ಬೆಂಗಳೂರು
ಇಂದು ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆ ಇನ್ನೆಲೆ ಹಲವೆಡೆ ಮದ್ಯ ನಿಷೇಧ!
ಈಶ್ವರ ಮತ್ತು ಪಾರ್ವತಿಯರ ಪುತ್ರ ಗಣೇಶನನ್ನು ಭೂಮಿಗೆ ಸ್ವಾಗತಿಸುವ ಸಲುವಾಗಿ ಗಣೇಶನನ್ನು ಕೂರಿಸಲಾಗುತ್ತದೆ. ಅದೇ ರೀತಿ ಆತನ್ನು ಪೂಜಿಸಿ, ಪುನಃ ಕೈಲಾಸಕ್ಕೆ ಗಣೇಶನನ್ನು ಕಳುಹಿಸುವ ಪ್ರಯುಕ್ತ ಮನೆಯಲ್ಲಿಟ್ಟು ಪೂಜಿಸಿದ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಗಣೇಶನನ್ನು ಕೂರಿಸುವಾಗ ಹೇಗೆ ಪ್ರತಿಷ್ಠಾಪನಾ ವಿಧಿ – ವಿಧಾನಗಳನ್ನು ಅನುಸರಿಸಲಾಗುತ್ತದೆಯೋ ಹಾಗೇ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವಾಗಲೂ ಕೆಲವೊಂದು ವಿಸರ್ಜನಾ ವಿಧಿ – ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಗಣೇಶನ ಪ್ರತಿಷ್ಠಾಪನೆ, ಪೂಜೆ ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವ ಗಣೇಶನ ಮೂರ್ತಿಗಳ ವಿಸರ್ಜನೆಗೆ ಇರುತ್ತದೆ.ದೇಶದಲ್ಲೆಡೆ ಗಣೇಶ ಚತುರ್ಥಿ ವಿಜೃಂಭಣೆಯಿಂದ ನಡೆಸಲಾಗುತ್ತಿದೆ.ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.ಇಂದು ಗಣೇಶ ವಿಸರ್ಜನೆ ಹಿನ್ನೆಲೆ ಬೆಂಗಳೂರಿನ ಕೆಲವೆಡೆ ಮದ್ಯ ನಿಷೇಧ ಮಾಡಲಾಗಿದೆ. ಬೆಂಗಳೂರು ಕೇಂದ್ರ, ಉತ್ತರ, ಪೂರ್ವ ಹಾಗೂ ಈಶಾನ್ಯ ವಿಭಾಗದಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ, ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6ಗಂಟೆ ಯಿಂದ ನಾಳೆ (ಸೆ.22ರ) ಬೆಳಗ್ಗೆ 6 ಗಂಟೆಯ ವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಪೂರ್ವ ವಿಭಾಗದ ಡಿ.ಜೆ.ಹಳ್ಳಿ, ಭಾರತಿನಗರ, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಬೆಳಗ್ಗೆ 6ರಿಂದ ಸೆ.24ರ ಬೆಳಗ್ಗೆ 6ವರೆಗೆ ಮದ್ಯ ನಿಷೇಧಿಸಲಾಗಿದೆ. ಪೂರ್ವ ವಿಭಾಗದ ಕಮರ್ಷಿಯಲ್ ಸ್ಟ್ರೀಟ್, ಹಲಸೂರು, ಶಿವಾಜಿನಗರದಲ್ಲಿ ಸೆಪ್ಟೆಂಬರ್ 24ರ ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ವರೆಗೆ ಮದ್ಯ ನಿಷೇಧ ಮಾಡಲಾಗಿದೆ.ಇನ್ನುಳಿದಂತೆ ಬೆಂಗಳೂರಿನ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ, ಯಲಹಂಕ, ಕೊಡಿಗೆಹಳ್ಳಿ, ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಸಂಜೆ 6ರಿಂದ ಸೆ.25ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ನಿಷೇಧ ಮಾಡಲಾಗಿದೆ. ಇನ್ನು ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಸೆ.30ರ ಬೆಳಗ್ಗೆ 6ರಿಂದ ಅಕ್ಟೋಬರ್ 1ರ ಬೆಳಗ್ಗೆ 6ರವರೆಗೆ ಮದ್ಯ ನಿಷೇಧಿಸಲಾಗಿದೆ.
ದೇಶ
SIR ಎಂದರೇನು? ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕರ್ನಾಟಕದಲ್ಲಿ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ (ECI) ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸುತ್ತಿದೆ.
ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ಸತ್ತವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ ಸುಮಾರು 91.61% ಮತದಾರರ ವಿವರಗಳು ಈಗಾಗಲೇ ಮ್ಯಾಪ್ ಆಗಿವೆ. ಉಳಿದ ಮತದಾರರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸಾವಿರಾರು ಅಧಿಕಾರಿಗಳು ಹಾಗೂ 5,950 BLOಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರಿಗೆ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯುವ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿದೆ.
ಇದೀಗ SIR ಪ್ರಕ್ರಿಯೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಕೆಲವು ರಾಜಕೀಯ ಪಕ್ಷಗಳು ಮನೆ-ಮನೆ ಪರಿಶೀಲನೆಯ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ವಿತರಣೆ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಿವೆ. ಆದರೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನೂ ಮ್ಯಾಪ್ ಆಗದ ಮತದಾರರ ಹೆಸರುಗಳು ತಕ್ಷಣವೇ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ನಿಖರವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ದೇಶ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅವ್ಯವಸ್ಥೆ? ಬಿಎಲ್‌ಒಗಳ ಮೇಲೆ ಒತ್ತಡ ಆರೋಪಿಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಸ್ಥೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲೆ ಒತ್ತಡ ಹೇರುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಬದಲು ಕಲ್ಯಾಣ ಮಂಟಪ, ಚೌಲ್ಟ್ರಿ ಹಾಗೂ ಮಸೀದಿಗಳಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿದರು. ಕೆಲವು ಶಾಸಕರ ಕಚೇರಿಗಳಲ್ಲೇ ಬಿಎಲ್‌ಒಗಳನ್ನು ಕೂರಿಸಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ, ಈ ಕುರಿತು ಸಾಕ್ಷ್ಯ ಸಮೇತ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿತರಿಸಲಾಗುತ್ತಿರುವ ಅರ್ಜಿಗಳ ಮೇಲೆ ಕಾಂಗ್ರೆಸ್ ಮುಖಂಡರ ಫೋಟೋಗಳು ಮುದ್ರಣಗೊಂಡಿರುವ ವಿಚಾರವನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿರುವುದಾಗಿ ವಿಜಯೇಂದ್ರ ಹೇಳಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವ ಎಲ್ಲೆಡೆ ಮರುಪರಿಷ್ಕರಣೆ ನಡೆಸುವಂತೆ ಆಗ್ರಹಿಸಿದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಮನೆಗಳ ಸಂಖ್ಯೆ ಹೆಚ್ಚಳವಾಗದೆ ಮತದಾರರ ಸಂಖ್ಯೆ ಮಾತ್ರ ಹೆಚ್ಚಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ಅಕ್ರಮ ಮತದಾರರನ್ನು ತಡೆಯಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಒತ್ತಾಯಿಸಿದರು.
ಇದೇ ವೇಳೆ, ಬರ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ನಡೆಸುವುದು ಸೂಕ್ತ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
ಅಪರಾಧ
ಸಿಲಿಕಾನ್ ಸಿಟಿಯಲ್ಲಿ ಶಾಕ್: ಫ್ಲ್ಯಾಟ್‌ನಲ್ಲಿ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಹೆಬ್ಬಾವುಗಳು ಪತ್ತೆ
ಬೆಂಗಳೂರು: ಸಿಲಿಕಾನ್ ಸಿಟಿಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಅಕ್ರಮವಾಗಿ ಹೆಬ್ಬಾವುಗಳನ್ನು ಸಾಕಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಹಲವು ಹೆಬ್ಬಾವುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಮನಿಸಿದ್ದ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ದೂರಿನ ಮೇರೆಗೆ ಅಧಿಕಾರಿಗಳು ಶುಕ್ರವಾರ ರಾತ್ರಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿದಾಗ, ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಹೆಬ್ಬಾವುಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಪರಿಶೀಲನೆ ವೇಳೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಹೆಬ್ಬಾವುಗಳನ್ನು ಇರಿಸಲಾಗಿದ್ದು, ಅವುಗಳನ್ನು ಅಪಾಯಕಾರಿ ಪರಿಸ್ಥಿತಿಯಲ್ಲಿ ವಸತಿ ಪ್ರದೇಶದೊಳಗೆ ಸಾಕಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಫ್ಲ್ಯಾಟ್‌ನಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆಬ್ಬಾವುಗಳನ್ನು ಇಟ್ಟುಕೊಂಡಿದ್ದ ಪ್ರಮುಖ ವ್ಯಕ್ತಿ ಆಂಧ್ರಪ್ರದೇಶ ಮೂಲದವನಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non-Cognizable Report) ದಾಖಲಾಗಿದೆ.
ಈ ಹೆಬ್ಬಾವುಗಳನ್ನು ಎಲ್ಲಿಂದ ತರಲಾಗಿತ್ತು, ವನ್ಯಜೀವಿಗಳ ಅಕ್ರಮ ಸಾಗಣೆ ಅಥವಾ ಮಾರಾಟ ಜಾಲದೊಂದಿಗೆ ಯಾವುದೇ ಸಂಬಂಧವಿದೆಯೇ ಹಾಗೂ ಅವುಗಳನ್ನು ಅಪಾರ್ಟ್‌ಮೆಂಟ್‌ನಲ್ಲಿ ಇಟ್ಟುಕೊಳ್ಳಲು ಉದ್ದೇಶವೇನು ಎಂಬ ಕುರಿತು ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ಅನುಮತಿಯಿಲ್ಲದೆ ಸಾಕುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
