Connect with us

ಬೆಂಗಳೂರು

ಪೋಥಿಸ್ ಶೋರೂಂಗಳ ಮೇಲೆ ಐಟಿ ದಾಳಿ: ತೆರಿಗೆ ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತೀವ್ರ ಕಾರ್ಯಾಚರಣೆ

Published

on

ಬೆಂಗಳೂರು: ನಗರದ ಜನಪ್ರಿಯ ಜವಳಿ ಶೋರೂಂ ಚೈನ್ ಪೋಥಿಸ್ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದೆ. ಗಾಂಧಿನಗರ ಮತ್ತು ಮೈಸೂರು ರಸ್ತೆಯ ಟೆಂಬರ್ ಲೇಔಟ್‌ನಲ್ಲಿರುವ ಪೋಥಿಸ್‌ನ ಎರಡು ಪ್ರಮುಖ ಶೋರೂಂಗಳ ಮೇಲೆ 50ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, ಆದಾಯ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗಾಂಧಿನಗರದ ಶೋರೂಂ ಮೇಲೆ 30 ಐಟಿ ಅಧಿಕಾರಿಗಳು, ಮೈಸೂರು ರಸ್ತೆಯ ಟೆಂಬರ್ ಲೇಔಟ್ ಶೋರೂಂ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ದಾಳಿಯ ವೇಳೆ ಶೋರೂಂಗಳ ಎಲ್ಲಾ ಆರ್ಥಿಕ ದಾಖಲೆಗಳು ಪರಿಶೀಲನೆಗೆ ಒಳಪಟ್ಟಿವೆ. ನಗದು ವಹಿವಾಟು, ಆನ್‌ಲೈನ್ ವಹಿವಾಟು, ಸ್ಟಾಕ್, ಬಟ್ಟೆಗಳ ಮೌಲ್ಯ ಮತ್ತು ಇತರ ಆರ್ಥಿಕ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ.

ಈ ದಾಳಿ ಬೆಂಗಳೂರು ಜವಳಿ ವಲಯದಲ್ಲಿ ಪ್ರಚಂಡ ಚರ್ಚೆಗೆ ಕಾರಣವಾಗಿದೆ.

ತಮಿಳುನಾಡಿನ ಉದ್ಯಮಿಗೆ ಸಂಬಂಧ

ಪೋಥಿಸ್ ಜವಳಿ ಶೋರೂಂ ತಮಿಳುನಾಡಿನ ಉದ್ಯಮಿಗೆ ಸೇರಿದ ಬ್ರಾಂಡ್ ಆಗಿದ್ದು, ಚೆನ್ನೈ, ಮಧುರೈ ಸೇರಿದಂತೆ ತಮಿಳುನಾಡಿನಲ್ಲಿ ಅತಿ ದೊಡ್ಡ ಜವಳಿ ವ್ಯವಹಾರವಾಗಿ ಬೆಳೆದಿದೆ. 1923 ರಲ್ಲಿ ಕೆ.ವಿ. ಪೊಥಿ ಮೂಪನಾರ್ ಅವರು ಸ್ಥಾಪಿತ ಮಾಡಿರುವ ಈ ಬ್ರಾಂಡ್, ನಂತರ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ತನ್ನ ವ್ಯಾಪಾರವನ್ನು ವಿಸ್ತರಿಸಿದೆ.

ಬೆಂಗಳೂರುನಲ್ಲಿ ಗಾಂಧಿನಗರ (ಕೆಂಪೇಗೌಡ ರಸ್ತೆ) ಮತ್ತು ಮೈಸೂರು ರಸ್ತೆ ಟೆಂಬರ್ ಲೇಔಟ್ನಲ್ಲಿ ಎರಡು ದೊಡ್ಡ ಶೋರೂಂಗಳನ್ನು ಹೊಂದಿದ್ದು, ರೇಷ್ಮೆ ಸೀರೆಗಳು, ಮಕ್ಕಳ ಬಟ್ಟೆಗಳು, ಪುರುಷರ ಉಡುಪುಗಳು ಮತ್ತು ಇತರ ಫ್ಯಾಷನ್ ಉತ್ಪನ್ನಗಳಲ್ಲಿ ಹೆಸರುವಾಸಿಯಾಗಿದೆ.

ಚೆನ್ನೈನಿಂದ ಆಗಮಿಸಿದ ಐಟಿ ತಂಡ

ಈ ದಾಳಿಯ ಸಂದರ್ಭದಲ್ಲಿ ತಮಿಳುನಾಡಿನಿಂದ ಆಗಮಿಸಿದ ಐಟಿ ಅಧಿಕಾರಿಗಳ ತಂಡವು ಕಾರ್ಯನಿರ್ವಹಿಸಿದೆ. ಪೋಥಿಸ್ ಭಾರೀ ಪ್ರಮಾಣದಲ್ಲಿ ಆದಾಯ ತೆರಿಗೆ ವಂಚನೆ ಮಾಡಿರುವ ಆರೋಪವು ತಮಿಳುನಾಡಿನಲ್ಲಿ ಈಗಾಗಲೇ ತನಿಖೆಗೆ ಒಳಗಾಗಿದೆ. 2016 ರಲ್ಲಿ ಕೂಡ ಪೋಥಿಸ್‌ನ ಪುದುಚೇರಿ ಮತ್ತು ಕೊಯಮತ್ತೂರು ಶಾಖೆಗಳ ಮೇಲೆ ಐಟಿ ದಾಳಿ ನಡೆದಿದ್ದು, ಆಗ 1 ಕೋಟಿ ರೂ. ನಗದು ವಶಪಡಿಸಿಕೊಂಡು ತನಿಖೆ ನಡೆಯಿತ್ತು.

ದೇಶ

ವಿಕಾಸ ದಶಕೋತ್ಸವ 2026: ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ

Published

on

ತುಮಕೂರು/ಗುಬ್ಬಿ: ಸಮಾನ ಮನಸ್ಕ ಮಾಧ್ಯಮ ಮಿತ್ರರ ಸಂಘಟನೆಯಾದ ‘ವಿಕಾಸ’ ಸಂಸ್ಥೆ ತನ್ನ ಯಶಸ್ವಿ ಹತ್ತು ವರ್ಷಗಳ ಪಯಣವನ್ನು ಸಂಭ್ರಮಿಸುವ ಅಂಗವಾಗಿ ‘ವಿಕಾಸ ದಶಕದ ಸಂಭ್ರಮ: 2026’ ಹಾಗೂ ತುಮಕೂರು ಜಿಲ್ಲಾ ಸಮಾವೇಶವನ್ನು ಆಯೋಜಿಸಿದೆ. ಮೇ 24, 2026ರ ಭಾನುವಾರ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಗುಬ್ಬಿಯ ಪ್ರಸಿದ್ಧ ಶ್ರೀ ಚಿದಂಬರ ಆಶ್ರಮದ ಆವರಣದಲ್ಲಿ ಈ ಭವ್ಯ ಸಮಾವೇಶ ನಡೆಯಲಿದೆ ಎಂದು ತುಮಕೂರು ಜಿಲ್ಲಾ ಸಂಚಾಲಕರಾದ ಭಾರತೀಶ ರಾವ್ ಹೊನ್ನಾಳಿ ಹಾಗೂ ಸುರೇಶ್ ವತ್ಸ ತಿಳಿಸಿದ್ದಾರೆ.

ಕಳೆದ ಒಂದು ದಶಕದಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ‘ವಿಕಾಸ’ ಸಂಸ್ಥೆ, ರಾಜ್ಯದ ವಿವಿಧ ಜಿಲ್ಲೆಗಳ ಮಾಧ್ಯಮ ಮಿತ್ರರನ್ನು ಒಂದೇ ವೇದಿಕೆಗೆ ತರಲು ಯಶಸ್ವಿಯಾಗಿದೆ. ಪತ್ರಿಕೋದ್ಯಮ, ಡಿಜಿಟಲ್ ಮೀಡಿಯಾ, ವ್ಯಂಗ್ಯಚಿತ್ರ, ವರದಿಗಾರಿಕೆ ಸೇರಿದಂತೆ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರನ್ನು ಒಗ್ಗೂಡಿಸಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂಸ್ಥೆಯ ವಿಶೇಷತೆ.

ಗಣ್ಯರಿಂದ ಉದ್ಘಾಟನೆ

ವಿಕಾಸದ ಗೌರವಾಧ್ಯಕ್ಷ ಬಿ.ಎಲ್. ಹನುಮಂತ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾವೇಶವನ್ನು ಖ್ಯಾತ ವೈದಿಕ ಜ್ಯೋತಿಷಿ ಹಾಗೂ ರಾಜಗುರು ದ್ವಾರಕಾನಾಥ ಗುರೂಜಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸೊಗಡು ಶಿವಣ್ಣ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಎಸ್.ಆರ್. ಶ್ರೀನಿವಾಸ್ (ವಾಸು), ವಿಜಯವಾಣಿ ಹಿರಿಯ ಉಪ ಪ್ರಧಾನ ಸಂಪಾದಕ ರಾಘವೇಂದ್ರ ಗಣಪತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ, ಖ್ಯಾತ ವಾಗ್ಮಿ ವೈ.ವಿ. ಗುಂಡುರಾವ್, ಆರ್ಟ್ ಆಫ್ ಲಿವಿಂಗ್ ಟ್ರಸ್ಟಿ ರಂಗನಾಥ ಪ್ರಸಾದ್, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ಹಾಗೂ ಗುಬ್ಬಿ ಶ್ರೀ ಚಿದಂಬರ ಆಶ್ರಮದ ಅಧ್ಯಕ್ಷ ಸಚ್ಚಿದಾನಂದ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ವಿಶೇಷ ಉಪನ್ಯಾಸ ಮತ್ತು ಚರ್ಚಾಗೋಷ್ಠಿ

ಸಮಾವೇಶದ ಅಂಗವಾಗಿ ‘ಆಧುನಿಕ ಸಮಾಜಕ್ಕೆ ಮನುಸ್ಮೃತಿಯ ಅವಶ್ಯಕತೆ’ ವಿಷಯದ ಕುರಿತು ಡಾ. ರಾಘವೇಂದ್ರ ಭಟ್ಟ ಉಪನ್ಯಾಸ ನೀಡಲಿದ್ದು, ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮಂಜುನಾಥ ಸ್ವಾಮಿ ಉಪಸ್ಥಿತರಿರಲಿದ್ದಾರೆ.

ಇನ್ನೊಂದು ವಿಶೇಷ ಚರ್ಚಾಗೋಷ್ಠಿಯಲ್ಲಿ ‘ಮಾಧ್ಯಮ ಕ್ಷೇತ್ರದ ಭವಿಷ್ಯ’ ಕುರಿತು ಡಾ. ಆಶಾ ಕೃಷ್ಣಸ್ವಾಮಿ, ಡಾ. ನಂದಿನಿ ಲಕ್ಷ್ಮೀಕಾಂತ್ ಹಾಗೂ ಉದಯ ಕಾಲ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕ ಪಿ. ರಾಜೇಂದ್ರ ವಿಚಾರ ಮಂಡನೆ ನಡೆಸಲಿದ್ದಾರೆ.

ಹಿರಿಯ ಪತ್ರಕರ್ತರಿಗೆ ಸನ್ಮಾನ

‘ನಮ್ಮ ಹಿರಿಯರು – ನಮ್ಮ ಹೆಮ್ಮೆ’ ಕಾರ್ಯಕ್ರಮದಡಿ ಹಿರಿಯ ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ, ಶ್ರೀಧರ್ ಕೋಮರವಳ್ಳಿ, ಅಂಕಣಕಾರ ತುರುವೇಕೆರೆ ಪ್ರಸಾದ್, ಹಿರಿಯ ಪತ್ರಕರ್ತರಾದ ಕರ್ಣಂ ರಮೇಶ್, ಸೊಗಡು ಸತ್ಯಣ್ಣ, ಆರ್. ಲಕ್ಷ್ಮಣ್, ಸಿ.ಟಿ. ಜೋಶಿ, ಜಿ.ಎಂ. ಜಗನ್ನಾಥ್, ಎಸ್.ಎನ್. ರಾಜಗೋಪಾಲ್ ಸೇರಿದಂತೆ ಹಲವು ಮಾಧ್ಯಮ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುತ್ತದೆ.

ವಿಕಾಸ ಸ್ಮಾರಕ ಪ್ರಶಸ್ತಿ ಪ್ರದಾನ

‘ವಿಕಾಸ ಸ್ಮಾರಕ ಪ್ರಶಸ್ತಿ – 2026’ಗೆ ಕೆ.ಬಿ. ಚಂದ್ರಮೌಳಿ, ಎಸ್.ಎನ್. ಪ್ರಸನ್ನ ಮೂರ್ತಿ, ವಾಸುದೇವ ಜಹಗೀರದಾರ್, ಕೃಷ್ಣಮೂರ್ತಿ ಚಿ.ಸು., ಸಿ.ಡಿ. ರವಿ, ಆರ್.ಎಸ್. ಅಯ್ಯರ್, ಎನ್.ಎಸ್. ಮಾರುತಿ ಪ್ರಸಾದ್, ಭಾನುಪ್ರಶಾಂತ, ಶ್ರೀನಿವಾಸ್ ಮೂರ್ತಿ, ಗುರುದತ್ತ ಹಾಗೂ ನಾಗಭೂಷಣ ಎಸ್. ಆಯ್ಕೆಯಾಗಿದ್ದಾರೆ.

ಇದೇ ವೇಳೆ ಲೇಖಕ ಪ್ರಕಾಶ್ ನಾಡಿಗ್ ಅವರಿಗೆ ‘ದಿ. ಸುಬ್ಬರಾಯರು ಸ್ಮಾರಕ ವಿಕಾಸ ಪ್ರಶಸ್ತಿ – 2025’ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎನ್. ವೆಂಕಟನಾರಾಯಣ, ವಾಮಾನಾಚಾರ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ. ಎಸ್. ಸುದರ್ಶನ್ ಉಪಸ್ಥಿತರಿರಲಿದ್ದಾರೆ.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಕಾರ್ಯಕ್ರಮದ ಯಶಸ್ಸಿಗಾಗಿ ವಿಕಾಸದ ಪ್ರಧಾನ ಸಂಚಾಲಕ ಬಿ.ವಿ. ಗೋಪಿನಾಥ್, ರಾಜ್ಯಾಧ್ಯಕ್ಷ ಶ್ರೀನಾಥ್ ಜೋಶಿ, ಹಿರಿಯ ಉಪಾಧ್ಯಕ್ಷ ಬಿ.ಎನ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್, ಖಜಾಂಚಿ ಬಿ.ಎನ್. ಮುರಳಿ ಪ್ರಸಾದ್, ಕಾರ್ಯದರ್ಶಿ ಗೋದಾವರಿ ಡಿ.ಎಸ್. ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

Continue Reading

ದೇಶ

Karnataka BJP President: ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದು ಬಹುತೇಕ ಖಚಿತ!

Published

on

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ (Karnataka BJP President) ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾಹಿತಿ ಪಕ್ಷದ ಆಂತರಿಕ ವಲಯದಿಂದ ಹೊರಬಿದ್ದಿದೆ. ಪಕ್ಷದ ಹಿರಿಯ ನಾಯಕರು ನಡೆಸಿದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಪರವಾಗಿ ಬಹುಮತದ ಬೆಂಬಲ ವ್ಯಕ್ತವಾಗಿದ್ದು, ಈ ವರದಿ ಇದೀಗ ಬಿಜೆಪಿ ಹೈಕಮಾಂಡ್‌ಗೆ ಸಲ್ಲಿಕೆಯಾಗಲಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತ ಗೊಂದಲ ಕಳೆದ ಕೆಲವು ವಾರಗಳಿಂದ ಪಕ್ಷದ ಒಳಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರ ಪಕ್ಷದ ಸಂಘಟನೆ ಹಾಗೂ ಹೋರಾಟದ ರಾಜಕಾರಣದ ಮೇಲೂ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದ ಹಿನ್ನೆಲೆ, ಗೊಂದಲ ನಿವಾರಣೆಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹ ನಡೆಸಿದ್ದರು.

ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಈ ವರದಿಯನ್ನು ದೆಹಲಿಗೆ ಕಳುಹಿಸುವ ಸಾಧ್ಯತೆ ಇದೆ. ಸೋಮವಾರದ ನಂತರ ಅಧಿಕೃತವಾಗಿ ರಾಷ್ಟ್ರೀಯ ನಾಯಕತ್ವದ ಮುಂದೆ ವರದಿ ಮಂಡನೆಯಾಗಲಿದ್ದು, ಅದರ ಬಳಿಕ ರಾಜ್ಯಾಧ್ಯಕ್ಷರ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ವಿಜಯೇಂದ್ರ ಪರ ಬಹುಮತ ಬೆಂಬಲ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. “ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೇ? ಬದಲಿಸಿದರೆ ಯಾರಿಗೆ ಅವಕಾಶ ನೀಡಬೇಕು?” ಎಂಬ ಪ್ರಶ್ನೆಗಳ ಆಧಾರದಲ್ಲಿ ನಾಯಕರು ಹಾಗೂ ಶಾಸಕರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.

ಕೆಲವರು ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೂ, ಬಹುತೇಕ ನಾಯಕರು ಮತ್ತು ಸಂಘಟನಾ ವಲಯ ವಿಜಯೇಂದ್ರ ಪರವೇ ಅಭಿಪ್ರಾಯ ನೀಡಿರುವುದು ಅವರ ಸ್ಥಾನ ಇನ್ನಷ್ಟು ಬಲಪಡಿಸಿದೆ.

ದೆಹಲಿಯಲ್ಲಿ ಮಹತ್ವದ ಚರ್ಚೆ ಸಾಧ್ಯತೆ

ಶಿವಪ್ರಕಾಶ್ ಹಾಗೂ ಬೈಜಯಂತ್ ಪಾಂಡಾ ಈಗಾಗಲೇ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸಂಘಟನೆ, ಮುಂಬರುವ ರಾಜಕೀಯ ಹೋರಾಟಗಳು ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರಮಣಕಾರಿ ಹೋರಾಟ ಸಂಘಟಿಸಲು ಮುಂದಿನ ದಿನಗಳಲ್ಲಿ ಹೊಸ ತಂತ್ರ ರೂಪಿಸುವ ಸಾಧ್ಯತೆ ಇದ್ದು, ವಿಜಯೇಂದ್ರ ಮುಂದುವರಿದರೆ ಪಕ್ಷದ ಸಂಘಟನೆಗೆ ಮತ್ತಷ್ಟು ಚೈತನ್ಯ ಸಿಗಲಿದೆ ಎನ್ನುವ ಲೆಕ್ಕಾಚಾರವೂ ಪಕ್ಷದೊಳಗೆ ಕೇಳಿಬರುತ್ತಿದೆ.

Continue Reading

ದೇಶ

ಶಿವಲಿಂಗ ಅಪವಿತ್ರ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್

Published

on

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (State Govt) ಮತ್ತೊಮ್ಮೆ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಮುಂದಾಗಿದೆ ಎಂಬ ಆರೋಪಗಳ ನಡುವೆಯೇ, ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಪ್ರಸಿದ್ಧ ಲಾಡ್ಲೆ ಮುಶಾಕ್ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಕೇಸ್‌ಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರದ ಕ್ರಮ ಈಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2022ರ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಲವು ಸ್ಥಳೀಯ ಮುಖಂಡರು ಹಾಗೂ ಯುವಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.

2022ರ ಶಿವರಾತ್ರಿ ಸಂದರ್ಭದಲ್ಲಿ ಆಳಂದ ಪಟ್ಟಣದ ಲಾಡ್ಲೆ ಮುಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಭಾರೀ ಉದ್ವಿಗ್ನತೆ ಉಂಟಾಗಿತ್ತು. ಶಿವಲಿಂಗದ ಮೇಲೆ ಕಿಡಿಗೇಡಿಗಳು ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.

ಈ ಹಿನ್ನೆಲೆಯಲ್ಲಿ ಶಿವಲಿಂಗ ಶುದ್ಧೀಕರಣ ಹಾಗೂ ಮಹಾಪೂಜೆಗೆ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹಲವರು ಸ್ಥಳಕ್ಕೆ ತೆರಳಿದ್ದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ನಡೆಸಿ ಅಧಿಕಾರಿಗಳು ಹಾಗೂ ನಾಯಕರ ವಾಹನಗಳ ಮೇಲೆ ದಾಳಿ ಮಾಡಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂಬ ಆರೋಪದಡಿ ಪೊಲೀಸರು ಹಲವು ಎಫ್‌ಐಆರ್ ದಾಖಲಿಸಿದ್ದರು.

ಈಗ ಆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 13 ಪ್ರಮುಖ ಪ್ರಕರಣಗಳನ್ನು ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಕಾನೂನು ಸುವ್ಯವಸ್ಥೆ ಹಾಳು ಮಾಡಿದವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ” ಎಂದು ಆರೋಪಿಸಿವೆ.

ಇನ್ನೊಂದೆಡೆ, ಸರ್ಕಾರದ ನಿರ್ಧಾರವನ್ನು ಬೆಂಬಲಿಸುವವರು “ಸಾಮಾಜಿಕ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಂಡ ತೀರ್ಮಾನ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಿರ್ಧಾರ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.

Continue Reading

Trending