ದೇಶ
ಕೆಂಪುಕೋಟೆ ಧ್ವಜಾರೋಹಣಕ್ಕೆ ಆಯ್ಕೆಯಾಗಿರುವ ಆನೆಗೊಂದಿ ಪಂಚಾಯಿತಿ ಅಧ್ಯಕ್ಷೆ: ಹುಲಿಗೆಮ್ಮ ನಾಯಕ್ ರಾಷ್ಟ್ರ ಮಟ್ಟದ ಗೌರವಕ್ಕೆ ಪಾತ್ರ!

ಗಂಗಾವತಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲೆಯ ಆನೆಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ್ ಅವರನ್ನು ವಿಶೇಷ ಅತಿಥಿಯಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯದಿಂದ ಕೇವಲ ಏಳು ಪಂಚಾಯಿತಿ ಅಧ್ಯಕ್ಷರಿಗೆ ಮಾತ್ರ ಈ ಗೌರವ ದೊರೆಯಿದ್ದು, ಕಲ್ಯಾಣ ಕರ್ನಾಟಕದಿಂದ ಇಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಪ್ರತಿನಿಧಿಯಾಗಿರುವುದು ಇಲ್ಲಿ ವಿಶೇಷ.
ಈ ಆಯ್ಕೆ ನರೇಗಾ ಯೋಜನೆಯ ಸಕ್ರೀಯ ಅನುಷ್ಠಾನ, ಘನತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ನಿರ್ವಹಣೆ, ಮತ್ತು ಆನ್‌ಲೈನ್ ಹಾಜರಾತಿ ವ್ಯವಸ್ಥೆಯ ಯಶಸ್ಸು ಮುಂತಾದ ಮಾನದಂಡಗಳನ್ನು ಆಧರಿಸಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆನೆಗೊಂದಿ ಪಂಚಾಯಿತಿ ರಾಜ್ಯ ಮಟ್ಟದಲ್ಲೂ ಗಮನ ಸೆಳೆದಿದೆ.
ಈ ಹಿಂದೆ ಗಾಂಧಿಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿರುವ ಆನೆಗೊಂದಿ ಪಂಚಾಯಿತಿ ಈಗ ರಾಷ್ಟ್ರಮಟ್ಟದಲ್ಲಿಯೂ ತನ್ನ ಹೆಸರನ್ನು ದಾಖಲಿಸಿದೆ. “ನಮ್ಮ ಪಂಚಾಯಿತಿ ವಿವಿಧ ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ ಗೌರವ ನಮ್ಮ ಗ್ರಾಮಕ್ಕಾಗಿ, ಜಿಲ್ಲೆಯ ಗರಿಮೆಗೆ ಸಾಧನೆಯಾಗಿದೆ” ಎಂದು ಹುಲಿಗೆಮ್ಮ ನಾಯಕ್ ತಿಳಿಸಿದ್ದಾರೆ.