ರಾಜಕೀಯ
ಮೋದಿ ನಿಮ್ಮ ಸರ್ಕಾರ ಬೀಳಿಸ್ತಾರೆ, ಎಚ್ಚರವಾಗಿರಿ: ವೇದಿಕೆ ಮೇಲೆ ಸಿದ್ದರಾಮಯ್ಯ, ಡಿಕೆಶಿಗೆ ಖರ್ಗೆ ಎಚ್ಚರಿಕೆ

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಜೋರಾಗಿದೆ. ಇದರ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ಕಿವಿಮಾತು ಹೇಳಿದ್ದಾರೆ. ನಿಮ್ಮ ಸರ್ಕಾರವನ್ನು ಬೀಳಿಸಲು ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ನೀವು, ನೀವೆ ಕಿತ್ತಾಡಿಕೊಳ್ಳುತ್ತಿದ್ದರೆ ಸರ್ಕಾರವನ್ನು ಮುಗಿಸುತ್ತಾರೆ ಹುಷಾರಾಗಿರಿ ಎಂದು ಉಭಯ ನಾಯಕರಿಗೂ ವೇದಿಕೆ ಮೇಲೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ ಅವರು, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ತಾಪ ಇದ್ದರೂ ಒಗ್ಗಟ್ಟಾಗಿರಬೇಕು. ನೀವು ಹುಷಾರಾಗಿರಬೇಕು ಎಂದು ಹೇಳಿದರು. ಇದೇ ವೇಳೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಮೂಲಕ ಬೆದರಿಸಲು ಕೇಂದ್ರ ಸರ್ಕಾರ ನೋಡುತ್ತಿದೆ. ಇದಕ್ಕೆಲ್ಲಾ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆದರುವುದಿಲ್ಲ ಎಂದು ಹೇಳಿದರು.