ಬೆಂಗಳೂರು

ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವರ್ಗ, ಡಿಕೆಶಿ ಕೆಂಡಾಮಂಡಲ

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವರ್ಸಸ್ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಜಟಾಪಟಿ ಜೋರಾಗಿದ್ದು, ಜಲಸಂಪನ್ಮೂಲ ಇಲಾಖೆ ವರ್ಗಾವಣೆ ವಿಚಾರದಲ್ಲಿ ಮಹಾಸ್ಫೋಟ ಆಗಿದೆ. ಡಿಸಿಎಂ ಖಡಕ್ ವಾರ್ನಿಂಗ್ ಕೊಟ್ಟು ಮುಖ್ಯ ಕಾರ್ಯದರ್ಶಿಗೆ ಖಾರವಾದ ಪತ್ರ ಬರೆದಿದ್ದಾರೆ.

ಮೇ 9ರಂದು ಐವರು ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು. ನನ್ನ ಇಲಾಖೆಗೆ ಒಳಪಡುವ ವರ್ಗಾವಣೆ, ನೇಮಕಾತಿ, ಬೇರೆ ವಿಚಾರಗಳು ನನ್ನ ಗಮನಕ್ಕೆ ಬರಬೇಕು, ನನ್ನ ಪೂರ್ವಾನುಮತಿ ಬೇಕು. ಸರ್ಕಾರ ಬಂದ ಆರಂಭದಲ್ಲೇ ಟಿಪ್ಪಣಿ ಮೂಲಕ ಸೂಚಿಸಿದ್ದೆ ಎಂದು ಖಾರವಾಗಿ ಪತ್ರ ಬರೆದಿದ್ದಾರೆ.

ಡಿಕೆಶಿ ಪತ್ರದಲ್ಲಿ ಏನಿದೆ?
ನನ್ನ ಇಲಾಖೆಗೆ ಒಳಪಡುವ ವಿಭಾಗಗಳಿಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಆದೇಶಕ್ಕೆ ನನ್ನ ಅನುಮತಿ ಬೇಕು. ಡಿಪಿಎಆರ್‌ನಿಂದ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆದ ನಂತರವೇ ಹೊರಡಿಸಬೇಕು.ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿ ಮೂಲಕ ನಿಮಗೆ ತಿಳಿಸಲಾಗಿತ್ತು. ನಂತರ ಮುಖ್ಯ ಎಂಜಿನಿಯರ್‌ಗಳ ಕರ್ತವ್ಯಕ್ಕೆ ಸಂಬಂಧಿಸಿದ ಕಾರ್ಯವ್ಯಾಪ್ತಿಯನ್ನು ಜಲಸಂಪನ್ಮೂಲ ಇಲಾಖೆಯಿಂದ ಡಿಪಿಎಆರ್‌ಗೆ ವಹಿಸುವ ಕಡತದಲ್ಲಿಯೂ ಸೂಚನೆ ಕೊಡಲಾಗಿತ್ತು.

ನನ್ನ ಗಮನಕ್ಕೆ ತಂದು ನನ್ನ ಅನುಮೋದನೆ ಪಡೆದ ನಂತರವೇ ಡಿಪಿಎಆರ್‌ನಿಂದ ಆದೇಶ ಹೊರಡಿಸಬಹುದೆಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಆದರೆ ಮೇ 9ರಂದು ಹೊರಡಿಸಿದ ಆದೇಶದಲ್ಲಿ ನನ್ನ ಅನುಮೋದನೆ ಪಡೆಯದೇ ಕೆಲವು ಮುಖ್ಯ ಎಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.

ನನ್ನ ಸೂಚನೆಯನ್ನು ಕಡೆಗಣಿಸಿ ಆದೇಶ ಹೊರಡಿಸಿರುವುದನ್ನು ನಾನು ಆಕ್ಷೇಪಿಸುತ್ತಿದ್ದೇನೆ. ಆದ್ದರಿಂದ ಈ ಆದೇಶವನ್ನು ಕೂಡಲೇ ವಾಪಸು ಪಡೆಯಬೇಕು.ಇಂತಹ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆಯಬೇಕು.

Leave a Reply

Your email address will not be published. Required fields are marked *

Trending

Exit mobile version