Connect with us

ಕ್ರೀಡೆ

₹27 ಕೋಟಿ ಬೆಲೆಯ ಸ್ಟಾರ್​ ಪ್ಲೇಯರ್​ ಫ್ಲಾಪ್: ₹3 ಕೋಟಿಯ ಆಟಗಾರ ಸೂಪರ್​ ಹಿಟ್​ – IPL 2025

Published

on

IPL 2025, LSG vs DC: 18ನೇ ಆವೃತ್ತಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಗೆದ್ದು ಬೀಗಿದೆ. ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಪರ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಅಶುತೋಷ್​ ಶರ್ಮಾ, ತಮ್ಮ ಸ್ಪೋಟಕ ಇನ್ನಿಂಗ್ಸ್​ ಮೂಲಕ ಲಕ್ನೋ ಕೈಯಿಂದ ಗೆಲುವು ಕಸಿದರು. ಇದರೊಂದಿಗೆ ಡೆಲ್ಲಿ 1 ವಿಕೆಟ್​ನಿಂದ ಪಂದ್ಯ ಗೆದ್ದು ಕಪ್​ ಬೇಟೆ ಪ್ರಾರಂಭಿಸಿದೆ.

“ಈ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ನಾಯಕ ರಿಷಭ್​ ಪಂತ್​ ಮಾಡಿದ ಎಡವಟ್ಟುಗಳಿಂದಾಗಿ ಡೆಲ್ಲಿ ಗೆಲುವು ಸಾಧಿಸಿತು. ಒಂದು ರೀತಿಯಲ್ಲಿ ಡೆಲ್ಲಿ ಗೆಲುವಿಗೆ ಪ್ರಮುಖ ಕಾರಣವೇ ಪಂತ್​ ಎಂದರೆ ತಪ್ಪಾಗಲ್ಲ” ಎಂದು ಅಭಿಮಾನಿಗಳು ಆನ್‌ಲೈನ್‌ ವೇದಿಕೆಗಳ ಮೂಲಕ ಟೀಕಿಸುತ್ತಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ರಿಷಭ್ ಪಂತ್ ಮೊದಲ ಪಂದ್ಯದಲ್ಲೇ ಭಾರಿ ನಿರಾಶೆ ಮೂಡಿಸಿದ್ದಾರೆ. ಬ್ಯಾಟಿಂಗ್​ ಮತ್ತು ಕೀಪಿಂಗ್​ ಎರಡರಲ್ಲೂ ಅವರು ವಿಫಲರಾದರು. ಲಕ್ನೋ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಪಂತ್ ಆರು ಎಸೆತಗಳನ್ನೆದುರಿಸಿ ಕುಲದೀಪ್ ಯಾದವ್ ಬೌಲಿಂಗ್​ನಲ್ಲಿ ಡು ಪ್ಲೆಸಿಸ್​ಗೆ ಕ್ಯಾಚಿತ್ತು ಶೂನ್ಯಕ್ಕೆ ಪೆವಿಲಿಯನ್​ ಸೇರಿದರು.

ಕೀಪಿಂಗ್​ನಲ್ಲೂ ಫ್ಲಾಪ್​: ಡೆಲ್ಲಿ ಗೆಲುವಿಗೆ ಅಂತಿಮ ಓವರ್​ನಲ್ಲಿ 6 ರನ್​ ಬೇಕಿತ್ತು. ಮತ್ತೊಂದೆಡೆ ಲಕ್ನೋ ಗೆಲುವಿಗೆ 1 ವಿಕೆಟ್​ ಬೇಕಿತ್ತು. ಈ ವೇಳೆ ಬೌಲರ್​ ಮೋಹಿತ್​ ಶರ್ಮಾ ಬ್ಯಾಟಿಂಗ್‌ಗೆ ಆಗಮಿಸಿದ್ದರು. ಶಹಬಾಜ್​ ಅಹ್ಮದ್​ ಎಸೆದ ಮೊದಲ ಎಸೆತದಲ್ಲಿ ರನ್​ ಕಸಿಯಲು ಮುಂದಾದ ಮೋಹಿತ್​ ಕ್ರೀಸ್​ ಬಿಟ್ಟು ಹೊರಬಂದಿದ್ದರು. ಚೆಂಡು ಮಿಸ್​ ಆಗಿ ಕೀಪರ್​ ಕಡೆ ಸಾಗಿತ್ತು. ಆದರೆ ಚೆಂಡನ್ನು​ ಹಿಡಿಯುವಲ್ಲಿ ವಿಫಲರಾದ ಪಂತ್​ ಔಟ್‌ ಮಾಡುವ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಇದು ಡೆಲ್ಲಿ ಗೆಲುವಿಗೆ ಕಾರಣವಾಯಿತು.

ಇದರ ಬೆನ್ನಲ್ಲೇ ನೆಟ್ಟಿಗರು ಪಂತ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಆಟಕ್ಕಾಗಿ ಪಂತ್​ 27 ಕೋಟಿ ಪಡೆದರೇ ಎಂದು ಕಾಲೆಳೆದಿದ್ದಾರೆ. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಲಕ್ನೋ ತಂಡ ಪಂತ್‌ರನ್ನು 27 ಕೋಟಿ ರೂಪಾಯಿಗೆ ಖರೀದಿಸಿದೆ. ಆದರೆ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ಪಂತ್,​ ಮುಂದಿನ ಪಂದ್ಯದಲ್ಲಿ ಅಬ್ಬರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಅಶುತೋಷ್​ ಶರ್ಮಾ ಸೂಪರ್​ ಹಿಟ್​: ಈ ಪಂದ್ಯದಲ್ಲಿ ₹3 ಕೋಟಿ ಬೆಲೆಯ ಅಶುತೋಷ್​ ಶರ್ಮಾ ಡೆಲ್ಲಿ ಪರ ಅದ್ಭುತ ಪ್ರದರ್ಶನ ನೀಡಿದರು. 31 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್​ ಸಹಾಯದಿಂದ ಅಜೇಯ 66 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

ಇಂಗ್ಲೆಂಡ್ ವಿರುದ್ಧ ಮುಖಭಂಗ; ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

Published

on

ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 125 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಇನ್ನೂ ಗೆಲುವಿನ ಖಾತೆ ತೆರೆಯದೆ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಅವರ 44 ಎಸೆತಗಳಲ್ಲಿ 70 ರನ್‌ಗಳ ಸ್ಫೋಟಕ ಆಟದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ಕೊನೆಯಲ್ಲಿ ಸ್ಯಾಮ್ ಕರನ್ ಅಜೇಯ 41 ರನ್ ಹಾಗೂ ವಿಲ್ ಜಾಕ್ಸ್ ಅವರ ವೇಗದ ಇನ್ನಿಂಗ್ಸ್‌ನಿಂದ ಇಂಗ್ಲೆಂಡ್ 20 ಓವರ್‌ಗಳಲ್ಲಿ 201 ರನ್ ಗಳಿಸಿತು.

202 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟರ್‌ಗಳು ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ಭಾರತ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗೆ ಆಲೌಟ್ ಆಗಿ 125 ರನ್‌ಗಳ ಭಾರೀ ಸೋಲು ಕಂಡಿತು. ವೈಭವ್ ಸೂರ್ಯವಂಶಿ ಹಾಗೂ ಇಶಾನ್ ಕಿಶನ್ ತಲಾ 13 ರನ್ ಗಳಿಸಿದ್ದೇ ಭಾರತದ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, “ನಾವು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದೇವೆ. ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ ಅದನ್ನು ಸ್ವೀಕರಿಸಲೇಬೇಕು. ಟ್ರೆಂಟ್ ಬ್ರಿಡ್ಜ್ ಪಿಚ್‌ನಲ್ಲಿ ನಮ್ಮ ಬೌಲರ್‌ಗಳು ಸರಿಯಾದ ಲೆಂತ್‌ನಲ್ಲಿ ಬೌಲಿಂಗ್ ಮಾಡಲು ವಿಫಲರಾದರು. ಪವರ್‌ಪ್ಲೇನಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಕಳೆದ ತಪ್ಪುಗಳನ್ನು ನೆನೆದು ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು. ಇದೀಗ ಸರಣಿಯಲ್ಲಿ ಉಳಿಯಲು ಭಾರತಕ್ಕೆ ಮುಂದಿನ ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ.

Continue Reading

ಕ್ರೀಡೆ

ಎಚ್ಚರ! Sports Association of India ಹೆಸರಿನಲ್ಲಿ ಭಾರೀ ವಂಚನೆ; PIB ನೀಡಿದ ತುರ್ತು ಎಚ್ಚರಿಕೆ

Published

on

ನವದೆಹಲಿ: ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ (MYAS) ಮಾನ್ಯತೆ ಪಡೆದಿರುವುದಾಗಿ ಸುಳ್ಳು ಹೇಳಿಕೊಂಡು ಆಟಗಾರರಿಂದ ಹಣ ವಸೂಲಿ ಮಾಡುತ್ತಿದ್ದ ‘ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (Sports Association of India) ಎಂಬ ನಕಲಿ ಸಂಸ್ಥೆಯ ವಂಚನೆ ಜಾಲವನ್ನು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್‌ಚೆಕ್ ಬಯಲಿಗೆಳೆದಿದೆ. ದೇಶದ ಕ್ರೀಡಾಪಟುಗಳು, ಪೋಷಕರು ಹಾಗೂ ತರಬೇತುದಾರರು ಇಂತಹ ನಕಲಿ ಜಾಹೀರಾತುಗಳಿಗೆ ಬಲಿಯಾಗದಂತೆ ಸರ್ಕಾರ ಎಚ್ಚರಿಕೆ ನೀಡಿದೆ.

ಸರ್ಕಾರದ ಅಧಿಕೃತ ಕ್ರೀಡಾ ಸಂಸ್ಥೆಯ ಹೆಸರು Sports Authority of India (SAI) ಆಗಿದ್ದು, ವಂಚಕರು ಅದಕ್ಕೆ ಹೋಲುವ Sports Association of India ಎಂಬ ಹೆಸರನ್ನು ಬಳಸಿಕೊಂಡು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಹೆಸರಿನಲ್ಲಿರುವ ಈ ಸಣ್ಣ ವ್ಯತ್ಯಾಸವೇ ವಂಚಕರ ಪ್ರಮುಖ ತಂತ್ರವಾಗಿದೆ ಎಂದು PIB ತಿಳಿಸಿದೆ.

ನಕಲಿ ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದಾಗಿ ಹೇಳಿ ಆಟಗಾರರಿಗೆ ಆಹ್ವಾನ ಪತ್ರಗಳನ್ನು ಕಳುಹಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿ ಆಟಗಾರರಿಂದ ₹1,500 ನೋಂದಣಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಸರ್ಕಾರಿ ಸಂಸ್ಥೆಯಂತೆ ಕಾಣುವ ನಕಲಿ ಜಾಹೀರಾತುಗಳು ಹಾಗೂ ಪ್ರಚಾರ ಸಾಮಗ್ರಿಗಳನ್ನೂ ಬಳಸಲಾಗುತ್ತಿದೆ.

PIB ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿರುವಂತೆ, ಈ ಸಂಸ್ಥೆಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯಾವುದೇ ಮಾನ್ಯತೆ ಇಲ್ಲ. ಜೊತೆಗೆ ಕೇಂದ್ರ ಸರ್ಕಾರದ Fit India ಅಭಿಯಾನದ ಹೆಸರು ಹಾಗೂ ಲೋಗೋ ಬಳಸಲು ಸಹ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಸರ್ಕಾರ ಹೇಳಿದೆ.

ಯಾವುದೇ ಕ್ರೀಡಾಕೂಟಕ್ಕೆ ನೋಂದಾಯಿಸಿಕೊಳ್ಳುವ ಮೊದಲು ಸಂಬಂಧಿತ ಸಂಸ್ಥೆಗೆ ಕ್ರೀಡಾ ಸಚಿವಾಲಯದ ಅಧಿಕೃತ ಮಾನ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಆನ್‌ಲೈನ್ ಮೂಲಕ ಕೇಳಲಾಗುವ ಅನುಮಾನಾಸ್ಪದ ನೋಂದಣಿ ಶುಲ್ಕಗಳನ್ನು ಪಾವತಿಸಬಾರದು ಎಂದು PIB ಸಲಹೆ ನೀಡಿದೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವ ಪ್ರತಿಭೆಗಳ ಕನಸನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ನಕಲಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಯಾವುದೇ ಹಣ ಪಾವತಿಸುವ ಮೊದಲು ಅಧಿಕೃತ ಸರ್ಕಾರಿ ಮೂಲಗಳಿಂದ ಮಾಹಿತಿ ಪರಿಶೀಲಿಸುವುದು ಅತ್ಯಗತ್ಯ ಎಂದು PIB ಮತ್ತೊಮ್ಮೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Continue Reading

ಕ್ರೀಡೆ

ಲಿಯೋನೆಲ್ ಮೆಸ್ಸಿ ವಿಶ್ವದಾಖಲೆ: ಒಂದೇ ಪಂದ್ಯದಲ್ಲಿ 6 ಐತಿಹಾಸಿಕ ಮೈಲಿಗಲ್ಲು, 1 ಬೇಡದ ದಾಖಲೆ!

Published

on

ಅರ್ಜೆಂಟೀನಾ: ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ವಿಶ್ವಕಪ್ ವೇದಿಕೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈಜಿಪ್ಟ್ ವಿರುದ್ಧ ನಡೆದ ರೋಚಕ ನಾಕೌಟ್ ಪಂದ್ಯದಲ್ಲಿ 3-2 ಅಂತರದ ಜಯ ಸಾಧಿಸಿದ ಹಾಲಿ ಚಾಂಪಿಯನ್ ಅರ್ಜೆಂಟೀನಾ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಮೆಸ್ಸಿ ಒಂದೇ ಪಂದ್ಯದಲ್ಲಿ ಹಲವು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ್ದ ಮೆಸ್ಸಿ, 83ನೇ ನಿಮಿಷದಲ್ಲಿ ಮಹತ್ವದ ಗೋಲು ದಾಖಲಿಸಿ ಅರ್ಜೆಂಟೀನಾಗೆ ಸಮಬಲ ತಂದುಕೊಟ್ಟರು. ಬಳಿಕ ಇಂಜುರಿ ಟೈಮ್‌ನಲ್ಲಿ ಎಂಜೊ ಫೆರ್ನಾಂಡಿಸ್ ಬಾರಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ಸ್ಮರಣೀಯ ಗೆಲುವು ದಾಖಲಿಸಿತು. 79ನೇ ನಿಮಿಷದವರೆಗೂ 0-2 ಹಿನ್ನಡೆಯಲ್ಲಿದ್ದ ತಂಡ ಅಂತಿಮವಾಗಿ ಗೆಲುವು ಸಾಧಿಸಿದ್ದು ವಿಶೇಷವಾಗಿದೆ.

ಈ ಗೋಲಿನೊಂದಿಗೆ ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲಿ ಸತತ ಆರು ನಾಕೌಟ್ ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಿದರು. ಅಲ್ಲದೆ, ಸತತ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಸಾಧನೆಯನ್ನೂ ಮುಂದುವರಿಸಿದರು. 2026ರ ವಿಶ್ವಕಪ್‌ನಲ್ಲಿ ಅವರ ಗೋಲುಗಳ ಸಂಖ್ಯೆ ಎಂಟಕ್ಕೇರಿದ್ದು, ವಿಶ್ವಕಪ್ ಇತಿಹಾಸದಲ್ಲಿ ಒಟ್ಟು ಗೋಲುಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಎಂಟು ಗೋಲುಗಳ ಮೂಲಕ ಅರ್ಜೆಂಟೀನಾದ ದಿಗ್ಗಜ ಗಿಲ್ಲೆರ್ಮೊ ಸ್ಟೇಬಿಲ್ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಜೊತೆಗೆ ಡಿಯಾಗೋ ಮರಡೋನಾ ನಂತರ ವಿಶ್ವಕಪ್ ಪಂದ್ಯವೊಂದರಲ್ಲಿ ಗೋಲು ಗಳಿಸಿ, ಕನಿಷ್ಠ ಐದು ಡ್ರಿಬಲ್ಸ್ ಪೂರ್ಣಗೊಳಿಸಿ ಹಾಗೂ ಐದಕ್ಕಿಂತ ಹೆಚ್ಚು ಗೋಲು ಅವಕಾಶಗಳನ್ನು ಸೃಷ್ಟಿಸಿದ ಎರಡನೇ ಅರ್ಜೆಂಟೀನಾ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ಆದರೆ ಇದೇ ಪಂದ್ಯದಲ್ಲಿ ಪೆನಾಲ್ಟಿ ಮಿಸ್ ಮಾಡಿಕೊಂಡ ಕಾರಣ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಎರಡು ಪೆನಾಲ್ಟಿಗಳನ್ನು ಮಿಸ್ ಮಾಡಿದ ಮೊದಲ ಆಟಗಾರ ಎಂಬ ಅನಗತ್ಯ ದಾಖಲೆಯೂ ಅವರ ಹೆಸರಿಗೆ ಸೇರಿದೆ. ಇದರೊಂದಿಗೆ ವಿಶ್ವಕಪ್ ವೃತ್ತಿಜೀವನದಲ್ಲಿ ನಾಲ್ಕು ಪೆನಾಲ್ಟಿಗಳನ್ನು ಕೈಚೆಲ್ಲಿರುವ ಆಟಗಾರ ಎಂಬ ದಾಖಲೆಯನ್ನೂ ಮೆಸ್ಸಿ ಹೊಂದಿದ್ದಾರೆ. ದಾಖಲೆಗಳ ಸಂಭ್ರಮದ ನಡುವೆಯೇ ಈ ಅಪರೂಪದ ಅಂಕಿಅಂಶವೂ ಚರ್ಚೆಗೆ ಕಾರಣವಾಗಿದೆ.

Continue Reading

Trending