ಸಿನಿಮಾ
Vivek Oberoi ರ ಮಾನವೀಯ ನಡೆ: ‘ರಾಮಾಯಣ’ ಸಂಭಾವನೆ ನೀಡಿ 50 ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಿದರು
ಮುಂಬೈ: ಬಾಲಿವುಡ್ ನಟ Vivek Oberoi ತಮ್ಮ 50ನೇ ವರ್ಷದ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಕ್ಯಾನ್ಸರ್ ರೋಸ್ ಡೇ ಸಂದರ್ಭದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 50 ಮಕ್ಕಳ ಚಿಕಿತ್ಸೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ವರದಿಯಾಗಿದೆ. ಕಳೆದ ವರ್ಷ ನೀಡಿದ್ದ ಭರವಸೆಯನ್ನು ಇದೀಗ ಈಡೇರಿಸಿದ್ದಾರೆ.
ವಿವೇಕ್ ಒಬೆರಾಯ್ ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ತಮ್ಮ ಸಂಪೂರ್ಣ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗೆ ನೀಡುವುದಾಗಿ ಅವರು 2025ರಲ್ಲೇ ಘೋಷಿಸಿದ್ದರು. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಈ ಕುರಿತು ಚರ್ಚಿಸಿ, ತಮ್ಮ ಸಂಭಾವನೆಯನ್ನು ತಾವು ಸ್ವೀಕರಿಸದೆ ಸಮಾಜ ಸೇವೆಗೆ ಬಳಸಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದರು.
ಸುಮಾರು ಒಂದು ವರ್ಷದ ಬಳಿಕ ತಮ್ಮ ಮಾತಿನಂತೆ ನಡೆದುಕೊಂಡಿರುವ ವಿವೇಕ್, ‘ರಾಮಾಯಣ’ ಚಿತ್ರದ ಸಂಭಾವನೆಯನ್ನು 50 ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಬಳಸಿದ್ದಾರೆ. ಅವರ 50ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ಈ ನೆರವು ನೀಡಿರುವುದು ವಿಶೇಷವಾಗಿದೆ ಎಂದು ವರದಿಯಾಗಿದೆ.
ವಿವೇಕ್ ಒಬೆರಾಯ್ ಹಲವು ವರ್ಷಗಳಿಂದ ಕ್ಯಾನ್ಸರ್ ಪೀಡಿತರ ನೆರವಿಗೆ ಸಂಬಂಧಿಸಿದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ‘ರಾಮಾಯಣ’ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳಿಗೆ ಮೀಸಲಿಡುವ ನಿರ್ಧಾರ ಕೈಗೊಂಡಿದ್ದರು.
‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಚಿತ್ರವನ್ನು ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ.