ಬಿಬಿಎಂಪಿ
ವರ್ಗಾವಣೆಯಲ್ಲಿಯೂ ಬಿಬಿಎಂಪಿ ಭ್ರಷ್ಟಾಚಾರ – ಒಲ್ಲದವರಿಗೆ ಗೇಟ್ ಪಾಸ್, ಬೇಕಾದವರಿಗೆ ಸ್ಟೇಟಸ್!

ಬೆಂಗಳೂರು : ಬಿಬಿಎಂಪಿಯ ಹಲವು ಭ್ರಷ್ಟಾಚಾರಗಳ ಪೈಕಿ ಈಗ ಸಾರ್ವತ್ರಿಕ ವರ್ಗಾವಣೆಯಲ್ಲಿ ದಂಧೆ ನಡೆದಿರುವ ಆರೋಪ ಕೇಳಿಬಂದಿದೆ. ಯಾವುದೇ ಸೇವಾಜೇಷ್ಟತೆ, ಅರ್ಹತೆ, ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದಾರೆಂದು ಸ್ವತಃ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ.
ಒಂದೇ ಕಚೇರಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ವರ್ಗಾಯಿಸಬೇಕೆಂಬ ನಿಯಮವಿದ್ದರೂ ಇತ್ತೀಚೆಗೆ ನೇಮಕವಾದವರನ್ನು ವರ್ಗಾಯಿಸಿ ಹಳೆಯ ತಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದೆ. ಇದಕ್ಕೆ ಬಲಿಪಶುಗಳಾಗಿರುವ ಸಿಬ್ಬಂದಿಗಳು ವರ್ಗಾವಣೆಗೆ ಆಕ್ಷೇಪ ಸಲ್ಲಿಸಿದ್ದಾರೆ.
ನೇಮಕವಾಗಿರುವ ದಿನಾಂಕಕ್ಕೂ ಹಾಗೂ ಎಚ್‌ಆರ್‌ಎಂಎಸ್ ನಲ್ಲಿ ದಾಖಲಾಗಿರುವ ದಿನಾಂಕಕ್ಕೂ ವ್ಯತ್ಯಾಸವಿರುದು ದೋಷಪೂರಿತವೆಂದೆ ಸ್ವತಃ ಬಿಬಿಎಂಪಿ ಒಳಾಡಳಿತವೇ ಒಪ್ಪಿಕೊಂಡಿದೆ .ಆದರೂ ಸಹ ಎಚ್‌ಆರ್‌ಎಂಎಸ್ ದಾಖಲೆಗೆ ಅನುಸಾರವಾಗಿ ಬಿಬಿಎಂಪಿ ವರ್ಗಾವಣೆ ಮಾಡಿದೆ.
ಅಲ್ಲದೇ ಎಂಟೂ ವಲಯಗಳಲ್ಲಿಯೂ ವರ್ಗಾವಣೆಯಲ್ಲಿ ಪಕ್ಷಪಾತ ತೋರಲಾಗಿದ್ದು, ಕೇವಲ ಎರಡು ವಲಯಗಳ ಸಿಬ್ಬಂದಿಗೆ ಮಾತ್ರ ಈ ವರ್ಗಾವಣೆ ಜಾರಿಯಾಗಿದೆ. ಮಿಕ್ಕವರು ಹಣಬಲ, ಅಧಿಕಾರಿಗಳ ಬೆಂಬಲ, ಜಾತಿಬಲ ಗಳಿಂದ ಪಾರಾಗಿದ್ದಾರೆಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ನಿಯಮ ಪಾರದರ್ಶಕವಾಗಿರಲಿ, ಎಲ್ಲರಿಗೂ ಸಮಾನವಾಗಿ ಜಾರಿಯಾಗಲಿ ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ.