ದೇಶ
ಸುರಕ್ಷತಾ ಸೂಚನೆ ಮೀರಿ ನೀರಿಗೆ ಇಳಿದ ಯುವಕ – ಜೀವ ಪಾಠ ಕಲಿಸಿದ ಘಟನೆ!
ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಜಲಾಶಯ (Vani Vilas Dam) ಬಳಿಯಲ್ಲಿ ನಿನ್ನೆ ನಡೆದ ಘಟನೆಯೊಂದು ಜೀವಪಾಯದಿಂದ ಪಾರಾದ ಯುವಕನ ಕಥೆ ಮೂಲಕ ಚರ್ಚೆಗೆ ಕಾರಣವಾಗಿದೆ. ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ರಕ್ಷಿಸಲಾಗಿದೆ.
ಒಂದೇ ವರ್ಷದಲ್ಲಿ ಸತತ ಎರಡನೇ ಬಾರಿಗೆ ವಿವಿಸಾಗರ ಜಲಾಶಯವು ಕೋಡಿ ಬಿಟ್ಟಿದ್ದು, ಬರದನಾಡಿನ ಜೀವನಾಡಿಯಾದ ಈ ಜಲಾಶಯಕ್ಕೆ ಸಾವಿರಾರು ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಇದೇ ವೇಳೆ ಒಬ್ಬ ಯುವಕ ಹುಚ್ಚು ಸಾಹಸಕ್ಕೆ ಮುಂದಾಗಿ, ಹರಿಯುತ್ತಿದ್ದ ನೀರಿನತ್ತ ಹತ್ತಿ ಆಯತಪ್ಪಿ ಜಲಪ್ರವಾಹಕ್ಕೆ ಸಿಲುಕಿದ್ದ.
ಕ್ಷಣಾರ್ಧದಲ್ಲೇ ಸ್ಥಳೀಯರು ಹಾಗೂ ಪೊಲೀಸರು ಹಗ್ಗದ ಸಹಾಯದಿಂದ ಯುವಕನನ್ನು ಎಳೆದು ರಕ್ಷಿಸಿದರು. ಅಲ್ಪ ವ್ಯತ್ಯಾಸವಾದರೆ ಆತನ ಜೀವಾಪಾಯವಾಗುತ್ತಿತ್ತು ಎಂದು ಸಾಕ್ಷಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ಜಿಲ್ಲಾಡಳಿತ ಈಗಾಗಲೇ ನೀರಿನಲ್ಲಿ ಈಜಾಡದಂತೆ, ಕೋಡಿ ಹತ್ತಿರ ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ, ಯುವಕರು ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ವಿವಿಸಾಗರದ ಸೌಂದರ್ಯ ಆಕರ್ಷಕವಾದರೂ, ಜೀವಕ್ಕೆ ಅಪಾಯ ತಂದೊಡ್ಡುವ ಸಾಹಸದಿಂದ ದೂರವಿರಬೇಕು ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.