ಅಪರಾಧ
ಅಜಿತ್–ವಿಜಯ್ ಮನೆಗಳಿಗೆ ಮತ್ತೆ ಹುಸಿ ಬಾಂಬ್ ಕರೆ: ಸೈಬರ್ ತನಿಖೆ ತೀವ್ರಗೊಳಿಸಿದ ಪೊಲೀಸರು
ಚೆನ್ನೈ: ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳು ಮತ್ತು ರಾಜಕೀಯ ಗಣ್ಯರ ಮೇಲೆ ಬಾಂಬ್ ಬೆದರಿಕೆ ಕರೆಗಳು ನಿರಂತರವಾಗಿದ್ದು, ಭಾನುವಾರ ರಾತ್ರಿ ಮತ್ತೊಂದು ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಅಪರಿಚಿತ ಮೂಲಗಳಿಂದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಹಾಗೂ ನಟಿ ಖುಷ್ಬು ಅವರ ನಿವಾಸಗಳಿಗೆ ಬಾಂಬ್ ಬೆದರಿಕೆ ಪತ್ರಗಳು ಮತ್ತು ಇಮೇಲ್ಗಳು ಕಳುಹಿಸಲಾಗಿದೆ.
ಡಿಜಿಪಿ ಕಚೇರಿಗೆ ಬಂದಿರುವ ಎಚ್ಚರಿಕೆ ಮೇಲ್ ನಂತರ, ಪೊಲೀಸರು ತಕ್ಷಣವೇ ಎಲ್ಲ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದಿದ್ದರೂ, ಬೆದರಿಕೆ ಸಂದೇಶಗಳ ಸರಣಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ರಕ್ಷಕ ಪಡೆಗಳು ಹೆಚ್ಚಿನ ಎಚ್ಚರಿಕೆಯಿಂದಿವೆ. ಸಿಎಂ ನಿವಾಸ ಸೇರಿದಂತೆ ಗಣ್ಯರ ಮನೆಗಳ ಸುತ್ತಮುತ್ತ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ.
ಅಜಿತ್ ಮನೆಗೆ ಮತ್ತೆ ಬೆದರಿಕೆ – ಮತ್ತೊಂದು ಹುಸಿ ಕರೆ
ಕಳೆದ ವಾರವೂ ನಟ ಅಜಿತ್ ಅವರ ECR ರಸ್ತೆ ಬಳಿಯ ಮನೆಯನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ತಕ್ಷಣವೇ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳವನ್ನು ಕಳುಹಿಸಲಾಯಿತು. ಆದಾಗ್ಯೂ, ಅದು ಕೂಡಾ ಹುಸಿ ಎಚ್ಚರಿಕೆ ಎಂದೇ ದೃಢಪಟ್ಟಿತ್ತು. ಇದೀಗ ಮತ್ತೆ ತನ್ನನ್ನೇ ಗುರಿಯನ್ನಾಗಿಸಿರುವ ಇಮೇಲ್ ಬಂದಿರುವುದರಿಂದ ಪೊಲೀಸರು ಸೈಬರ್ ಕ್ರೈಂ ವಿಭಾಗದ ಮೂಲಕ ಮೂಲವನ್ನು ಪತ್ತೆಹಚ್ಚಲು ತನಿಖೆ ವಿಸ್ತರಿಸಿದ್ದಾರೆ.
ನಟ ವಿಜಯ್ಗೂ ಪುನಃ–ಪುನಃ ಬೆದರಿಕೆ ಕರೆಗಳು
ತಮಿಳು ಸಿನಿರಂಗದ ಸೂಪರ್ ಸ್ಟಾರ್ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ನಟ ವಿಜಯ್ ಅವರಿಗೂ ಪದೇ–ಪದೇ ಬೆದರಿಕೆ ಸಂದೇಶಗಳು ಬರುತ್ತಲೇ ಇವೆ. ಇತ್ತೀಚೆಗೆ ಬೆಳಗ್ಗೆ 5:20ಕ್ಕೆ “ವಿಜಯ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ” ಎಂಬ ಕರೆ ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿತ್ತು. ತಕ್ಷಣವೇ ಬಾಂಬ್ ನಿಷ್ಕ್ರೀಯ ದಳ ಹಾಗೂ ಸ್ನಿಫರ್ ನಾಯಿ ಮನೆಗೆ ಧಾವಿಸಿ ಸಮಗ್ರ ತಪಾಸಣೆ ನಡೆಸಿದ್ದು, ಅದು ಕೂಡಾ ಹುಸಿ ಕರೆ ಎಂದೇ ದೃಢಪಟ್ಟಿತು.
ಪೊಲೀಸರು ಈಗ ಎಲ್ಲ ಬೆದರಿಕೆ ಕರೆಗಳ ಮೂಲವನ್ನು ಪತ್ತೆಹಚ್ಚಲು ತೀವ್ರ ಸೈಬರ್ ತನಿಖೆ ಆರಂಭಿಸಿದ್ದು, ಜನರಲ್ಲಿ ಅನಾವಶ್ಯಕ ಆತಂಕ ಉಂಟಾಗದಂತೆ ಎಚ್ಚರಿಕೆ ಜಾರಿಗೊಳಿಸಿದ್ದಾರೆ.