Connect with us

ಕ್ರೀಡೆ

ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ – ಇಬ್ಬರಿಗೂ ಬ್ಯಾನ್‌ ಭೀತಿ?

ಅಡಿಲೇಡ್‌: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯಾ ಸ್ಟಾರ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ನಡುವಿನ ವಾಗ್ದಾದ ಐಸಿಸಿ ಅಂಗಳ ತಲುಪಿದೆ. ಇದರಿಂದ ಇಬ್ಬರ ವಿರುದ್ಧವೂ ಐಸಿಸಿ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೌದು. ಭಾರತ ಮತ್ತು ಆಸೀಸ್‌ ನಡುವಿನ 2ನೇ ಟೆಸ್ಟ್‌ ಪಂದ್ಯದ ವೇಳೆ ಆಸೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್‌ ಎಸೆದ ಯಾರ್ಕರ್‌ಗೆ ಟ್ರಾವಿಸ್‌ ಹೆಡ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಅಷ್ಟರಲ್ಲಾಗಲೇ 140 ರನ್‌ ಬಾರಿಸಿದ್ದರು. ಟ್ರಾವಿಸ್‌ ಹೆಡ್‌ ಔಟಾಗುತ್ತಿದ್ದಂತೆ ʻವೆಲ್‌ ಬೌಲ್‌ʼ ಎಂದು ಹೇಳಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಸಿರಾಜ್‌ ಅವರು ತೋರಿದ ಅತಿರೇಖದ ವರ್ತನೆ ಈಗ ಚರ್ಚೆಗೆ ಗ್ರಾಸವಾಗಿದೆ.

ಔಟಾದ ಬಳಿಕ ಸಿರಾಜ್‌ಗೆ ಹೆಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಆದರೆ ಅವರಿಬ್ಬರ ನಡುವೆ ವಿನಿಮಯವಾದ ಮಾತುಗಳು ಏನು ಎನ್ನುವುದು ಸ್ಪಷ್ಟವಾಗಿಲ್ಲ. ಆದ್ರೆ ಇದನ್ನು ಅಭಿಮಾನಿಗಳು ಸುಮ್ಮನೆ ಬಿಡಲಿಲ್ಲ. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್‌ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು ʻಬೂʼ ಎಂದು ಅವರನ್ನು ಅಣುಕಿಸಿದ್ದರು. ಈ ವಿವಾದ ಐಸಿಸಿ ಅಂಗಳ ತಲುಪಿದ್ದು, ಇಬ್ಬರಿಗೂ ದಂಡ ವಿಧಿಸುವ ಅಥವಾ ಒಂದು ಪಂದ್ಯಕ್ಕೆ ಬ್ಯಾನ್‌ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಟ್ರಾವಿಸ್ ಹೆಡ್ ಹೇಳಿದ್ದೇನು?
2ನೇ ದಿನದ ಆಟ ಮುಕ್ತಾಯಗೊಂಡ ಬಳಿಕ ಟ್ರಾವಿಸ್‌ ಹೆಡ್‌ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ್ದರು. ನಾನು ಔಟಾದ ಬಳಿಕ ʻಚೆನ್ನಾಗಿ ಬೌಲ್ ಮಾಡಿದ್ದಿರಿʼ ಎಂದು ಹೇಳಿದೆ. ಆದ್ರೆ ಸಿರಾಜ್‌ ತಪ್ಪಾಗಿ ಅರ್ಥೈಸಿಕೊಂಡರು. ಇದು ಸ್ವಲ್ಪ ಜಾಸ್ತಿ ಆಯ್ತು ಎಂದು ಹೆಡ್‌ ಸ್ಪಷ್ಟನೆ ನೀಡಿದ್ದರು.

ಸಿರಾಜ್‌ ಪ್ರತಿಕ್ರಿಯೆ ಏನು?
ಮರುದಿನ ಹರ್ಭಜನ್‌ ಸಿಂಗ್‌ ಅವರೊಂದಿಗೆ ನಡೆದ ಚುಟುಕು ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಸಿರಾಜ್‌, ಹೆಡ್‌ ಹೇಳಿಕೆಯನ್ನು ನಿರಾಕರಿಸಿದ್ದರು. ʻಚೆನ್ನಾಗಿ ಬೌಲ್ ಮಾಡಿದ್ದಿʼ ಎಂಬುದಾಗಿ ಹೆಡ್ ಹೇಳಲೇ ಇಲ್ಲ. ಒಳ್ಳೆಯ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದಾಗ, ಅದು ನಿಮ್ಮಲ್ಲಿ ವಿಭಿನ್ನವಾಗಿ ಕಿಚ್ಚು ಹೊತ್ತಿಸುತ್ತದೆ. ನಾನು ಅವರನ್ನು ಬೌಲ್ಡ್ ಮಾಡಿದಾಗ ನಾನು ಸಂಭ್ರಮಿಸಿದ್ದೆ ಅಷ್ಟೆ. ಆಗ ಅವರು ನನ್ನನ್ನು ನಿಂದಿಸಿದರು. ಅವರು ನನಗೆ ಹೇಳಿದ್ದು ಅದನ್ನಲ್ಲ ಎನ್ನುವುದು ಎಲ್ಲರಿಗೂ ಕಾಣುವಂತಿದೆ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ಏಕೆಂದರೆ ಕ್ರಿಕೆಟ್ ಜೆಂಟಲ್‌ಮನ್‌ಗಳ ಆಟ ಎಂದು ತಿಳಿಸಿದ್ದರು.

ಮೂರನೇ ದಿನ ಸಿರಾಜ್ ಬ್ಯಾಟಿಂಗ್‌ಗೆ ಬಂದಾಗ, ಹೆಡ್ ಮತ್ತು ಅವರ ನಡುವೆ ಸ್ವಲ್ಪ ಹೊತ್ತು ಮಾತುಕತೆ ನಡೆದಿತ್ತು. ಅವರಿಬ್ಬರೂ ವಿವಾದ ಇತ್ಯರ್ಥಪಡಿಸಿಕೊಂಡರು, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಹೋಗೋಣ ಅಂತ ಹೇಳಿದ್ದರು ಎನ್ನಲಾಗಿದೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರೀಡೆ

IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ!”

ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಶಿವರಾತ್ರಿ ಹಬ್ಬದಂದೇ ನಡೆಯಲಿರುವ ಈ ನಿರ್ಣಾಯಕ ಸಮರಕ್ಕಾಗಿ ಎರಡೂ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಫೆ.12ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿದು ಗೆಲುವಿನ ಆತ್ಮವಿಶ್ವಾಸದೊಂದಿಗೆ ಪಾಕಿಸ್ತಾನ ಎದುರಿಸಲು ಸಜ್ಜಾಗಿದೆ.

ಈ ಮಧ್ಯೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಭಾರತಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ. ಅದಕ್ಕಾಗಿ ನನ್ನ ಬೌಲಿಂಗ್ ಶೈಲಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.


ಮಾತಿನ ಸಮರ ಜೋರಾಗಿದೆ

ಟಿ20 ವಿಶ್ವಕಪ್ ಈಗ ರೋಚಕ ಹಂತ ತಲುಪಿದ್ದು, ಈಗಾಗಲೇ 15ಕ್ಕೂ ಹೆಚ್ಚು ಪಂದ್ಯಗಳು ಪೂರ್ಣಗೊಂಡಿವೆ. ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ? ಎಂಬ ಅನುಮಾನಕ್ಕೆ ತೆರೆಬಿದ್ದಿದ್ದು, ಪಾಕಿಸ್ತಾನ ಪಂದ್ಯಕ್ಕೆ ಒಪ್ಪಿಗೆ ನೀಡಿದೆ.

ಪಂದ್ಯ ಖಚಿತವಾದ ಬೆನ್ನಲ್ಲೇ ಎರಡೂ ತಂಡಗಳ ನಡುವೆ ಮಾತಿನ ಸಮರ ಜೋರಾಗಿದೆ. ಪಾಕಿಸ್ತಾನಿ ಆಟಗಾರರು ಭಾರತವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದರೆ, ಭಾರತೀಯರು ಪಾಕಿಸ್ತಾನವನ್ನು ಮಣಿಸುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ.


ತಾರಿಕ್ ಸಮರ್ಥನೆ

ಭಾರತೀಯರು ನನ್ನ ಬೌಲಿಂಗ್ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಐಸಿಸಿ ನಿಯಮಗಳ ಪ್ರಕಾರ ನನ್ನ ಬೌಲಿಂಗ್ ಶೈಲಿ ಮಾನ್ಯವಾಗಿದೆ ಎಂದು ಉಸ್ಮಾನ್ ತಾರಿಕ್ ಸಮರ್ಥಿಸಿಕೊಂಡಿದ್ದಾರೆ.

“ಭಾರತೀಯ ಆಟಗಾರರಿಗೆ ನನ್ನ ಬೌಲಿಂಗ್‌ನಿಂದ ಹೆಚ್ಚುವರಿ ಒತ್ತಡ ಇದೆ. ಅದಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ. ಫೆಬ್ರವರಿ 15ರಂದು ಭಾರತದ ಅಗ್ರ ಕ್ರಮಾಂಕವನ್ನು ಕೆಡವುತ್ತೇನೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನನ್ನ ಬಗ್ಗೆ ಏನು ಚರ್ಚೆ ನಡೆಯುತ್ತಿದೆ ಎಂಬುದನ್ನು ನಾನು ಪರಿಗಣಿಸುವುದಿಲ್ಲ. ನನ್ನ ಗಮನ ಪಂದ್ಯದಲ್ಲೇ ಇದೆ” ಎಂದು ತಾರಿಕ್ ಹೇಳಿದ್ದಾರೆ.

Continue Reading

ಕ್ರೀಡೆ

RCB ಮಾರಾಟ ಪ್ರಕ್ರಿಯೆ ಆರಂಭ: ಜೈಲಿನಿಂದಲೇ ಸುಕೇಶ್ ₹8,300 ಕೋಟಿ ಬಿಡ್?

ಬೆಂಗಳೂರು, ಫೆ.12: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆಯ ಮೊದಲ ಹಂತ ಅಧಿಕೃತವಾಗಿ ಆರಂಭವಾಗಿದೆ. ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಡಿಯಾಜಿಯೋ (Diageo) ಕಂಪನಿಯು ಆಸಕ್ತ ಖರೀದಿದಾರರಿಗೆ ಮಾಹಿತಿ ಪತ್ರಗಳನ್ನು ವಿತರಿಸಿದೆ. ಈ ನಡುವೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು RCB ಖರೀದಿಗೆ ಬಿಡ್ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಎಂದು ಬಿಂಬಿಸಿಕೊಂಡು ವಂಚನೆ ಆರೋಪದಡಿ ಬಂಧನದಲ್ಲಿರುವ ಸುಕೇಶ್, ತಮ್ಮ ಎಲ್‌ಎಸ್ ಹೋಲ್ಡಿಂಗ್ಸ್ (LS Holdings) ಸಂಸ್ಥೆ ಮೂಲಕ ಡಿಯಾಜಿಯೋಗೆ ಪತ್ರ ಬರೆದು 1 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹8,300 ಕೋಟಿ) ಮೊತ್ತದ ಸಂಪೂರ್ಣ ನಗದು ಬಿಡ್ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. 48 ಗಂಟೆಗಳೊಳಗೆ ಪಾವತಿ ಪೂರ್ಣಗೊಳಿಸಲು ಸಿದ್ಧತೆ ಇದೆ ಎಂದು ಕೂಡ ಹೇಳಿದ್ದಾರೆ.

ಸುಕೇಶ್, RCB ಅನ್ನು ತಮ್ಮ ತವರು ತಂಡ ಎಂದು ಬಣ್ಣಿಸಿ, ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡರೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಉಡುಗೊರೆಯಾಗಿ ನೀಡುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇದೇವರೆಗೆ 9 ಬಿಡ್‌ಗಳು ಸಲ್ಲಿಕೆಯಾಗಿವೆ ಎಂದು ವರದಿಗಳು ಸೂಚಿಸುತ್ತವೆ. ಸೀರಂ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಸಹ ಮಾಲೀಕತ್ವ ಹೊಂದಿರುವ ಗ್ಲೇಝರ್ಸ್ ಕಂಪನಿಗಳು ಪೈಪೋಟಿಯಲ್ಲಿ ಇದ್ದಾರೆ. ಗ್ಲೇಝರ್ಸ್ ಸಂಸ್ಥೆ ಸುಮಾರು ₹16,300 ಕೋಟಿ ಮೊತ್ತದ ಬಿಡ್ ಸಲ್ಲಿಸಿದೆ ಎನ್ನಲಾಗಿದೆ.

RCB ಮಾರಾಟ ಪ್ರಕ್ರಿಯೆ ಈಗ ಕ್ರಿಕೆಟ್ ಮತ್ತು ಉದ್ಯಮ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.

Continue Reading

ಕ್ರೀಡೆ

ಕನ್ನಡದ ಹೆಮ್ಮೆ ಜಿಆರ್ ವಿಶ್ವನಾಥ್‌ಗೆ ಜನ್ಮದಿನ ಸಂಭ್ರಮ: ವಿಶಿಯ ಕಲಾತ್ಮಕ ಬ್ಯಾಟಿಂಗ್‌ಗೆ 77ನೇ ವಸಂತ

ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದ ಕಲಾತ್ಮಕ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಗುಂಡಪ್ಪ ರಂಗನಾಥ್ ವಿಶ್ವನಾಥ್ (GR Vishwanath) ಅವರಿಗೆ ಫೆಬ್ರವರಿ 12ರಂದು ಜನ್ಮದಿನ ಸಂಭ್ರಮ. ವಿಶಿ ಕ್ರೀಸಿಗೆ ಬಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಶತಕ ಸಿಡಿಸಿದ ಯಾವುದೇ ಪಂದ್ಯದಲ್ಲಿ ಭಾರತ ಸೋತ ಉದಾಹರಣೆ ಇಲ್ಲ — ಒಂದೋ ಗೆಲುವು, ಇಲ್ಲವೇ ಡ್ರಾ!

1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ವಿಶಿ, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆದರೂ, ಎರಡನೇ ಇನ್ನಿಂಗ್ಸ್‌ನಲ್ಲಿ 25 ಬೌಂಡರಿಗಳೊಂದಿಗೆ 137 ರನ್ ಸಿಡಿಸಿ ಕ್ರಿಕೆಟ್ ಲೋಕದ ಗಮನ ಸೆಳೆದರು. ಅವರ ಸ್ಕ್ವೇರ್ ಕಟ್ ಶಾಟ್ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿತ್ತು.

ಗವಾಸ್ಕರ್ ಪ್ರಶಂಸೆ, ಹೆಲ್ಮೆಟ್ ಇಲ್ಲದೆ ವೇಗದ ಬೌಲರ್ ಎದುರಿಸಿದ ಧೈರ್ಯ

“ನನ್ನಂತಹ ನೂರು ಗವಾಸ್ಕರ್ ಬರಬಹುದು, ಆದರೆ ವಿಶಿಯಂತವರು ಬರಲಾರರು” ಎಂಬ ಸುನಿಲ್ ಗವಾಸ್ಕರ್ ಮಾತುಗಳು ವಿಶಿಯ ಮಹತ್ವ ಸಾರುತ್ತವೆ. ಆಂಡಿ ರಾಬರ್ಟ್ಸ್, ಜೆಫ್ ಥಾಂಪ್ಸನ್‌ಂತಹ ವೇಗದ ಬೌಲರ್‌ಗಳನ್ನು ಹೆಲ್ಮೆಟ್ ಇಲ್ಲದೆ ಎದುರಿಸಿದ ಧೈರ್ಯವೂ ವಿಶಿಯ ವಿಶೇಷ.

ಕ್ರೀಡಾಸ್ಪೂರ್ತಿಗೆ ಮಾದರಿ

1980ರ ಸುವರ್ಣ ಮಹೋತ್ಸವ ಟೆಸ್ಟ್‌ನಲ್ಲಿ ಅಂಪೈರ್ ತಪ್ಪು ತೀರ್ಪು ನೀಡಿದಾಗ ಬಾಬ್ ಟೇಲರ್ ಅವರನ್ನು ಮರು ಕ್ರೀಸಿಗೆ ಕರೆಸಿದ ವಿಶಿಯ ಕ್ರೀಡಾಸ್ಫೂರ್ತಿ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ.

ರಣಜಿ ಫೈನಲ್‌ಗೂ ಮದುವೆಯೂ ಒಂದೇ ಸಮಯ

1978ರಲ್ಲಿ ಗವಾಸ್ಕರ್ ಸಹೋದರಿ ಕವಿತಾ ಅವರನ್ನು ಮದುವೆಯಾದ ವಿಶಿ, ಮದುವೆಯ ಬಳಿಕ ನೇರವಾಗಿ ಮೈದಾನಕ್ಕಿಳಿದು ರಣಜಿ ಫೈನಲ್‌ನಲ್ಲಿ 247 ರನ್ ಸಿಡಿಸಿ ಕರ್ನಾಟಕಕ್ಕೆ ಕಿರೀಟ ತಂದುಕೊಟ್ಟರು.

ವಿಶಿಯ ಮೂರು ಸ್ಮರಣೀಯ ಇನ್ನಿಂಗ್ಸ್

  • 1975, ಮದ್ರಾಸ್: ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್
  • 1969, ಕಾನ್ಪುರ: ಪಾದಾರ್ಪಣೆ ಪಂದ್ಯದಲ್ಲೇ 137 ರನ್
  • 1981, ಎಂಸಿಜಿ: ಆಸ್ಟ್ರೇಲಿಯಾ ವಿರುದ್ಧ 114 ರನ್

77ನೇ ವಸಂತಕ್ಕೆ ಕಾಲಿಡುತ್ತಿರುವ ಕನ್ನಡದ ಹೆಮ್ಮೆ ಜಿಆರ್ ವಿಶ್ವನಾಥ್ ಅವರಿಗೆ ಹಾರ್ದಿಕ ಶುಭಾಶಯಗಳು.

Continue Reading

Trending