ದೇಶ
ಹಿಮಾಚಲದಲ್ಲಿ ಅಪರೂಪದ ಕ್ಯಾಸ್ಪಿಯನ್ ಕೋಬ್ರಾ ಪತ್ತೆ! ತಜ್ಞರಿಗೂ ಅಚ್ಚರಿ
ಚಂಬಾ (ಹಿಮಾಚಲ ಪ್ರದೇಶ), ಜು.2: ವನ್ಯಜೀವಿ ಲೋಕದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಮೇಲಿನ ಅರಣ್ಯ ಪ್ರದೇಶದಲ್ಲಿ ಅತ್ಯಂತ ಅಪರೂಪದ ಕ್ಯಾಸ್ಪಿಯನ್ ಕೋಬ್ರಾ (Caspian Cobra) ಹಾವು ಪತ್ತೆಯಾಗಿದೆ. ಸಾಮಾನ್ಯವಾಗಿ ಮಧ್ಯ ಏಷ್ಯಾದ ದೇಶಗಳಲ್ಲಿ ಮಾತ್ರ ಕಂಡುಬರುವ ಈ ವಿಷಕಾರಿ ಹಾವು ಹಿಮಾಲಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ತಜ್ಞರ ಗಮನ ಸೆಳೆದಿದೆ.
ಅರಣ್ಯ ರಕ್ಷಕ ಗಜೇಂದ್ರ ವರ್ಮಾ ಅವರು ದಿನನಿತ್ಯದ ಗಸ್ತಿನ ವೇಳೆ ಈ ಅಪರೂಪದ ಹಾವನ್ನು ಗುರುತಿಸಿ ಅದರ ವಿಡಿಯೋ ಸೆರೆಹಿಡಿದಿದ್ದರು. ನಂತರ ತಜ್ಞರು ನಡೆಸಿದ ಪರಿಶೀಲನೆಯ ಬಳಿಕ ಇದು ಕ್ಯಾಸ್ಪಿಯನ್ ಕೋಬ್ರಾ (Naja oxiana) ಎಂಬುದು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಹಾವು ತನ್ನ ದೊಡ್ಡ ಹೆಡೆ, ಗಟ್ಟಿಮುಟ್ಟಾದ ದೇಹ ಹಾಗೂ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯ ಭಾರತೀಯ ನಾಗರಹಾವಿಗಿಂತ ಇದರ ವಿಷದ ತೀವ್ರತೆ ಮತ್ತು ವರ್ತನೆ ಭಿನ್ನವಾಗಿದ್ದು, ವಿಶ್ವದ ಅತ್ಯಂತ ವಿಷಕಾರಿ ಕೋಬ್ರಾ ಪ್ರಭೇದಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಸುಮಾರು 20 ವರ್ಷಗಳಿಂದ ಚಂಬಾ ಪ್ರದೇಶದ ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿರುವ ಗಜೇಂದ್ರ ವರ್ಮಾ, ಈ ಹಿಂದೆ ಇಂತಹ ಹಾವನ್ನು ನೋಡಿರಲಿಲ್ಲ ಎಂದು ತಿಳಿಸಿದ್ದಾರೆ. ಹಾವಿನ ವಿಶಿಷ್ಟ ರೂಪ ಹಾಗೂ ವರ್ತನೆ ಗಮನಿಸಿದ ಅವರು ತಕ್ಷಣವೇ ವಿಡಿಯೋ ದಾಖಲಿಸಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕ್ಯಾಸ್ಪಿಯನ್ ಕೋಬ್ರಾ ಸಾಮಾನ್ಯವಾಗಿ ಅಫ್ಘಾನಿಸ್ತಾನ, ಇರಾನ್, ತುರ್ಕಮೆನಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಹಾಗೂ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಹೀಗಾಗಿ ಹಿಮಾಲಯ ಪ್ರದೇಶದಲ್ಲಿ ಇದರ ಉಪಸ್ಥಿತಿ ಅತ್ಯಂತ ಅಪರೂಪದ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಹಾವು ಚಂಬಾ ಪ್ರದೇಶಕ್ಕೆ ಹೇಗೆ ಬಂದಿದೆ? ಇಲ್ಲಿಯೇ ಶಾಶ್ವತವಾಗಿ ನೆಲೆಸಿದೆಯೇ ಅಥವಾ ವಿಶೇಷ ಸಂದರ್ಭಗಳಿಂದ ಬಂದಿದೆಯೇ ಎಂಬ ಕುರಿತು ವೈಜ್ಞಾನಿಕ ಅಧ್ಯಯನ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಕ್ಷೇತ್ರ ಸಮೀಕ್ಷೆ ಹಾಗೂ ಸಂಶೋಧನೆ ನಡೆಸುವ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಯೋಜಿಸಲಾಗಿದೆ.
ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (IUCN) ಕೆಂಪು ಪಟ್ಟಿಯಲ್ಲಿ ‘Near Threatened’ (ಅಪಾಯಕ್ಕೆ ಹತ್ತಿರದಲ್ಲಿರುವ ಜೀವಿ) ಎಂದು ಕ್ಯಾಸ್ಪಿಯನ್ ಕೋಬ್ರಾವನ್ನು ವರ್ಗೀಕರಿಸಲಾಗಿದೆ. ಈ ಪತ್ತೆ ಭಾರತದ ಜೀವವೈವಿಧ್ಯ ಅಧ್ಯಯನಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ.
ದೇಶ
‘ರೈತರ ಮೇಲೆ ದಬ್ಬಾಳಿಕೆ ಬೇಡ, ಸಮಾಲೋಚನೆ ನಡೆಸಿ’ – ಸಿಎಂ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ
ಮೈಸೂರು, ಜು. 2: ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರ ಅಭಿಪ್ರಾಯವನ್ನು ಕಡೆಗಣಿಸಿ ಸರ್ಕಾರ ಆತುರಾತುರವಾಗಿ ಯೋಜನೆ ಜಾರಿಗೆ ಮುಂದಾಗಿದ್ದು, ಇದು ರೈತರ ಮೇಲೆ ದಬ್ಬಾಳಿಕೆ ನಡೆಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ತಾವು ಹಾಗೂ ಪ್ರತಿಪಕ್ಷ ನಾಯಕರು ಯೋಜನೆ ವ್ಯಾಪ್ತಿಯ ಪ್ರದೇಶಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು. ಸರ್ಕಾರ ಶೇ.80ರಷ್ಟು ರೈತರು ಬಿಡದಿ ಟೌನ್‌ಶಿಪ್‌ಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳುತ್ತಿರುವುದು ವಾಸ್ತವಕ್ಕೆ ದೂರವಾಗಿದೆ. ನಿಜವಾಗಿ ಶೇ.70ರಿಂದ 80ರಷ್ಟು ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಕೃಷಿ ಚಟುವಟಿಕೆಗೆ ಪೂರಕವಾಗಿರುವ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಲ್ಲಿ ಸಹಜವಾಗಿಯೇ ಆಕ್ರೋಶ ಉಂಟಾಗಿದೆ. ಮುಖ್ಯಮಂತ್ರಿ ರೈತರ ಮೇಲೆ ಒತ್ತಡ ಹೇರುವ ಬದಲು ಅವರೊಂದಿಗೆ ಸಮಾಲೋಚನೆ ನಡೆಸಬೇಕು. ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಅವರು ಒತ್ತಾಯಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ವಿಷಯವನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಮಗ್ರ ಚರ್ಚೆ ನಡೆಸಲಾಗುವುದು ಎಂದು ವಿಜಯೇಂದ್ರ ಹೇಳಿದರು. ಸರ್ಕಾರ ತಾನು ಕೈಗೊಂಡಿರುವ ಕ್ರಮವೇ ಸರಿಯೆಂಬ ಧೋರಣೆ ಅನುಸರಿಸುತ್ತಿದ್ದು, ಈ ವಿಚಾರದಲ್ಲಿ ಸದನದಲ್ಲಿ ಸರ್ಕಾರವನ್ನು ಪ್ರಶ್ನಿಸಲಾಗುವುದು ಎಂದರು.
ಇದೇ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಗೃಹಲಕ್ಷ್ಮಿ ಯೋಜನೆಯಲ್ಲಿನ ಅಕ್ರಮಗಳ ಆರೋಪ ಹಾಗೂ ರೈತರ ಸಮಸ್ಯೆಗಳ ಕುರಿತು ಬಿಜೆಪಿ ರಾಜ್ಯಾದ್ಯಂತ ಹೋರಾಟ ರೂಪಿಸಲಿದೆ ಎಂದು ಘೋಷಿಸಿದರು.
ಡಿ.ವಿ. ಸದಾನಂದ ಗೌಡ ಅವರ ಆಡಿಯೋ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ಆಡಿಯೋದಲ್ಲಿರುವ ಧ್ವನಿ ನನ್ನದು ಅಲ್ಲ ಎಂದು ಸದಾನಂದ ಗೌಡರೇ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ಎಲ್ಲವನ್ನೂ ಹೇಳಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.
ಪಕ್ಷದ ಕೆಲ ನಾಯಕರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಬಿಕ್ಕಟ್ಟುಗಳು ಅಂತ್ಯಗೊಂಡಿದ್ದು, ಕಾರ್ಯಕರ್ತರಿಗೆ ಧೈರ್ಯ ತುಂಬಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ದೇಶ
EPF ಹೊಸ ನಿಯಮ ಜಾರಿ: ವರ್ಷಕ್ಕೆ 2 ಬಾರಿ ಮಾತ್ರ PF ಹಣ ವಿತ್‌ಡ್ರಾ; ಖಾತೆಯಲ್ಲಿ 25% ಮೊತ್ತ ಕಡ್ಡಾಯ!
ನವದೆಹಲಿ, ಜು. 3: ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಾಗೂ ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ (EDLI) ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಹೊಸ ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ-2026 (EPF-2026), ಉದ್ಯೋಗಿಗಳ ಪಿಂಚಣಿ ಯೋಜನೆ-2026 (EPS-2026) ಹಾಗೂ ಉದ್ಯೋಗಿಗಳ ಠೇವಣಿ ವಿಮೆ ಯೋಜನೆ-2026 (EDLI-2026) ಜಾರಿಗೆ ಸಂಬಂಧಿಸಿದ ಅಧಿಕೃತ ಗಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಪಿಎಫ್ ಖಾತೆಯಿಂದ ಹಣ ಹಿಂಪಡೆಯುವ ಪ್ರಕ್ರಿಯೆಗೆ ಹಲವು ಹೊಸ ಷರತ್ತುಗಳನ್ನು ವಿಧಿಸಲಾಗಿದೆ. ಇನ್ಮುಂದೆ ಉದ್ಯೋಗಿಗಳು ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಭಾಗಶಃ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ. ಇದುವರೆಗೆ ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಹಲವು ಬಾರಿ ಹಣ ಪಡೆಯಲು ಅವಕಾಶವಿದ್ದರೂ, ಹೊಸ ನಿಯಮದಿಂದ ಅದಕ್ಕೆ ಮಿತಿ ವಿಧಿಸಲಾಗಿದೆ.
ಆದರೆ, ಮನೆ ಖರೀದಿ ಅಥವಾ ಮನೆ ದುರಸ್ತಿಗೆ ಹಣ ಹಿಂಪಡೆಯುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಈ ಹಿಂದೆ ಜೀವನಾವಧಿಯಲ್ಲಿ ಎರಡು ಬಾರಿ ಮಾತ್ರ ಅವಕಾಶವಿದ್ದರೆ, ಈಗ ಅದನ್ನು ಐದು ಬಾರಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಉನ್ನತ ಶಿಕ್ಷಣಕ್ಕಾಗಿ ಸೇವಾ ಅವಧಿಯಲ್ಲಿ 10 ಬಾರಿ ಹಣ ಹಿಂಪಡೆಯುವ ಹಳೆಯ ನಿಯಮ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
ಹೊಸ EPF-2026 ನಿಯಮದ ಮತ್ತೊಂದು ಪ್ರಮುಖ ಅಂಶವೆಂದರೆ, ಹಣ ಹಿಂಪಡೆಯುವ ಬಳಿಕ ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತ ಕಡ್ಡಾಯವಾಗಿ ಉಳಿದಿರಬೇಕು. ಉದ್ಯೋಗಿಯ ಪಾಲು, ಉದ್ಯೋಗದಾತನ ಪಾಲು ಹಾಗೂ ಬಡ್ಡಿ ಸೇರಿ ಈ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಸಂಪೂರ್ಣ ಪಿಎಫ್ ಮೊತ್ತವನ್ನು ಖಾಲಿ ಮಾಡಲು ಅವಕಾಶ ಇರುವುದಿಲ್ಲ.
ಇದಲ್ಲದೆ, ಉದ್ಯೋಗಿಯು ಕನಿಷ್ಠ ಒಂದು ವರ್ಷದ ಸೇವೆ ಪೂರ್ಣಗೊಳಿಸಿದ ಬಳಿಕವೇ ಭಾಗಶಃ ಪಿಎಫ್ ಹಣ ಹಿಂಪಡೆಯಲು ಅರ್ಹನಾಗುತ್ತಾನೆ. ಕೆಲಸಕ್ಕೆ ಸೇರಿದ ತಕ್ಷಣ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
ಕೇಂದ್ರ ಸರ್ಕಾರದ ಪ್ರಕಾರ, ಈ ಹೊಸ ನಿಯಮಗಳ ಮುಖ್ಯ ಉದ್ದೇಶ ಉದ್ಯೋಗಿಗಳ ನಿವೃತ್ತಿ ಉಳಿತಾಯವನ್ನು ಸುರಕ್ಷಿತವಾಗಿಡುವುದು ಹಾಗೂ ಪಿಎಫ್ ಹಣದ ಅನಗತ್ಯ ಬಳಕೆಯನ್ನು ನಿಯಂತ್ರಿಸುವುದಾಗಿದೆ.
ದೇಶ
‘ನಾನು ಬಂಡೆ ಒಡೆದು ವಿದೇಶಕ್ಕೆ ಸಾಗಿಸಿಲ್ಲ’ – ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ
ಬೆಂಗಳೂರು, ಜು. 3: ಬಿಡದಿ ಟೌನ್‌ಶಿಪ್ ಯೋಜನೆ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹಾಗೂ ರಾಮನಗರ ಕಲ್ಲು ಕ್ವಾರಿ ದುರಂತದ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಮತ್ತು ಕನಕಪುರ ಅಭಿವೃದ್ಧಿ ಕುರಿತು ಸಿಎಂ ನೀಡಿರುವ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ರಾಮನಗರ ನಿಯೋಗವು ₹770 ಕೋಟಿ ಅಭಿವೃದ್ಧಿ ಅನುದಾನ ಕುರಿತು ಚರ್ಚಿಸಲು ಬಂದಿತ್ತು. ಆದರೆ, ಸಿಎಂ ಬಿಡದಿ ಟೌನ್‌ಶಿಪ್ ಬಗ್ಗೆ ಭಾಷಣ ಮಾಡಿದ್ದು ಆಶ್ಚರ್ಯಕರ ಎಂದು ಕುಮಾರಸ್ವಾಮಿ ಹೇಳಿದರು. “ಅವರು ನಾಲ್ಕು ತಾಲೂಕುಗಳ ಮುಖ್ಯಮಂತ್ರಿಯಾ ಅಥವಾ ಇಡೀ ಕರ್ನಾಟಕದ ಮುಖ್ಯಮಂತ್ರಿಯಾ?” ಎಂದು ಪ್ರಶ್ನಿಸಿದರು.
ರಾಮನಗರ ಹಾಗೂ ಕನಕಪುರದ ಅಭಿವೃದ್ಧಿಯ ಇತಿಹಾಸವನ್ನು ಉಲ್ಲೇಖಿಸಿದ ಅವರು, “ನಾನು ರಾಜಕೀಯ ಪ್ರವೇಶಿಸಿದಾಗ ಆ ಭಾಗದಲ್ಲಿ ಸರಿಯಾದ ರಸ್ತೆಗಳಿರಲಿಲ್ಲ, ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ಇತ್ತು. ಕನಕಪುರದ ಜನರ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮಾಡಿದ್ದೇನೆ. ನಾನು ಬಂಡೆ ಒಡೆದು ವಿದೇಶಕ್ಕೆ ಸಾಗಿಸಿಲ್ಲ” ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಅವರು, ತಾವು ಅಧಿಕಾರದಲ್ಲಿದ್ದಾಗಲೇ ಈ ಯೋಜನೆಯನ್ನು ಕೈಬಿಡುವುದಾಗಿ ಘೋಷಿಸಿದ್ದೆ. ನಂತರ ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಕಾರಂತ ಬಡಾವಣೆ ಯೋಜನೆಗಳನ್ನು ಘೋಷಿಸಲಾಗಿತ್ತು ಎಂದು ಹೇಳಿದರು. ಅರ್ಕಾವತಿ ಬಡಾವಣೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರದಲ್ಲಿಯೂ ಸರ್ಕಾರವನ್ನು ಟೀಕಿಸಿದ ಕುಮಾರಸ್ವಾಮಿ, ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ ಮನೆಮನೆಗೆ ಜಾತಿ ಮತ್ತು ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಇದು 2028ರ ಚುನಾವಣೆಯ ರಾಜಕೀಯ ತಂತ್ರದ ಭಾಗವಾಗಿರಬಹುದು ಎಂದು ಅವರು ಹೇಳಿದರು.
ಇದೇ ವೇಳೆ, ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಕಲ್ಲು ಕ್ವಾರಿ ದುರಂತ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮ ಗಣಿಗಾರಿಕೆ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣವಾಗಿದೆ. ಸರ್ಕಾರ ಪ್ರಕರಣದ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
-
ದೇಶ21 hours agoಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಶೀಘ್ರ? ಡಿಕೆ ಶಿವಕುಮಾರ್ ನೀಡಿದ ಮಹತ್ವದ ಸುಳಿವು
-
ಅಪರಾಧ8 hours agoಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅವಘಡ; ಅಕ್ರಮ ಕ್ವಾರೆಯಲ್ಲಿ 7 ಕಾರ್ಮಿಕರು ಬಲಿ
-
ಬೆಂಗಳೂರು21 hours agoಆಯೋಗದ ನೋಟಿಸ್ಗೂ ಕ್ಯಾರೆ ಇಲ್ಲ! ಬೆಂಗಳೂರು ಉತ್ತರ ಎಸಿಗೆ ಭಾರೀ ದಂಡ
-
ದೇಶ5 hours agoSIR ಪರಿಷ್ಕರಣೆ: 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಚುನಾವಣಾ ಆಯೋಗದ ಮಹತ್ವದ ಸ್ಪಷ್ಟನೆ
-
ದೇಶ22 hours agoಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಎಸ್.ಟಿ. ಸೋಮಶೇಖರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
-
ದೇಶ2 hours agoEPF ಹೊಸ ನಿಯಮ ಜಾರಿ: ವರ್ಷಕ್ಕೆ 2 ಬಾರಿ ಮಾತ್ರ PF ಹಣ ವಿತ್‌ಡ್ರಾ; ಖಾತೆಯಲ್ಲಿ 25% ಮೊತ್ತ ಕಡ್ಡಾಯ!
-
ದೇಶ2 hours ago‘ರೈತರ ಮೇಲೆ ದಬ್ಬಾಳಿಕೆ ಬೇಡ, ಸಮಾಲೋಚನೆ ನಡೆಸಿ’ – ಸಿಎಂ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ
-
ದೇಶ8 hours agoಕರ್ನಾಟಕದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ! ಇನ್ನು ಆಸ್ಪತ್ರೆಯಲ್ಲಿ ಫೈಲ್ ಹೊತ್ತು ಅಲೆಯುವ ಅಗತ್ಯವಿಲ್ಲ
