ದೇಶ
ಕೆಂಪು ಬಟ್ಟೆಯಲ್ಲಿ ಹೊತ್ತ ಡಿಜಿಟಲ್ ಬಜೆಟ್
ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಕೆಲವೇ ಕ್ಷಣಗಳ ಮೊದಲು ಇಂದು ಬೆಳಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ತವ್ಯ ಭವನಕ್ಕೆ ಆಗಮಿಸಿ, ತಮ್ಮ ಟ್ರೇಡ್ಮಾರ್ಕ್ ಡಿಜಿಟಲ್ ಟ್ಯಾಬ್ಲೆಟ್ ಸಹಿತ ರಾಷ್ಟ್ರಪತಿ ಭವನಕ್ಕೆ ತೆರಳಿದರು. ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನ ಅಚ್ಚಳಿಯಿರುವ ಕೆಂಪು ಬಟ್ಟೆಯಲ್ಲಿ ಸುತ್ತಿದ ಡಿಜಿಟಲ್ ಟ್ಯಾಬ್ಲೆಟ್ ಹಿಡಿದು ಅವರು ಹೊರಟ ದೃಶ್ಯ ಗಮನ ಸೆಳೆದಿದೆ.
ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು 2026–27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದು ಅವರ ಸತತ ಒಂಬತ್ತನೇ ಬಜೆಟ್ ಆಗಿದ್ದು, ದಾಖಲೆ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್, ಸಿಬಿಡಿಟಿ ಅಧ್ಯಕ್ಷ ರವಿ ಅಗರವಾಲ್ ಸೇರಿದಂತೆ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಅವರೊಂದಿಗೆ ಇದ್ದರು.
ಈ ಬಜೆಟ್‌ನಲ್ಲಿ ಸರ್ಕಾರದ ಅಂದಾಜು ಆದಾಯ–ವೆಚ್ಚದ ವಿವರಗಳ ಜೊತೆಗೆ, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯ ಅಡಿಯಲ್ಲಿ ಮಧ್ಯಮ ಅವಧಿಯ ಹಣಕಾಸು ನೀತಿ ಹಾಗೂ ಸ್ಥೂಲ–ಆರ್ಥಿಕ ಚೌಕಟ್ಟಿನ ಹೇಳಿಕೆಗಳನ್ನು ಸಹ ಸೀತಾರಾಮನ್ ಮಂಡಿಸಲಿದ್ದಾರೆ. ಜೊತೆಗೆ 2026ರ ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ಗುರುವಾರವೇ 2025–26ರ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದು ಬಜೆಟ್‌ಗೆ ದಿಕ್ಕು ತೋರಿಸುವ ಪ್ರಮುಖ ದಾಖಲೆ ಎಂದು ಪರಿಗಣಿಸಲಾಗಿದೆ. ಆರ್ಥಿಕ ಸಮೀಕ್ಷೆ ಹಿಂದಿನ ವರ್ಷದ ಆರ್ಥಿಕ ಸ್ಥಿತಿಗತಿಯ ವಿಶ್ಲೇಷಣೆಯನ್ನು ನೀಡುತ್ತದೆ.
ಈ ಬಜೆಟ್ ಮೇಲೆ ರೈತರ ಆಸೆಗಣ್ಣಿನ ನೋಟ ನೆಟ್ಟಿದೆ. ಹೆಚ್ಚಿನ ಅನುದಾನ, ಸಬ್ಸಿಡಿ, ಕನಿಷ್ಠ ಬೆಂಬಲ ಬೆಲೆ (MSP) ಖಾತರಿ, ಸಾಲ ಸೌಲಭ್ಯ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಬಹುದು ಎಂಬ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಗರೀಬ್, ಮಹಿಳೆಯರು, ಯುವಕರು ಮತ್ತು ಅನ್ನದಾತ’ ನಾಲ್ಕು ಆದ್ಯತೆಗಳನ್ನೇ ಕೇಂದ್ರ ಬಜೆಟ್ ಆಧಾರವಾಗಿಸಿಕೊಳ್ಳಲಿದೆ ಎಂಬ ನಿರೀಕ್ಷೆ ರೈತಾಪಿ ವರ್ಗದಲ್ಲಿದೆ.
ದೇಶ
ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಭಾವುಕ ವಿದಾಯ ನೀಡಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ 2026ರ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರಿಲ್ಲದ ಕಾರಣ, ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣ ಕಂಡು ಸ್ಥಳದಲ್ಲಿದ್ದ ಅಭಿಮಾನಿಗಳು ಕಣ್ಣೀರಿಟ್ಟರು.
1956ರಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್. ಜಾನಕಿ, ತಮ್ಮ ಪತಿಯನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಜಾನಕಿ ಅವರ ಸಂಗೀತ ಪಯಣದಲ್ಲಿ ರಾಮಪ್ರಸಾದ್ ಸದಾ ಬೆಂಬಲವಾಗಿ ನಿಂತಿದ್ದು, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಕುಟುಂಬದವರು ನೆನಪಿಸಿಕೊಂಡರು.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರದ ‘ಅಮ್ಮ ಪೂವಿನುಂ’ ಜೋಗುಳ ಗೀತೆ ಅವರ ಗಾಯನ ಬದುಕಿನ ಕೊನೆಯ ದಾಖಲಾದ ಹಾಡಾಗಿ ಉಳಿದಿದೆ.
ಗಾನಕೋಗಿಲೆ ಎಸ್. ಜಾನಕಿ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಕಂಠ, ಅಮರ ಗೀತೆಗಳು ಮತ್ತು ಅಪಾರ ಸಂಗೀತ ಸೇವೆ ಭಾರತೀಯ ಸಂಗೀತ ಲೋಕದಲ್ಲಿ ಸದಾಕಾಲ ಜೀವಂತವಾಗಿರಲಿವೆ.
ದೇಶ
ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು
Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ
ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.
ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.
-
ಬೆಂಗಳೂರು12 hours agoಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
-
ಸುತ್ತ ಮುತ್ತ14 hours agoBorivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
-
ದೇಶ13 hours agoManmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
-
ರಾಜ್ಯ19 hours agoಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿಗೆ ಅಂತಿಮ ನಮನ; ಅಭಿಮಾನಿಗಳ ಕಣ್ಣೀರಿನ ಸಾಗರ
-
ದೇಶ11 hours agoಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
-
ರಾಜ್ಯ15 hours agoS Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್ಟೇಕರ್ ನವೀನ್ ಮನವಿ
-
ದೇಶ12 hours agoಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
-
ಕ್ರೀಡೆ13 hours agoSouth Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
