ದೇಶ
Latest News : ಡಿಎಂಕೆ-ಎಐಎಡಿಎಂಕೆ ಒಂದಾಗುತ್ತವೆಯಾ?
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ತೀವ್ರ ಅನಿಶ್ಚಿತತೆ ನಿರ್ಮಾಣವಾಗಿದ್ದು, ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚನೆ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಇಂದು (ಮೇ 7) ನಡೆಯಬೇಕಿದ್ದ ವಿಜಯ್ ಅವರ ಪ್ರಮಾಣವಚನ ಸಮಾರಂಭ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚುನಾವಣೆಯಲ್ಲಿ TVK 108 ಸ್ಥಾನಗಳನ್ನು ಗೆದ್ದಿದ್ದರೂ, ಸರಳ ಬಹುಮತಕ್ಕೆ ಅಗತ್ಯವಿರುವ 118 ಸಂಖ್ಯೆಗೆ ತಲುಪಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಿದಂತೆ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಪಕ್ಷ ಮುಂದಾಗಿದೆ. ಆದರೆ ರಾಜ್ಯಪಾಲರು 118 ಶಾಸಕರ ಬೆಂಬಲವನ್ನು ಸಾಬೀತುಪಡಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಇದರ ನಡುವೆ, ಎಡಪಕ್ಷಗಳು ಹಾಗೂ ಮುಸ್ಲಿಂ ಲೀಗ್‌ನ ಶಾಸಕರು ಡಿಎಂಕೆ ಮೈತ್ರಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ವಿಜಯ್ ಸರ್ಕಾರ ರಚನೆಗೆ ಅಡೆತಡೆ ಉಂಟುಮಾಡಿದೆ. ಮತ್ತೊಂದೆಡೆ, ವಿಸಿಕೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ರಾಜಕೀಯ ವಲಯದಲ್ಲಿ ಅತಿ ಹೆಚ್ಚು ಚರ್ಚೆಗೆ ಕಾರಣವಾಗಿರುವ ಸಂಗತಿ ಎಂದರೆ, ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಟ್ಟಾಗಿ ಸರ್ಕಾರ ರಚಿಸುವ ಸಾಧ್ಯತೆ ಕುರಿತ ಗುಸುಗುಸು. ಡಿಎಂಕೆ 59 ಹಾಗೂ ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿದ್ದು, ಎರಡೂ ಸೇರಿ ಬಹುಮತಕ್ಕೆ ಕೇವಲ 12 ಸ್ಥಾನಗಳ ಕೊರತೆಯಿದೆ.
ಈ ಮೈತ್ರಿ ನಿಜವಾದರೆ, ಎಡಪ್ಪಾಡಿ ಪಳನಿಸ್ವಾಮಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದ್ದು, ಡಿಎಂಕೆಯೊಬ್ಬರು ಉಪಮುಖ್ಯಮಂತ್ರಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಎರಡೂ ಪಕ್ಷಗಳ ನಾಯಕರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ಯಾರದ್ದು ಎಂಬ ಕುತೂಹಲ ತಾರಕಕ್ಕೇರಿದೆ.
ದೇಶ
ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಭಾವುಕ ವಿದಾಯ ನೀಡಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ 2026ರ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರಿಲ್ಲದ ಕಾರಣ, ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣ ಕಂಡು ಸ್ಥಳದಲ್ಲಿದ್ದ ಅಭಿಮಾನಿಗಳು ಕಣ್ಣೀರಿಟ್ಟರು.
1956ರಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್. ಜಾನಕಿ, ತಮ್ಮ ಪತಿಯನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಜಾನಕಿ ಅವರ ಸಂಗೀತ ಪಯಣದಲ್ಲಿ ರಾಮಪ್ರಸಾದ್ ಸದಾ ಬೆಂಬಲವಾಗಿ ನಿಂತಿದ್ದು, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಕುಟುಂಬದವರು ನೆನಪಿಸಿಕೊಂಡರು.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರದ ‘ಅಮ್ಮ ಪೂವಿನುಂ’ ಜೋಗುಳ ಗೀತೆ ಅವರ ಗಾಯನ ಬದುಕಿನ ಕೊನೆಯ ದಾಖಲಾದ ಹಾಡಾಗಿ ಉಳಿದಿದೆ.
ಗಾನಕೋಗಿಲೆ ಎಸ್. ಜಾನಕಿ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಕಂಠ, ಅಮರ ಗೀತೆಗಳು ಮತ್ತು ಅಪಾರ ಸಂಗೀತ ಸೇವೆ ಭಾರತೀಯ ಸಂಗೀತ ಲೋಕದಲ್ಲಿ ಸದಾಕಾಲ ಜೀವಂತವಾಗಿರಲಿವೆ.
ದೇಶ
ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು
Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ
ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.
ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.
-
ಬೆಂಗಳೂರು3 hours agoಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
-
ಸುತ್ತ ಮುತ್ತ5 hours agoBorivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
-
ರಾಜ್ಯ10 hours agoಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿಗೆ ಅಂತಿಮ ನಮನ; ಅಭಿಮಾನಿಗಳ ಕಣ್ಣೀರಿನ ಸಾಗರ
-
ರಾಜ್ಯ5 hours agoS Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್ಟೇಕರ್ ನವೀನ್ ಮನವಿ
-
ದೇಶ3 hours agoManmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
-
ಕ್ರೀಡೆ4 hours agoSouth Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
-
ರಾಜ್ಯ4 hours agoCabinet Expansion: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ಪೈಪೋಟಿ; ಹೈಕಮಾಂಡ್ ಅಂತಿಮ ತೀರ್ಮಾನ ಯಾವಾಗ?
-
ದೇಶ6 hours agoಎಸ್. ಜಾನಕಿ–ಮೈಸೂರಿನ ಅವಿನಾಭಾವ ನಂಟು; ಮೊದಲ ವೇದಿಕೆಯಿಂದ ಕೊನೆಯ ಕ್ಷಣದವರೆಗೆ ಭಾವನಾತ್ಮಕ ಪಯಣ
