ದೇಶ
ದೇಶ ಸೇವೆಗೆ ಹೊರಟ ತರಕಾರಿ ಮಾರುವವರ ಮಗ
ದೆಹಲಿ: ಬೀದಿ ಬದಿ ತರಕಾರಿ ಮಾರುವ ತಾಯಿಯ ಕನಸು ಇಂದು ನನಸಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಪರೀಕ್ಷೆಯಲ್ಲಿ ಉತ್ತೀರ್ಣನಾದ ಮಗನೊಬ್ಬ, ತನ್ನ ಸಾಧನೆಯ ಸುದ್ದಿಯನ್ನು ಮೊದಲು ತಾಯಿಗೆ ತಿಳಿಸಿದ ಕ್ಷಣದ ಭಾವನಾತ್ಮಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಿಂಗುಲಿಯ ಶೆಟ್ಕರ್ ವಾಡಿಯ ಗೋಪಾಲ್ ಸಾವಂತ್ ಅವರು ಸಿಆರ್‍ಪಿಎಫ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರ ತಿಳಿದ ಕೂಡಲೇ, ಬೀದಿ ಬದಿ ತರಕಾರಿ ಮಾರುತ್ತಿದ್ದ ತಮ್ಮ ತಾಯಿಯ ಬಳಿಗೆ ತೆರಳಿದ ಗೋಪಾಲ್, ಮೊದಲು ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಬಳಿಕ “ನಾನು ಸೇನೆಗೆ ಸೆಲೆಕ್ಟ್ ಆಗಿದ್ದೇನೆ” ಎಂದು ಹೇಳಿದಾಗ, ತಾಯಿ ಮಗನನ್ನು ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಎಲ್ಲರ ಮನಕಲಕುವಂತಿದೆ.
ಈ ವೇಳೆ ಗೋಪಾಲ್ ಸ್ನೇಹಿತರು ತಾಯಿ–ಮಗನಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ತಾಯಿಯ ಪಕ್ಕದಲ್ಲೇ ಕೆಲಸ ಮಾಡುವ ಮತ್ತೊಬ್ಬರು, “ತನ್ನ ಮಗ ದೊಡ್ಡ ಕನಸು ಕಾಣಲು ಅವಳು ಪ್ರತಿದಿನ ಇಲ್ಲೇ ದುಡಿಯುತ್ತಿದ್ದಳು” ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಬೀದಿ ಬದಿ ತರಕಾರಿ ಮಾರುತ್ತಲೇ ಮಗನ ಶಿಕ್ಷಣಕ್ಕೆ ಶ್ರಮಿಸಿದ ಈ ತಾಯಿಯ ಹೋರಾಟಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇಂಥ ತಾಯಿಯೇ ನಿಜವಾದ ಹೀರೋ”, “ದೇಶ ಸೇವೆಗೆ ಹೋಗುತ್ತಿರುವ ಗೋಪಾಲ್ ಗೆ ಸಲಾಂ” ಎಂಬಂತೆ ಸಾವಿರಾರು ಕಾಮೆಂಟ್‌ಗಳು ಹರಿದುಬರುತ್ತಿವೆ.
ಈ ಹೃದಯಸ್ಪರ್ಶಿ ವಿಡಿಯೋವನ್ನು ವಿಲಾಸ್ ಕುಡಾಲ್ಕರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. “ಕುಡಾಲ್ ನಗರ ಪಂಚಾಯತ್ ಪದಾಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿರುವ ತಮ್ಮ ತಾಯಿಯೊಂದಿಗೆ, ದೇಶ ಸೇವೆಗೆ ಸಿಆರ್‍ಪಿಎಫ್‌ಗೆ ಆಯ್ಕೆಯಾದ ಸುದ್ದಿ ಹಂಚಿಕೊಳ್ಳುವ ಕ್ಷಣ ಇದು” ಎಂದು ಅವರು ಬರೆದಿದ್ದಾರೆ.
ತಾಯಿಯ ತ್ಯಾಗ ಮತ್ತು ಮಗನ ಸಾಧನೆ ಇಂದು ಅನೇಕ ಯುವಕರಿಗೆ ಪ್ರೇರಣೆಯಾಗಿ ಪರಿಣಮಿಸಿದೆ.