ಸಿನಿಮಾ
ಮಲಯಾಳಂ ನಟ ಶನ್ವಾಜ್ ನಿಧನ: ಸುಮಲತಾ ಅವರಿಂದ ಭಾವುಕ ಶ್ರದ್ಧಾಂಜಲಿ

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ದಂತಕಥೆ ಪ್ರೇಮ್ ನಜೀರ್ ಅವರ ಪುತ್ರ, ಹಿರಿಯ ನಟ ಅಬ್ದುಲ್ ಶನ್ವಾಜ್ (71) ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ನಿಶ್ಶಬ್ದವಾಗಿ ಬದುಕು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಶನ್ವಾಜ್ ಅವರ ನಿಧನಕ್ಕೆ ಹಲವು ಹಳೆಯ ಸಹನಟರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದು, ಹಿರಿಯ ನಟಿ ಹಾಗೂ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.
“ಅಬ್ದುಲ್ ಶನ್ವಾಜ್ ನಿಧನ ಸುದ್ದಿ ನನಗೆ ತುಂಬಾ ದುಃಖ ತಂದಿದೆ. ನಾವು 80ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಪ್ರೇಮ್ ನಜೀರ್ ಜೊತೆಗೂ ನಟನೆಗೆ ಅವಕಾಶ ಲಭ್ಯವಾಗಿತ್ತು. ಶೂಟಿಂಗ್ ಬಿಡುವಿನ ಸಮಯದಲ್ಲಿ ಶನ್ವಾಜ್ ಜತೆ ಬ್ಯಾಡ್ಮಿಂಟನ್ ಅಥವಾ ಕ್ಯಾರಮ್ ಆಡುತ್ತಿದ್ದೆವು. ಅವರು ಬಹಳ ಶ್ರದ್ಧಾ ಹಾಗೂ ಶಿಸ್ತಿನಿಂದ ಜೀವನ ನಡೆಸುತ್ತಿದ್ದವರು. ಪರಿಪೂರ್ಣ ವ್ಯಕ್ತಿತ್ವದ ಮಾದರಿ,” ಎಂದು ಸುಮಲತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಚಿತ್ರರಂಗ ಹಾಗೂ ಅಭಿಮಾನಿಗಳ ಹೃದಯದಲ್ಲಿ ಶನ್ವಾಜ್ ಅವರು ಅಮರರಾಗಿದ್ದು, ಅವರ ಕೊಡುಗೆ ಸದಾ ನೆನಪಾಗಿರಲಿದೆ.