CRIME : ನಿರ್ದೇಶಕ ನಂದಕಿಶೋರ್ ಸಾಲ ಪ್ರಕರಣ – ಯಶಸ್ವಿನಿ ಗೌಡ ಬಂಧನ, ಕೋಕಾ ಕಾಯ್ದೆ ಪ್ರಯೋಗ |

ಅಪರಾಧ

CRIME : ನಿರ್ದೇಶಕ ನಂದಕಿಶೋರ್ ಸಾಲ ಪ್ರಕರಣ – ಯಶಸ್ವಿನಿ ಗೌಡ ಬಂಧನ, ಕೋಕಾ ಕಾಯ್ದೆ ಪ್ರಯೋಗ

Published

on

ಬೆಂಗಳೂರು: ನಿರ್ದೇಶಕ ನಂದಕಿಶೋರ್‌ (Nanda Kishore) ಅವರಿಗೆ ಸಾಲ ನೀಡಿದ್ದ ಉದ್ಯಮಿಯ ಅಪಹರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಬಸವನಗುಡಿ ಪೊಲೀಸ್ ಠಾಣೆಯ ಮಾಜಿ ರೌಡಿಶೀಟರ್ ಯಶಸ್ವಿನಿ ಗೌಡಳನ್ನು (Yashaswini Gowda) ಸಿಸಿಬಿ ಪೊಲೀಸರು (CCB Police) ಕೋಕಾ ಕಾಯ್ದೆಯಡಿ ಬಂಧಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಸೆಪ್ಟೆಂಬರ್ 26ರಂದು ಸಂಜೆ 6.30ರ ಸುಮಾರಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಮನೋಜ್ ಎಂಬವರನ್ನು ರೌಡಿಗಳ ಗುಂಪು ಅಪಹರಿಸಿದ್ದ ಘಟನೆ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಬೇಕರಿ ರಘು, ರಾಜೇಶ್, ವೆಂಕಟೇಶ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದಲ್ಲಿ ಬೇಕರಿ ರಘು ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಯಶಸ್ವಿನಿ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತನಿಖೆಯ ವೇಳೆ ಈ ಅಪಹರಣ ಪ್ರಕರಣದಲ್ಲಿ ಯಶಸ್ವಿನಿಯ ನೇರ ಪಾತ್ರವಿರುವುದು ಬಹಿರಂಗವಾಗಿದ್ದು, ಪುಟ್ಟೇನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆಕೆಯನ್ನು ಸಿಸಿಬಿ ತಂಡ ಬಂಧಿಸಿದೆ.

ಸಂಘಟಿತ ಅಪರಾಧ ಜಾಲದ ಸಂಪರ್ಕ ಕಂಡುಬಂದ ಹಿನ್ನೆಲೆಯಲ್ಲಿ, ಪೊಲೀಸರು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA) ಅಡಿ ಕ್ರಮ ಕೈಗೊಂಡಿದ್ದು, ಯಶಸ್ವಿನಿಯನ್ನು ಜೈಲಿಗೆ ಕಳುಹಿಸಲಾಗಿದೆ. ಈ ಪ್ರಕರಣವು ಬೆಂಗಳೂರು ಅಪರಾಧ ಜಗತ್ತಿನಲ್ಲಿ ಮತ್ತೊಂದು ದೊಡ್ಡ ತಿರುವು ತಂದಿದೆ.


ಏನಿದು ಕೋಕಾ ಕಾಯ್ದೆ (KCOCA)?

ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA) ಸಂಘಟಿತ ಅಪರಾಧ, ಮಾಫಿಯಾ ಮತ್ತು ಗಂಭೀರ ಅಪರಾಧ ಚಟುವಟಿಕೆಗಳನ್ನು ತಡೆಯಲು ಜಾರಿಗೆ ಬಂದ ಕಠಿಣ ಕಾನೂನು. ಈ ಕಾಯ್ದೆಯಡಿ ಜಾಮೀನು ಕಠಿಣ, ಆಸ್ತಿ ಮುಟ್ಟುಗೋಲು ಮತ್ತು ಗರಿಷ್ಠ ಜೀವಾವಧಿ ಅಥವಾ ಗಲ್ಲು ಶಿಕ್ಷೆಯವರೆಗೂ ಅವಕಾಶವಿದೆ. ಕನಿಷ್ಠ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಆರೋಪಪಟ್ಟಿ ಸಲ್ಲಿಸಲು 365 ದಿನಗಳ ಕಾಲಾವಕಾಶ ಇರುತ್ತದೆ.

Trending

Exit mobile version