ಆರೋಗ್ಯ

ಮಕ್ಕಳಲ್ಲಿ ಹೆಚ್ಚಾಯ್ತು ವೈರಲ್ ಸೋಂಕು..!

ವಾತಾವರಣ ಬದಲಾವಣೆಯ ಛಾಯೆಯು ಇಂದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಒಂದೆಡೆ ಬಿಸಿಲಿನ ತಾಪ, ಮತ್ತೊಂದೆಡೆ ಅನಿರೀಕ್ಷಿತ ಮಳೆಯ ಆಟ ಈ ಎರಡೂ ಮಕ್ಕಳ ದೇಹವನ್ನು ದುರ್ಬಲಗೊಳಿಸುತ್ತಿವೆ. ಜ್ವರ, ಕೆಮ್ಮು, ನಿಮೋನಿಯಾ ಮತ್ತು ವೈರಲ್ ಸೋಂಕುಗಳಿಂದ ಬಳಲುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

ಹೌದು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಈ ಸಮಸ್ಯೆಯ ತೀವ್ರತೆ ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿದಿನ 100ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದರೆ, 500ಕ್ಕೂ ಅಧಿಕ ಮಕ್ಕಳು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಕೆಲವು ತಿಂಗಳಿಂದ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ವೈರಲ್ ಜ್ವರದ ಭೀತಿಯು ಪೋಷಕರ ಮನಸ್ಸಿನಲ್ಲಿ ಕಾಡುತ್ತಿದೆ. ತಾಪಮಾನದ ಏರಿಳಿತ, ಗಾಳಿಯ ಗುಣಮಟ್ಟದ ಕುಸಿತ ಮತ್ತು ಆಗಾಗ ಮಳೆಯಿಂದಾಗಿ ವೈರಸ್‌ಗಳು ತೀವ್ರವಾಗಿ ಹರಡುತ್ತಿವೆ. ಶಿಶುಗಳು ಮತ್ತು ಸಣ್ಣ ಮಕ್ಕಳ ರೋಗನಿರೋಧಕ ಶಕ್ತಿಯು ಈ ಬದಲಾವಣೆಗಳನ್ನು ಎದುರಿಸಲು ಸಾಧ್ಯವಾಗದೆ, ಆಸ್ಪತ್ರೆಗಳಿಗೆ ಮಕ್ಕಳ ದಂಡೇ ಆಗಮಿಸುತ್ತಿದೆ. ಇದರಿಂದಾಗಿ ವೈದ್ಯರ ಮೇಲೆ ಒತ್ತಡ ಹೆಚ್ಚಿದ್ದು, ಆಸ್ಪತ್ರೆಯ ಸಿಬ್ಬಂದಿಯು ದಿನರಾತ್ರಿ ಶ್ರಮಿಸುತ್ತಿದ್ದಾರೆ.

ಈ ಮಧ್ಯೆ, ಕೋವಿಡ್-19ನ ಆತಂಕವು ಮತ್ತೆ ತಲೆ ಎತ್ತಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯು ಈ ಸವಾಲನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಕೋವಿಡ್ ಅವಧಿಯಲ್ಲಿ ಬಳಸಿದ ವಿಶೇಷ ವಾರ್ಡ್‌ಗಳನ್ನು ಮತ್ತೆ ಸಿದ್ಧಗೊಳಿಸಲು ಆಸ್ಪತ್ರೆ ಚಿಂತನೆ ನಡೆಸಿದೆ. ಕೋವಿಡ್ ಪ್ರಕರಣಗಳಿಗಾಗಿ ಪ್ರತ್ಯೇಕ ಬೆಡ್‌ಗಳನ್ನು ಮೀಸಲಿಡಲು ಯೋಜನೆ ರೂಪಿಸಲಾಗಿದ್ದು, ಆಸ್ಪತ್ರೆಯು ಹೈ-ಅಲರ್ಟ್ ಆಗಿದೆ.

ವಾತಾವರಣ ಬದಲಾವಣೆಯಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮವು ಕೇವಲ ಜ್ವರ ಅಥವಾ ಕೆಮ್ಮಿಗೆ ಸೀಮಿತವಾಗಿಲ್ಲ. ಶ್ವಾಸಕೋಶದ ತೊಂದರೆಗಳು, ನಿಮೋನಿಯಾ ಮತ್ತು ಇತರ ಉಸಿರಾಟದ ಸಮಸ್ಯೆಗಳು ಮಕ್ಕಳನ್ನು ಕಾಡುತ್ತಿವೆ. ತೇವಾಂಶ, ಧೂಳು ಮತ್ತು ಮಾಲಿನ್ಯದಿಂದಾಗಿ ಈ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. “ನಮ್ಮ ಮಗುವಿಗೆ ಜ್ವರ ಬಂದು ಒಂದು ವಾರವಾಯಿತು, ಆದರೆ ಚಿಕಿತ್ಸೆಯ ನಂತರವೂ ಪೂರ್ಣ ಗುಣಮುಖರಾಗಿಲ್ಲ,” ಎಂದು ಒಬ್ಬ ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

ವೈದ್ಯರು ಮಕ್ಕಳನ್ನು ಈ ರೋಗಗಳಿಂದ ರಕ್ಷಿಸಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದಾರೆ. ಮಕ್ಕಳಿಗೆ ಸಮತೋಲನ ಆಹಾರ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಅತ್ಯಗತ್ಯ. ಜೊತೆಗೆ, ಧೂಳು ಮತ್ತು ಮಾಲಿನ್ಯದಿಂದ ದೂರವಿರುವಂತೆ ಎಚ್ಚರಿಕೆ ವಹಿಸಬೇಕು. ಕೋವಿಡ್ ಆತಂಕದಿಂದಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂದುವರಿಯಬೇಕು ಎಂದು ತಜ್ಞರು ಒತ್ತಿ ಹೇಳಿದ್ದಾರೆ

Leave a Reply

Your email address will not be published. Required fields are marked *

Trending

Exit mobile version