ಬೆಂಗಳೂರು

ಬೆಂಗಳೂರಿನ ರಸ್ತೆಗಳ ಗುಣಮಟ್ಟ ಹೆಚ್ಚಿಸಲು 1600 ಕಿ.ಮೀ ಬ್ಲ್ಯಾಕ್, ವೈಟ್ ಟಾಪಿಂಗ್: ಡಿಸಿಎಂ – D K SHIVAKUMAR

ಬೆಂಗಳೂರು: ಬೆಂಗಳೂರಿನ ರಸ್ತೆಗಳ ಗುಣಮಟ್ಟ ಹೆಚ್ಚಿಸಲು ನಗರದ 1,600 ಕಿ.ಮೀ ನಷ್ಟು ಬ್ಲ್ಯಾಕ್ ಮತ್ತು ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಸ್ತೆಗಳ ಡಾಂಬರೀಕರಣ ಕಾಮಗಾರಿಗಳ ಭೂಮಿ ಪೂಜೆಯನ್ನು ಸೋಮವಾರ ನೆರವೇರಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ವಿವಿಧೆಡೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಸೋಮವಾರ ಒಂದೇ ದಿನ 10 ಕಡೆಗಳಲ್ಲಿ ಬ್ಲ್ಯಾಕ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು ನಗರದೊಳಗೆ ಒಟ್ಟು 1600 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್ ಹಾಗೂ ಬ್ಲ್ಯಾಕ್ ಟಾಪಿಂಗ್ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

ಈ ಹಿಂದೆ 196 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಕೈಗೊತ್ತಿಕೊಂಡಿದ್ದೆವು. ಇದೀಗ ಸುಮಾರು 450 ಕಿ.ಮೀ ಉದ್ದದ ರಸ್ತೆಗೆ ಕಾಮಗಾರಿ ಮಾಡಲಾಗುತ್ತಿದೆ. ಇನ್ನು 350 ಕಿ.ಮೀ ಉದ್ದದ ಕಾಮಗಾರಿ ಡಿಫೆಕ್ಟ್ ಲಾಯಬಲಿಟಿ ಪಿರಿಯಡ್ (ಡಿಎಲ್​ಪಿ)ಯಾಗಿ ಬಾಕಿ ಉಳಿದಿದ್ದು, ಇದರ ಹಿನ್ನೆಲೆಯಲ್ಲಿ ಇನ್ನು ಕೆಲಕಾಲ ಈ ರಸ್ತೆಗಳಲ್ಲಿ ಹಾನಿಯಾದರೆ ಗುತ್ತಿಗೆದಾರರೇ ಅದನ್ನು ಸರಿಪಡಿಸಬೇಕಾಗುತ್ತದೆ. ಹೀಗಾಗಿ ಈ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ತಿಳಿಸಿದರು.

ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ: ಬ್ರ್ಯಾಂಡ್ ಬೆಂಗಳೂರು ಅಡಿ ರಸ್ತೆಗಳ ಉನ್ನತೀಕರಣಕ್ಕೆ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ರೂ.6 ಸಾವಿರ ಕೋಟಿ ನೀಡಿದ್ದಾರೆ. ಬೆಂಗಳೂರಿನ ಮುಕ್ಕಾಲು ಭಾಗದ ರಸ್ತೆಯ ಬ್ಲ್ಯಾಕ್ ಹಾಗೂ ವೈಟ್ ಟಾಪಿಂಗ್ ಕೆಲಸ ತೆಗೆದುಕೊಂಡಿದ್ದೇವೆ. ಈ ರೀತಿಯ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಸ್ವತಃ ನಾನೇ ಈ ರಸ್ತೆಗಳ ಕಾಮಗಾರಿ ಪರಿಶೀಲನೆ ಮಾಡಿದ್ದೇನೆ. 1600 ಕಿ.ಮೀ ಉದ್ದದ ಮುಖ್ಯರಸ್ತೆ (ಆರ್ಟಿರಿಯಲ್) ಉಪಮುಖ್ಯ ರಸ್ತೆ (ಸಬ್ ಆರ್ಟಿರಿಯಲ್ ರೋಡ್)ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಈ ಎಲ್ಲ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ಬೆಂಗಳೂರಿಗೆ ವಿಶೇಷ ಕಾಳಜಿವಹಿಸಲಾಗುವುದು. ಪೊಲೀಸ್ ಜಂಟಿ ಆಯುಕ್ತರ ಜತೆ ಚರ್ಚೆ ಮಾಡಿದ್ದು, ಎಲ್ಲೆಲ್ಲಿ ರಸ್ತೆ ಸರಿಯಿಲ್ಲ ಎಂದು ಪೊಲೀಸರ ಗಮನಕ್ಕೆ ಬರುತ್ತದೆಯೋ ಅದನ್ನು ಪಾಲಿಕೆ ಆಯುಕ್ತರಿಗೆ ತಿಳಿಸಬೇಕು ಎಂದು ತಿಳಿಸಿದ್ದೇನೆ. ರಸ್ತೆ ಹದಗೆಟ್ಟಿರುವುದು ನಮ್ಮ ಇಂಜಿನಿಯರ್ ಗಳಿಗೆ, ಶಾಸಕರ ಕಣ್ಣಿಗೆ ಕಾಣದಿರಬಹುದು. ಆದರೆ, ಪೊಲೀಸ್ ಇಲಾಖೆಯವರ ಗಮನಕ್ಕೆ ಬಂದರೆ ಅದನ್ನು ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಇನ್ನು ಮಳೆ ನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಶ್ವಬ್ಯಾಂಕ್​​ನಿಂದ ಎರಡು ಸಾವಿರ ಕೋಟಿ ರೂ. ನೆರವು ಪಡೆಯುತ್ತಿದ್ದೇವೆ ಎಂದು ಹೇಳಿದರು.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಇನ್ನು ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ, ಕಸದ ಸಮಸ್ಯೆಯನ್ನು ನಾವು ನಿಭಾಯಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ, ಇದನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಾವು ಟೆಂಡರ್ ಗಳನ್ನು ಕರೆಯಲಾಗಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Trending

Exit mobile version