರಿ ಬ್ಯಾರೇಜ್ ಸಮೀಪ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆ. ಆಗಸ್ಟ್ 25ರಂದು ನಡೆದ ಈ ಘಟನೆಯಲ್ಲಿ ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು.

ಕೌಡಿಯಾಲ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಸಂಕಷ್ಟಕ್ಕೆ ಸಿಲುಕಿತ್ತು. ನೀರಿನ ರಭಸ ಹೆಚ್ಚಿದ್ದರಿಂದ ಆನೆ ಮರಿಗಳಿಗೆ ತೇಲುವುದು ಕಷ್ಟವಾಗಿತ್ತು. ಈ ವೇಳೆ ವಯಸ್ಕ ಆನೆಗಳು ಮರಿಗಳನ್ನು ಸುತ್ತುವರಿದು ನಿಂತು, ಅವುಗಳನ್ನು ಪ್ರವಾಹದ ರಭಸದಿಂದ ರಕ್ಷಿಸಲು ಪ್ರಯತ್ನಿಸಿರುವುದು ಗಮನ ಸೆಳೆದಿದೆ.

ಮರಿಗಳನ್ನು ಬಿಟ್ಟು ಕದಲದ ದೊಡ್ಡ ಆನೆಗಳು

ಪ್ರವಾಹದ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದರೂ ವಯಸ್ಕ ಆನೆಗಳು ಮರಿಗಳನ್ನು ಏಕಾಂಗಿಯಾಗಿ ಬಿಡಲಿಲ್ಲ. ಅವುಗಳ ಸುತ್ತಲೂ ನಿಂತು ಮರಿಗಳಿಗೆ ರಕ್ಷಣೆ ನೀಡುವ ಮೂಲಕ ಸುರಕ್ಷಿತವಾಗಿ ದಡ ಸೇರುವಂತೆ ನೆರವಾದವು.

ಈ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿದ ಅಧಿಕಾರಿಗಳು

ಆನೆಗಳ ಹಿಂಡು ಅಪಾಯದಲ್ಲಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಳಿಕ ಗಿರ್ಜಾಪುರಿ ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚಲಾಗಿದ್ದು, ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ನೀರಿನ ರಭಸ ಕಡಿಮೆಯಾದ ಬಳಿಕ ವಯಸ್ಕ ಆನೆಗಳು ಚೇತರಿಸಿಕೊಂಡಿವೆ. ನಂತರ ಅವು ಎರಡು ಆನೆ ಮರಿಗಳನ್ನು ಸುರಕ್ಷಿತವಾಗಿ ದಂಡೆಯತ್ತ ಕರೆದೊಯ್ದಿವೆ.

ಸುರಕ್ಷಿತವಾಗಿ ಕಾಡಿಗೆ ಮರಳಿದ ಆನೆಗಳು

ಆನೆಗಳ ಹಿಂಡು ದಡ ತಲುಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಬ್ಯಾರೇಜ್ ಪ್ರದೇಶದಿಂದ ದೂರಕ್ಕೆ ಕಳುಹಿಸಿ ಸುರಕ್ಷಿತವಾಗಿ ಕಾಡಿನತ್ತ ಸಾಗುವಂತೆ ಮಾಡಿದ್ದಾರೆ.

ಆಪತ್ತಿನ ಸಮಯದಲ್ಲೂ ಮರಿಗಳನ್ನು ಬಿಟ್ಟು ಹೋಗದೆ ಅವುಗಳನ್ನು ಸುತ್ತುವರಿದು ರಕ್ಷಿಸಿದ ಆನೆಗಳ ವರ್ತನೆ ಸಾರ್ವಜನಿಕರ ಗಮನ ಸೆಳೆದಿದೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತ್ವರಿತವಾಗಿ ಅರಿತು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿ ಆನೆಗಳ ಜೀವ ಉಳಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೂ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

Trending