ಬೆಂಗಳೂರು

ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಬಳಿ ತಮ್ಮ ಕೊನೆಯ ಆಸೆ ಹೇಳಿಕೊಂಡಿದ್ದ ಎಸ್.ಎಂ.ಕೃಷ್ಣ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಂತಿಮಯಾತ್ರೆ ಬೆಂಗಳೂರಿನಿಂದ ಅವರ ಹುಟ್ಟೂರು ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಡೆಗೆ ಸಾಗುತ್ತಿದೆ. ಇಂದು (ಡಿ 11) ಮಧ್ಯಾಹ್ನ ಮೂರು ಗಂಟೆಯ ನಂತರ ಅವರ ಅಂತಿಮ ಸಂಸ್ಕಾರ ವಿಧಿವಿಧಾನ ಆರಂಭವಾಗಲಿದೆ.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಕೃಷ್ಣ ಅವರ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಲವಾರು ವಿಚಾರಗಳನ್ನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮುಂದೆ ಇಟ್ಟಿದ್ದಾರೆ. ರಾಜಕೀಯವಾಗಿ ಹೇಗೆ ತಮಗೆ ಗುರು ಎನ್ನುವುದನ್ನು ವಿವರಿಸಿದ್ದಾರೆ.

ಹಿಂದಿನ ಮುಖ್ಯಮಂತ್ರಿಗಳಾದ ಬಂಗಾರಪ್ಪ, ವೀರಪ್ಪ ಮೊಯ್ಲಿ ಕಾಲದ ರಾಜಕೀಯ ವಿದ್ಯಮಾನಗಳನ್ನು ಸಭೆಯಲ್ಲಿ ಡಿಕೆಶಿ ವಿವರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಕೃಷ್ಣ ಅವರ ಪಾತ್ರವೂ ಇದೆ. ಈಗ ಅದನ್ನು ಹೇಳಿದರೆ ಕೆಲವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕೂಡೇಸ್ ಸಂಸ್ಥೆಯವರು, ಮಲ್ಯ , ಆದಿಕೇಶವಲು ಅವರು ಕೃಷ್ಣ ಅವರಿಗೆ ರಾಜಕೀಯವಾಗಿ ಬಹಳಷ್ಟು ಸಹಾಯ ಮಾಡಿದ್ದರು ಎಂದು ಹೇಳಿರುವ ಡಿಕೆಶಿ, ತಮ್ಮ ಪುತ್ರಿಯ ಬಳಿ ಅವರು ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾರೆ ಎಂದು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ.

ಇಂದು ನಾವೆಲ್ಲರೂ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದೇವೆ, ನಾಳೆ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಅವರು ತಮ್ಮ ಕೊನೆಯ ಆಸೆಯನ್ನು ನನ್ನ ಮಗಳ ಬಳಿ ಹೇಳಿಕೊಂಡಿದ್ದರು. ತಮ್ಮ ಹೂಟ್ಟೂರಿನಲ್ಲಿ ಒಂದು ಶಾಲೆ ಕಟ್ಟಬೇಕು ಎಂದು ಹೇಳಿದ್ದಾರೆ. ಇದನ್ನು ಅವರ ಮನೆಯವರ ಬಳಿ ಚರ್ಚೆ ಮಾಡುತ್ತೇನೆ, ಏನು ಮಾಡಬೇಕೋ ಮಾಡುತ್ತೇವೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೃಷ್ಣ ಅವರು ವೈಯಕ್ತಿಕ ಕಾರಣದಿಂದ ಕಾಂಗ್ರೆಸ್ ಪಕ್ಷವನ್ನು ಬಿಡುವ ತೀರ್ಮಾನಕ್ಕೆ ಬಂದಿದ್ದರು. ಆಗ ನಾನು ಅವರಿಗೆ ಒಂದು ಮಾತು ಹೇಳಿದೆ. ನೀವು ಸಾಯುವ ಮುನ್ನ ಕಾಂಗ್ರೆಸಿಗನಾಗಿ ಸಾಯಬೇಕು ಎಂದು ಮನವಿ ಮಾಡಿದ್ದೆ. ಅವರು ಆಸ್ಪತ್ರೆಯಲ್ಲಿದ್ದಾಗ ಈ ವಿಚಾರ ಚರ್ಚೆಗೆ ಬಂತು. ಮನೆಯಲ್ಲಿ ಕೆಲವು ಸಮಸ್ಯೆ ಇದ್ದ ಕಾರಣ ನಾವು ಅವರಿಗೆ ತೊಂದರೆ ಮಾಡಲು ಹೋಗಲಿಲ್ಲ ಎಂದು ಡಿ.ಕೆ.ಶಿವಕುಮಾರ್, ತಮ್ಮ ಒಡನಾಟವನ್ನು ನೆನಪಿಸಿಕೊಂಡರು.

ಅವರ ಪ್ರತಿ ಮಾತಿಗೂ ತೂಕ ಇರುತ್ತಿತ್ತು. ಯಾರಿಗೂ ನೋವು ಮಾಡದಂತೆ ಮಾತನಾಡುತ್ತಿದ್ದರು. ನಾನು ಆಗ ಸರಿಯಾದ ಬಟ್ಟೆ ಹಾಕುತ್ತಿರಲಿಲ್ಲ. ಆಗ ನನ್ನ ನೋಡಿ ಆರ್.ಟಿ ನಾರಾಯಣ ಅವರನ್ನು ಕರೆಸಿ ಇವನಿಗೆ ಬಟ್ಟೆ ಹೊಲಿಸಿ ಎಂದರು. ಬಾಂಬೆಯಿಂದ ಟೈಲರ್ ಕರೆಸಿ 10 ಜತೆ ಬಟ್ಟೆ ಹೊಲಿಸಿಕೊಟ್ಟು ಯಾವ ರೀತಿ ಉಡುಗೆ ತೊಡಬೇಕು ಎಂದು ಕಲಿಸಿದರು ” ಎಂದು ತಮ್ಮ ನೆನಪನ್ನು ಮೆಲುಕು ಹಾಕಿಕೊಂಡರು.

ಕೇಂದ್ರ ಸರ್ಕಾರದಲ್ಲಿ ಅನಂತಕುಮಾರ್ ಹಾಗೂ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಾಂಧವ್ಯ ಅತ್ಯುತ್ತಮವಾಗಿತ್ತು. ಅವರ ಜತೆ ಪ್ರಧಾನಿ ಅವರನ್ನು ಭೇಟಿ ಮಾಡಿ ಮೆಟ್ರೋ ರೈಲು ಜಾರಿಗೆ ತರಲಾಯಿತು ಎಂದು ಡಿ.ಕೆ.ಶಿವಕುಮಾರ್, ಶ್ರದ್ದಾಂಜಲಿ ಸಭೆಯಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version