ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ? ಪವಾಡವೋ ವದಂತಿಯೋ! | Hosa Suddi

ದೇಶ

ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ? ಪವಾಡವೋ ವದಂತಿಯೋ!

Published

on

ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ಶ್ರೀಕೃಷ್ಣನ ವಿಗ್ರಹ ತೇಲಿ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದೊಂದು ಪವಾಡ ಎಂದು ಸಾವಿರಾರು ಜನ ಸಂಭ್ರಮಿಸುತ್ತಿದ್ದಾರೆ. ಭಾನುವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಭಾಗವಹಿಸಿದ್ದ ಭಕ್ತರು ಸಂಜೆ ಮಲ್ಪೆ ಸಮುದ್ರ ತೀರಕ್ಕೆ ತೆರಳಿದ್ದರು.

ಅಲ್ಲಿ ಕಡಲಲ್ಲಿ ತೇಲಿ ಬಂದು ದಡಕ್ಕೆ ಸಿಕ್ಕ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು. ವಿಗ್ರಹವನ್ನು ಮೇಲಕ್ಕೆತ್ತಿದ ಭಕ್ತರು, ಇದು ಕೃಷ್ಣನ ವಿಗ್ರಹವೇ ಎಂದು ಭಾವಿಸಿ ಸಂಭ್ರಮಿಸಿದರು. ಉಡುಪಿ ಕೃಷ್ಣ ದೇವರೂ ಕಡಲಲ್ಲೇ ಲಭಿಸಿದ್ದ ಇತಿಹಾಸ ಇರುವುದರಿಂದ, ಇದೇ ರೀತಿಯ ಪವಾಡ ಮತ್ತೆ ನಡೆದಿದೆ ಎಂದು ಇಸ್ಕಾನ್ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಗ್ರಹವನ್ನು ಬೆಂಗಳೂರಿಗೆ ಕೊಂಡೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಆದರೆ ವಾಸ್ತವವಾಗಿ ಇದು ಕರಾವಳಿ ಭಾಗದ ದೇಗುಲಗಳ ಪ್ರವೇಶದ್ವಾರದಲ್ಲಿ ಇರುವ ಜಯ–ವಿಜಯ ದ್ವಾರಪಾಲಕರ ವಿಗ್ರಹವಾಗಿರಬಹುದು ಎನ್ನಲಾಗುತ್ತಿದೆ. ದೇವಾಲಯಗಳಲ್ಲಿ ಬಿರುಕು ಬಿದ್ದ ಅಥವಾ ಹಳೆಯ ವಿಗ್ರಹಗಳನ್ನು ಧಾರ್ಮಿಕ ಆಚರಣೆ ಪ್ರಕಾರ ಸಮುದ್ರ ಅಥವಾ ನದಿಗೆ ವಿಸರ್ಜನೆ ಮಾಡುವ ಪದ್ಧತಿ ಇದೆ. ಈ ರೀತಿಯಾಗಿ ವಿಸರ್ಜನೆ ಮಾಡಿದ ಜಯ–ವಿಜಯರ ವಿಗ್ರಹವೇ ಕಡಲಲ್ಲಿ ತೇಲಿ ಬಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸ್ಥಳೀಯ ನಿವಾಸಿ ಸೂರಜ್ ಸಾಲಿಯಾನ್ ಅವರು, ಈ ಮೂರ್ತಿ ದೇವಸ್ಥಾನದ ದ್ವಾರಪಾಲಕರ ಶೈಲಿಯಲ್ಲಿ ಗೋಚರಿಸುತ್ತದೆ. ಹೊಸ ದೈವಸ್ಥಾನ ನಿರ್ಮಾಣ ಅಥವಾ ಪುನರ್ ನಿರ್ಮಾಣದ ವೇಳೆ ಹಳೆಯ ಮೂರ್ತಿಗಳನ್ನು ವಿಸರ್ಜಿಸುವುದು ಸಾಮಾನ್ಯ ಎಂದು ತಿಳಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಪವಾಡ ಎಂಬ ವದಂತಿ ಮತ್ತು ವಾಸ್ತವದ ನಡುವೆ ಭಾರೀ ಚರ್ಚೆ ನಡೆಯುತ್ತಿದೆ.

Trending

Exit mobile version