ದೇಶ
ಆಪರೇಷನ್ ಸಿಂಧೂರಕ್ಕೆ ಸೇಡು ತೀರಿಸಲು ಉಗ್ರರು ಸಜ್ಜಾಗುತ್ತಿದ್ದಾರೆ: ಗುಪ್ತಚರ ವರದಿ
ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು “ಆಪರೇಷನ್ ಸಿಂಧೂರ” ಕೈಗೊಂಡಿದ್ದರೂ, ಇದೀಗ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಲಷ್ಕರ್-ಎ-ತೈಬಾ (LeT) ಮತ್ತು ಜೈಶ್-ಎ-ಮೊಹಮ್ಮದ್ (JeM) ಮತ್ತೊಂದು ಸಂಘಟಿತ ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ಲಭ್ಯವಾಗಿದೆ.
ಮೂಲಗಳ ಪ್ರಕಾರ, ಈ ಉಗ್ರ ಸಂಘಟನೆಗಳು ಸೆಪ್ಟೆಂಬರ್‌ನಿಂದ ಒಳನುಸುಳುವಿಕೆ, ವಿಚಕ್ಷಣ ಮತ್ತು ಲಾಜಿಸ್ಟಿಕ್ ಚಟುವಟಿಕೆಗಳನ್ನು ಹೆಚ್ಚಿಸಿದ್ದವೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಸ್ಪೆಷಲ್ ಸರ್ವಿಸ್ ಗ್ರೂಪ್ (SSG) ಸಹಕಾರದಿಂದ ಹಲವಾರು ಎಲ್‌ಇಟಿ ಮತ್ತು ಜೆಇಎಂ ಘಟಕಗಳು LoC (ನಿಯಂತ್ರಣ ರೇಖೆ) ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿವೆ ಎಂದು ವರದಿಯಾಗಿದೆ.
ಭಯೋತ್ಪಾದಕ ಶಂಶೇರ್ ನೇತೃತ್ವದ ಎಲ್‌ಇಟಿ ಘಟಕವು ಡ್ರೋನ್‌ಗಳ ಮೂಲಕ ಗಡಿಯಾಚೆಗಿನ ವೈಮಾನಿಕ ವಿಚಕ್ಷಣ ನಡೆಸಿ, ದುರ್ಬಲ ಎಲ್‌ಒಸಿ ಪ್ರದೇಶಗಳನ್ನು ಗುರುತಿಸಿದೆ. ಇದರಿಂದ ಮುಂಬರುವ ವಾರಗಳಲ್ಲಿ ಫಿದಾಯೀನ್ ಶೈಲಿಯ ದಾಳಿಗಳು ಅಥವಾ ಶಸ್ತ್ರಾಸ್ತ್ರ ಡ್ರಾಪ್‌ಗಳು ಸಂಭವಿಸಬಹುದೆಂಬ ಶಂಕೆ ಹೆಚ್ಚಿದೆ.
ಇದೇ ವೇಳೆ ಪಾಕಿಸ್ತಾನದ ಗಡಿ ಕಾರ್ಯ ತಂಡಗಳು (BAT), ಮಾಜಿ ಸೈನಿಕರು ಹಾಗೂ ಉಗ್ರರನ್ನು ಒಳಗೊಂಡು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಪ್ರದೇಶಗಳಲ್ಲಿ ಮರು ನಿಯೋಜನೆಗೊಂಡಿವೆ. ಇದು ಭಾರತೀಯ ಸೇನೆ ನೆಲೆಗಳ ಮೇಲೆ ಗಡಿಯಾಚೆಗಿನ ದಾಳಿಗಳ ಸಾಧ್ಯತೆ ಬಲಪಡಿಸಿದೆ.
2025ರ ಅಕ್ಟೋಬರ್‌ನಲ್ಲಿ PoKಯಲ್ಲಿ ನಡೆದ ಉನ್ನತ ಮಟ್ಟದ ಸಭೆಗಳಲ್ಲಿ ಜಮಾತ್-ಎ-ಇಸ್ಲಾಮಿ, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ISI ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದು, ಆಪರೇಷನ್ ಸಿಂಧೂರ ವೇಳೆ ಉಂಟಾದ ನಷ್ಟಕ್ಕೆ ಸೇಡು ತೀರಿಸಲು ಉಗ್ರ ಗುಂಪುಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.